ಅನುಚಿತ ವರ್ತನೆಯೊಂದಿಗೆ ರಚಿನ್ ರವೀಂದ್ರಗೆ ಸೆಂಡ್ ಆಫ್ ಕೊಟ್ಟ ಕೊಹ್ಲಿ; ವಿರಾಟ್ ವಿಚಿತ್ರ ನಡೆಯ ವಿಡಿಯೋ ವೈರಲ್
Virat Kohli : ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸಿಎಸ್ಕೆ ಪರ ರಚಿನ್ ರವೀಂದ್ರ ಔಟಾಗುತ್ತಿದ್ದಂತೆ ಬೌಂಡರಿ ಲೈನ್ನಲ್ಲಿದ್ದ ವಿರಾಟ್ ಕೊಹ್ಲಿ, ತಮ್ಮ ಬೆರಳು ತೋರಿಸುತ್ತಾ ಎಕ್ಸ್-ರೇಟೆಡ್ ಸೆಂಡ್-ಆಫ್ ಕೊಟ್ಟಿದ್ದಾರೆ. ಕೊಹ್ಲಿ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2024) ಭರ್ಜರಿ ಚಾಲನೆ ಸಿಕ್ಕಿದೆ. ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK vs RCB) 6 ವಿಕೆಟ್ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಜರುಗಿದ ಈ ಪಂದ್ಯದಲ್ಲಿ ಆರ್ಸಿಬಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಕೋಪಗೊಂಡು ಅಸಭ್ಯವಾಗಿ ನಿಂದಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿತು. ಆದರೆ ಈ ಗುರಿ ಹಿಂಬಾಲಿಸಿದ ಸಿಎಸ್ಕೆ 18.4 ಓವರ್ಗಳಲ್ಲಿ ಗೆದ್ದು ಬೀಗಿತು. ಐಪಿಎಲ್ಗೆ ಪದಾರ್ಪಣೆ ಮಾಡಿದ ನ್ಯೂಜಿಲೆಂಡ್ ತಂಡದ ಯುವ ಆಟಗಾರ ರಚಿನ್ ರವೀಂದ್ರ (Rachin Ravindra) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು.
ಆದರೆ ಚೆನ್ನೈ ಚೇಸಿಂಗ್ ವೇಳೆ ರಚಿನ್ ರವೀಂದ್ರ ಔಟಾದಾಗ ಸಂದರ್ಭ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಕೊಟ್ಟಿರುವ ರಿಯಾಕ್ಷನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಚಿನ್ ಔಟ್ ಆಗುವುದಕ್ಕೂ ಮುನ್ನ ನಾಯಕ ಋತುರಾಜ್, 15 ಎಸೆತಗಳಲ್ಲಿ 15 ರನ್ ಗಳಿಸಿ ಹೊರ ನಡೆದರು. ಆ ಬಳಿಕ ರಚಿನ್ 15 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ ಸಿಡಿಸಿ 247ರ ಸ್ಟ್ರೈಕ್ರೇಟ್ನಲ್ಲಿ 37 ರನ್ ಗಳಿಸಿದರು.
ರಚಿನ್ ರವೀಂದ್ರರನ್ನು ನಿಂದಿಸಿದ ವಿರಾಟ್ ಕೊಹ್ಲಿ
ಸಿಎಸ್ಕೆ ತಂಡದ ಪರ ವೇಗವಾಗಿ ಸ್ಕೋರ್ ಮಾಡುತ್ತಿದ್ದ ರಚಿನ್ ರವೀಂದ್ರ ಅವರು, 7ನೇ ಓವರ್ ಅಂತ್ಯಕ್ಕೆ ವಿಕೆಟ್ ಒಪ್ಪಿಸಿದರು. ಆರ್ಸಿಬಿ ಸ್ಪಿನ್ನರ್ ಕರಣ್ ಶರ್ಮಾ ಅವರ ಬೌಲಿಂಗ್ನಲ್ಲಿ ಸ್ಲಾಗ್ ಸ್ವೀಪ್ನಲ್ಲಿ ರಜತ್ ಪಾಟೀದಾರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪ್ರಮುಖ ವಿಕೆಟ್ ಪಡೆಯುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ತಂಡವು ಸಂಭ್ರಮದಲ್ಲಿ ಮುಳುಗಿತ್ತು. ಆದರೆ ವಿರಾಟ್ ಕೊಹ್ಲಿಆಕ್ರಮಣಕಾರಿ ಪ್ರತಿಕ್ರಿಯಿಸಿದರು.
ರಚಿನ್ ಔಟಾಗುತ್ತಿದ್ದಂತೆ ಬೌಂಡರಿ ಲೈನ್ನಲ್ಲಿದ್ದ ವಿರಾಟ್, ತಮ್ಮ ಬೆರಳು ತೋರಿಸುತ್ತಾ ಎಕ್ಸ್-ರೇಟೆಡ್ ಸೆಂಡ್-ಆಫ್ ಕೊಟ್ಟಿದ್ದಾರೆ. ಸಭ್ಯವಲ್ಲದ ಭಾಷೆ ಬಳಕೆ ವರ್ತನೆಯೊಂದಿಗೆ ಮೈದಾನದಿಂದ ಹೊರಕಳಿಸಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಹಾಗೆಯೇ ಹೋಯ್ತಾ ಇರು, ಹೋಯ್ತಾ ಇರು ಎಂಬ ಅರ್ಥವನ್ನೂ ನೀಡುತ್ತದೆ. ಇದು ವಿವಾದಕ್ಕೆ ಕಾರಣವಾಗಿದೆ.
ವಿಡಿಯೋ ಇಲ್ಲಿದೆ ನೋಡಿ
ಸ್ಫೋಟಕ ಆಟದ ಮೂಲಕ ರಚಿನ್ ಪಂದ್ಯದ ಚಿತ್ರಣ ಬದಲಿಸಿದ ಕಾರಣ ಕೋಪಗೊಂಡ ಕೊಹ್ಲಿ, ಈ ರೀತಿ ರಿಯಾಕ್ಷನ್ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಕೊಹ್ಲಿ ಅತಿರೇಕದ ವರ್ತನೆಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಈ ದುರ್ವತೆನೆಯನ್ನು ಬಿಟ್ಟು ಆಟ ಆಡಿ. ಆರ್ಸಿಬಿ ಸೋಲಲು ಪ್ರಮುಖ ಇದೇ ಎಂದು ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಈ ಪಂದ್ಯದಲ್ಲಿ 20 ಎಸೆತಗಳಲ್ಲಿ 21 ರನ್ ಗಳಿಸಿದರು.
ಆರ್ಸಿಬಿ ಮುಂದ್ಯ ಯಾವಾಗ?
ತನ್ನ ಮೊದಲ ಪಂದ್ಯದಲ್ಲಿ ಸೋತಿರುವ ಆರ್ಸಿಬಿ, ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮಾರ್ಚ್ 25ರಂದು ರಾತ್ರಿ 7.30ಕ್ಕೆ ಈ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನವು ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಜಿಯೋ ಸಿನಿಮಾ ಅಪ್ಲಿಕೇಷನ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.