‘ಜೊಮೆ ಜೋ ಪಠಾಣ್’ ಹಾಡಿಗೆ ಶಾರೂಖ್ ಖಾನ್ ಜೊತೆಗೆ ಭರ್ಜರಿ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ, ವಿಡಿಯೋ
ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದ ವೇಳೆ ಜೊಮೆ ಜೋ ಪಠಾಣ್ ಹಾಡಿಗೆ ಶಾರೂಖ್ ಖಾನ್ ಜೊತೆಗೆ ವಿರಾಟ್ ಕೊಹ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.

2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಶನಿವಾರ (ಮಾರ್ಚ್ 22) ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಗಾಯಕಿ ಶ್ರೇಯಾ ಘೋಷಾಲ್ ಅವರು ತಮ್ಮ ಸುಮಧುರ ಕಂಠದೊಂದಿಗೆ ನೆರೆದಿದ್ದ ಪೇಕ್ಷಕರನ್ನು ರಂಜಿಸಿದರು. ಬಳಿಕ ಸೊಂಟ ಬಳುಕಿಸಿದ ನಟಿ ದಿಶಾ ಪಟಾನಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಪ್ರೇಕ್ಷರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಕರಣ್ ಅಲುಜಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಬೆರಗುಗೊಳಿಸಿದರು.
ಆದಾಗ್ಯೂ, ಶಾರುಕ್ ಖಾನ್ ಅವರೊಂದಿಗೆ ವಿರಾಟ್ ಕೊಹ್ಲಿ ಮತ್ತು ರಿಂಕು ಸಿಂಗ್ ಹಾಕಿದ ಸ್ಟೆಪ್ಸ್ ಹಾಕಿದ್ದು ಎಲ್ಲರನ್ನೂ ಮನಸೂರೆಗೊಳಿಸಿತು. ಬಾಲಿವುಡ್ ದಂತಕಥೆ ಮತ್ತು ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಅವರು ಉದ್ಘಾಟನಾ ಸಮಾರಂಭದ ನಿರೂಪಣೆ ಹೊತ್ತಿದ್ದರು. ಈ ವೇಳೆ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ಫಿನಿಷರ್ ರಿಂಕು ಸಿಂಗ್ ಅವರನ್ನು ವೇದಿಕೆಗೆ ಸ್ವಾಗತಿಸಿದರು. ಕೊಹ್ಲಿ ಅವರ ಕ್ರಿಕೆಟ್ ವೃತ್ತಿಜೀವನವನ್ನು ಕೊಂಡಾಡಿದ ಬಾಲಿವುಡ್ ಬಾದ್‌ಶಾ, 18 ವರ್ಷ ಒಂದೇ ತಂಡದ ಪರ ಆಡುತ್ತಿರುವುದನ್ನು ಶ್ಲಾಘಿಸಿದರು.
ಕೊಹ್ಲಿ ಕೊಹ್ಲಿ ಎಂದು ಕೂಗಿದ ಶಾರೂಖ್
ಶಾರುಖ್ ವೇದಿಕೆಗೆ ಕೊಹ್ಲಿಯನ್ನು ಆಹ್ವಾನಿಸಿದಾಗ ರೋಮಾಂಚಕಾರಿ ಕ್ಷಣ ಸೃಷ್ಟಿಯಾಯಿತು. ಇಡೀ ಮೈದಾನವೇ ಕೊಹ್ಲಿ ಕೊಹ್ಲಿ ಎಂದು ಕೂಗಿತು. ಅವರೊಂದಿಗೆ ಬಾಲಿವುಡ್ ಬಾದ್‌ಶಾ ಕೂಡ 'ಕೊಹ್ಲಿ, ಕೊಹ್ಲಿ' ಎಂದು ಘೋಷಣೆ ಕೂಗಿದಾಗ ಆರ್‌ಸಿಬಿ ಬ್ಯಾಟ್ಸ್‌ಮನ್ ನಾಚಿದರು. ಕೊಹ್ಲಿ ಜೊತೆ ಸ್ವಲ್ಪ ಹೊತ್ತು ಮಾತನಾಡಿದ ನಂತರ, ಶಾರುಖ್ ಕೆಕೆಆರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರನ್ನು ವೇದಿಕೆಗೆ ಸೇರಲು ಕೇಳಿಕೊಂಡರು.
ವೇದಿಕೆಯಲ್ಲಿದ್ದ ಕೊಹ್ಲಿ ಮತ್ತು ರಿಂಕುರನ್ನು ತಮ್ಮ ಹಾಡುಗಳಿಗೆ ಡ್ಯಾನ್ಸ್ ಮಾಡುವಂತೆ ಶಾರುಖ್ ಕೋರಿದರು. ಈ ಪ್ರದರ್ಶನ ಅಭಿಮಾನಿಗಳ ಹೃದಯ ಗೆದ್ದಿತು. ರಿಂಕು ಸಿಂಗ್ 'ಡಂಕಿ' ಚಿತ್ರದ 'ಲುಟ್ ಪುಟ್ ಗಯಾ' ಹಾಡಿಗೆ ಕಿಂಗ್ ಖಾನ್ ಜೊತೆಗೆ ನೃತ್ಯ ಮಾಡಿದರೆ, ಕೊಹ್ಲಿ ಬ್ಲಾಕ್‌ಬಸ್ಟರ್ 'ಪಠಾಣ್' ಚಿತ್ರದ 'ಜೊಮೆ ಜೋ ಪಠಾಣ್' ಹಾಡಿಗೆ ತಮ್ಮ ನೃತ್ಯ ಪ್ರದರ್ಶನ ನೀಡಿದರು. ಆದರೆ ರಿಂಕು ನೃತ್ಯ ಮಾಡುತ್ತಿದ್ದ ಅವಧಿಯಲ್ಲಿ ಪಕ್ಕದಲ್ಲಿದ್ದ ಕೊಹ್ಲಿ ಬಿದ್ದು ಬಿದ್ದು ನಗುತ್ತಿದ್ದರು. ಇಬ್ಬರು ಪ್ರತ್ಯೇಕವಾಗಿ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ವೇದಿಕೆಯಲ್ಲಿ ಮೂವರ ತಮಾಷೆಯು ಪ್ರೇಕ್ಷಕರನ್ನು ಮನರಂಜನೆಗೊಳಿಸಿತು.
ನಿರೂಪಕನಾದ ಶಾರುಖ್
ತಮ್ಮ ವಿಶಿಷ್ಟ ಶೈಲಿಯಲ್ಲಿ ಶಾರುಖ್, ಉತ್ಸಾಹಭರಿತ ಭಾಷಣದೊಂದಿಗೆ ಐಪಿಎಲ್ 2025ರ ಉತ್ಸವ ಉದ್ಘಾಟಿಸಿದರು. ಜಾಗತಿಕವಾಗಿ ಕ್ರಿಕೆಟ್ ಅಭಿಮಾನಿಗಳ ಅಚಲ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ ಅವರು ಸಂಜೆ ಪ್ರದರ್ಶನ ನೀಡಿದ ಪ್ರದರ್ಶನಕಾರರನ್ನು ಪರಿಚಯಿಸುತ್ತಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. " ಪಾರ್ಟಿ ಪಠಾಣ್ ಕೆ ಘರ್ ಪೆ ರಖೋಗೆ ತೋ ಮೆಹ್ಮಾನ್ ನವಾಜಿ ಕೆ ಲಿಯೇ ಪಠಾಣ್ ಖುದ್ ಆಯೇಗಾ ಔರ್ ಪಟಾಕೆ ಭಿ ಲಾಯೇಗಾ" ಎಂಬ ಶಾರುಖ್ ಅವರ ಸಾಂಪ್ರದಾಯಿಕ ಸಾಲು ಜನಸಮೂಹವನ್ನು ಉನ್ಮಾದಕ್ಕೆ ದೂಡಿತು.
