ಆತ ಯಾವತ್ತಿದ್ದರೂ ಬಿಗ್ ಮ್ಯಾಚ್ ಪ್ಲೇಯರ್; ವಿರಾಟ್ ಕೊಹ್ಲಿ ವೈಫಲ್ಯಕ್ಕೆ ಕಾರಣ ತಿಳಿಸಿದ ನಾಸೀರ್ ಹುಸೇನ್
Nasser Hussain on Virat Kohli : 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸತತ ವೈಫಲ್ಯ ಅನುಭವಿಸಲು ಕಾರಣ ಏನೆಂಬುದನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸೀರ್ ಹುಸೇನ್ ಅವರು ಬಹಿರಂಗಪಡಿಸಿದ್ದಾರೆ.
ಹಾಲಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (T20 World Cup 2024) ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ ಅದಕ್ಕೆ ಕಾರಣ ಏನೆಂಬುದನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸೀರ್ ಹುಸೇನ್ (Nasser Hussain) ಅವರು ಬಹಿರಂಗಪಡಿಸಿದ್ದಾರೆ. ಕಳೆದ ಟಿ20 ವಿಶ್ವಕಪ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಕೊಹ್ಲಿ, ಈ ಬಾರಿ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೂ ತಾನು ನೂರರ ಗಡಿ ದಾಟಿಲ್ಲ. ಫೈನಲ್ ಪಂದ್ಯಕ್ಕೂ ಹುಸೇನ್, ಕೊಹ್ಲಿ ಕುರಿತು ಮಾತನಾಡಿದ್ದಾರೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್ಸಿಬಿ ತಂಡದ ಪರ 5 ಅರ್ಧಶತಕ, 1 ಶತಕ ಸಹಿತ 741 ರನ್ ಗಳಿಸಿದ್ದರು. 61.75ರ ಬ್ಯಾಟಿಂಗ್ ಸರಾಸರಿ ಹೊಂದಿದ್ದರು. ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ, ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು. ಉತ್ತಮ ಲಯದಲ್ಲಿದ್ದ ಕಾರಣ ಟಿ20 ವಿಶ್ವಕಪ್ನಲ್ಲೂ ಆರಂಭಿಕರಾಗಿ ಆಡುತ್ತಿದ್ದಾರೆ. ಆದರೆ ಸತತ ವೈಫಲ್ಯ ಅನುಭವಿಸುತ್ತಿದ್ದು, ಟೀಕೆಗೆ ಗುರಿಯಾಗಿದ್ದಾರೆ.
ಕೊಹ್ಲಿ ಗಳಿಸಿರುವುದೇ 75 ರನ್
ನ್ಯೂಯಾರ್ಕ್ನಲ್ಲಿ ನಡೆದ ಲೀಗ್ ಹಂತದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ನಲ್ಲಿ ನಡೆದ ಸೂಪರ್-8 ಪಂದ್ಯಗಳಲ್ಲಿ ಫಾರ್ಮ್ಗೆ ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಲ್ಲೂ ಕೂಡ ವೈಫಲ್ಯ ಅನುಭವಿಸಿದರು. ಅವರು ಆಡಿದ ಏಳು ಇನಿಂಗ್ಸ್‌ಗಳಿಂದಲೂ ಗಳಿಸಿದ್ದೇ ಕೇವಲ 75 ರನ್. ಈ ಪೈಕಿ 2 ಬಾರಿ ಡಕೌಟ್ ಆಗಿದ್ದಾರೆ. ಸೆಮಿಫೈನಲ್ನಲ್ಲೂ ಕೊಹ್ಲಿ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಕೊಹ್ಲಿ ವೈಫಲ್ಯಕ್ಕೆ ಕಾರಣ ತಿಳಿಸಿದ ನಾಸಿರ್ ಹುಸೇನ್
ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಲು ಕಾರಣ ಏನೆಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಾಸಿರ್ ಹುಸೇನ್ ವಿವರಿಸಿದ್ದಾರೆ. ಅಮೆರಿಕ ಪಿಚ್ಗಳಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನಡೆಸಲು ಕಠಿಣವಾಗಿತ್ತು. ಇದು ಕೊಹ್ಲಿ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಯುಎಸ್ಎ ಪಿಚ್ಗಳಲ್ಲಿ ಫಾರ್ಮ್ ಕಳೆದಕೊಂಡರು ಎಂದು ಹೇಳಿದ್ದಾರೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಭರ್ಜರಿ ಫಾರ್ಮ್ನಲ್ಲಿದ್ದರು. ಅದೇ ಲಯದೊಂದಿಗೆ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದರು. ಆದರೆ, ನ್ಯೂಯಾರ್ಕ್ ಪಿಚ್ನಲ್ಲಿ ರನ್ ಗಳಿಸಲು ಸಾಧ್ಯವಾಗಿಲ್ಲ. ಆಟದ ರಿಧಮ್ ಕಳೆದುಕೊಂಡರು. ಇದು ಸಾಕಷ್ಟು ಸಂಕಷ್ಟಕ್ಕೆ ತಂದೊಡ್ಡಿತು. ಪ್ರಸ್ತುತ ಅವರು ನೆಟ್ಸ್ನಲ್ಲಿ ಸತತ ಅಭ್ಯಾಸ ನಡೆಸುತ್ತಿದ್ದಾರೆ. ಫಾರ್ಮ್ಗೆ ಮರಳಲು ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
'ಕೊಹ್ಲಿ ಬಿಗ್ ಮ್ಯಾಚ್ ಪ್ಲೇಯರ್'
ಹಾರ್ದಿಕ್ ಪಾಂಡ್ಯ ಅವರಂತೆ ವಿರಾಟ್ ಕೊಹ್ಲಿ ಅವರು ಪವರ್ ಹಿಟ್ಟರ್ ಅಲ್ಲ. ಮೈದಾನಕ್ಕೆ ಬರುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ನಡೆಸುವ ಆಟಗಾರನಲ್ಲ. ಕೊಹ್ಲಿ ಕ್ರೀಸ್ನಲ್ಲಿ ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಅವರು ಮೂರ್ನಾಲ್ಕು ಓವರ್ ಆಡಿದ ನಂತರವೇ ರಿಧಮ್ಗೆ ಬರಲಿದ್ದಾರೆ. ಪ್ರಸ್ತುತ ಈಗ ಒತ್ತಡ ಇದೆ. ಅವರು ಬಿಗ್ ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾವನ್ನು ಕೊಹ್ಲಿ ಗೆಲ್ಲಿಸಿಕೊಡಲಿದ್ದಾರೆ. ಆತ ಬಿಗ್ ಮ್ಯಾಚ್ ಪ್ಲೇಯರ್. ಈಗ ಪ್ರಮುಖ ಪಂದ್ಯಗಳಲ್ಲಿ ಕೊಹ್ಲಿ ಆಡಬೇಕು ಎಂದು ತಿಳಿಸಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ