ವಿರಾಟ್ ನನ್ನ ಮಗನಿದ್ದಂತೆ, ನಾನೇಕೆ ಕೆಟ್ಟದ್ದು ಬಯಸಲಿ; ಕೊಹ್ಲಿ vs ಗಂಗೂಲಿ ವಿವಾದ ಬಗ್ಗೆ ಮಾಜಿ ಸೆಲೆಕ್ಟರ್ ಯೂ ಟರ್ನ್
Chetan Sharma on Virat Kohli : ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ಅವರ 'ಅಹಂ ಘರ್ಷಣೆ' ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಬಿಸಿಸಿಐ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಉಲ್ಟಾ ಹೊಡೆದಿದ್ದಾರೆ.
ನವದೆಹಲಿ: ಒಂದು ವರ್ಷದ ಹಿಂದೆ ಕುಖ್ಯಾತ ಸ್ಟಿಂಗ್ ಆಪರೇಷನ್ನಲ್ಲಿ ಸಿಕ್ಕಿಬಿದ್ದಿದ್ದ ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಚೇತನ್ ಶರ್ಮಾ (Chetan Sharma) ಅವರು ವಿರಾಟ್ ಕೊಹ್ಲಿ (Virat Kohli) ವಿರುದ್ಧ ಮಾತನಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಂದು ಕೊಹ್ಲಿ ಮತ್ತು ಸೌರವ್ ಗಂಗೂಲಿ (Sourav Ganguly) ನಡುವಿನ ಆಂತರಿಕ ಜಗಳ, ಅಹಂ ಘರ್ಷಣೆ ಕುರಿತು ಬಹಿರಂಗಪಡಿಸಿ ಕ್ರಿಕೆಟ್ ವಲಯದಲ್ಲಿ ಕಿಚ್ಚು ಹೆಚ್ಚಿಸಿದ್ದರು. ಆದರೀಗ ಚೇತನ್ ಶರ್ಮಾ ಆ ಹೇಳಿಕೆಗೆ ಯೂ ಟರ್ನ್ ಹೊಡೆದಿದ್ದಾರೆ.
ಕೊಹ್ಲಿ ನನ್ನ ಮಗನಿದ್ದಂತೆ ಎಂದ ಚೇತನ್ ಶರ್ಮಾ
ಒಂದು ವರ್ಷದ ನಂತರ ಚೇತನ್ ಶರ್ಮಾ, ಕೊಹ್ಲಿ ಬಗ್ಗೆ ನೀಡಿದ್ದ ಹೇಳಿಕೆಗಳಿಂದ ಯು-ಟರ್ನ್ ಹೊಡೆದಿದ್ದಾರೆ. ಭಾರತದ ಮಾಜಿ ನಾಯಕನನ್ನು ತಮ್ಮ ಸ್ವಂತ ಮಗ ಎಂದು ಸಂಬೋಧಿಸಿದ್ದಾರೆ. ತಾನೆಂದೂ ವಿರಾಟ್ಗೆ ಕೆಟ್ಟದ್ದನ್ನು ಬಯಸಲಿಲ್ಲ ಅಥವಾ ಅವರ ಬಗ್ಗೆ ಯಾವುದೇ ಕೆಟ್ಟ ಭಾವನೆಗಳನ್ನು ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಾನು ವಿರಾಟ್ ಅವರು ಮತ್ತೆ ಆಟಕ್ಕೆ ಮರಳುವುದನ್ನು ಕಾತರದಿಂದ ಕಾಯುತ್ತಿದ್ದೇನೆ. ಅವರ ಬ್ಯಾಟ್ನಿಂದ ಶತಕಗಳ ಸರಮಾಲೆಯನ್ನು ಹಾಕಿಕೊಳ್ಳುವುದನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಸೆಲೆಕ್ಟರ್ ಯೂ ಟರ್ನ್ ಹೊಡೆದಿದ್ದಾರೆ.
ವಿರಾಟ್ ಕೊಹ್ಲಿ ನನ್ನ ಮಗನಿದ್ದಂತೆ. ಅವರು ತುಂಬಾ ಚಿಕ್ಕವರು. ನಾನು ಅವರ ಬಗ್ಗೆ ಕೆಟ್ಟದ್ದನ್ನು ಏಕೆ ಹೇಳುತ್ತೇನೆ? ಅವರ ಯೋಗಕ್ಷೇಮಕ್ಕಾಗಿ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ಅವರು ದಂತಕಥೆಯಾಗಿರುವುದನ್ನು ನೋಡುವುದು ನನಗೆ ಅಪಾರ ಹೆಮ್ಮೆಯಾಗುತ್ತದೆ. ತಂಡಕ್ಕೆ ಮರಳಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳ ಗಡಿಯನ್ನು ತಲುಪುತ್ತಾರೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಭಾರತೀಯ ಕ್ರಿಕೆಟ್ನ ಐಕಾನ್. ತಂಡಕ್ಕೆ ಮರಳುವುದನ್ನು ಕಾಯುತ್ತಿದ್ದೇನೆ ಎಂದು ನ್ಯೂಸ್ 24ಗೆ ತಿಳಿಸಿದರು.
ಅಂದು ಚೇತನ್ ಶರ್ಮಾ ಹೇಳಿದ್ದೇನು?
ಗಂಗೂಲಿ ಮತ್ತು ಕೊಹ್ಲಿ ನಡುವಿನ ಮುನಿಸಿನ ಕುರಿತು ಚೇತನ್ ಶರ್ಮಾ ಮಾತನಾಡಿದ್ದರು. ವೈಟ್‌ಬಾಲ್ ಕ್ರಿಕೆಟ್ನಲ್ಲಿ ನಾಯಕತ್ವದಿಂದ ತನ್ನನ್ನು ತೆಗೆದುಹಾಕಿದ್ದೇ ಗಂಗೂಲಿ ಎಂದು ಕೊಹ್ಲಿ ಭಾವಿಸಿದ್ದರು. ಆದರೆ ಅದು ತಪ್ಪು. ಆ ಮೂಲಕ ಗಂಗೂಲಿ ವಿರುದ್ಧ ಮಾನಹಾನಿ ಮಾಡಲು ವಿರಾಟ್ ಯತ್ನಿಸಿದ್ದರು. ಇದು ಕೆಲಸ ಮಾಡಲಿಲ್ಲ ಎಂದು ಚೇತನ್ ಶರ್ಮಾ, ರಹಸ್ಯ ಕಾರ್ಯಾಚರಣೆಯಲ್ಲಿ ಹೇಳಿದ್ದರು.
ರೋಹಿತ್ ಒಬ್ಬ ನಿಸ್ವಾರ್ಥ ಕ್ರಿಕೆಟಿಗ ಎಂದ ಶರ್ಮಾ
ಕೊಹ್ಲಿ ಬಗ್ಗೆ ಮಾತನಾಡುತ್ತಿದ್ದ ಚೇತನ್ ಶರ್ಮಾ ಅವರ ಗಮನ ರೋಹಿತ್ ಶರ್ಮಾ ಅವರತ್ತ ತಿರುಗಿತು. ತಂಡದ ಒಳಿತಿಗಾಗಿ ತಮ್ಮನ್ನು ತ್ಯಾಗ ಮಾಡಲು ಸಿದ್ಧರಿರುವ ಆಟಗಾರ ಎಂದು ರೋಹಿತ್ರನ್ನು ಶ್ಲಾಘಿಸಿದ್ದಾರೆ. ಭಾರತ ತಂಡವನ್ನು ಆಕ್ರಮಣಕಾರಿ ರೀತಿಯಲ್ಲಿ ಮುನ್ನಡೆಸಿದ್ದನ್ನು ಕೊಂಡಾಡಿದ್ದಾರೆ. 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡಕ್ಕಾಗಿ ರೋಹಿತ್ ಅವರ ಫಾರ್ಮ್ ಮತ್ತು ಪಾತ್ರದ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ಮಾಜಿ ಸೆಲೆಕ್ಟರ್, ನಿಸ್ವಾರ್ಥ ನಾಯಕ ಎಂದು ಬಣ್ಣಿಸಿದ್ದಾರೆ.
ಭಾರತದ ನಾಯಕನನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ವೈಯಕ್ತಿಕ ಸಾಧನೆ ಬಿಟ್ಟು ಪ್ರತಿ ಪಂದ್ಯದಲ್ಲೂ ತಮ್ಮ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು ಎಂದರು. ರೋಹಿತ್ ಅವರು 54.27 ಸರಾಸರಿಯಲ್ಲಿ 597 ರನ್ ಗಳಿಸಿದ್ದು, ಮೂರು ಅರ್ಧಶತಕ ಮತ್ತು ಒಂದು ಶತಕವನ್ನೂ ಸಿಡಿಸಿದ್ದಾರೆ. ಟಿ20 ವಿಶ್ವಕಪ್ನಲ್ಲೂ ಅಂತಹದ್ದೇ ಆಟವನ್ನು ಆಡಲು ಯತ್ನಿಸಿದ್ದರು. ವಿಫಲಗೊಂಡರು. ಆದರೆ, ಏಕದಿನ ವಿಶ್ವಕಪ್ನಲ್ಲಿ ಫಾರ್ಮ್ಗೆ ಮರಳಿ ಸಿಡಿದೆದ್ದರು ಎಂದು ಹೇಳಿದರು.
ತಂಡಕ್ಕಾಗಿ ತಮ್ಮನ್ನು ತ್ಯಾಗ ಮಾಡುವ ಕೆಲವೇ ಆಟಗಾರರನ್ನು ನೀವು ಕಾಣಬಹುದು. ಅದರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. 40, 50 ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿ ಸ್ಫೋಟಕ ಆರಂಭಕ್ಕೆ ಸಾಕ್ಷಿಯಾದರು. ವಿಶ್ವಕಪ್ನಲ್ಲಿ ತಮ್ಮ ಕೆಲಸವನ್ನು ರೋಹಿತ್ ಮಾಡಿದರು. ಅವರೊಬ್ಬ ನಿಸ್ವಾರ್ಥ ಕ್ರಿಕೆಟಿಗ. ಭಾರತ ತಂಡದ ಆಡಿದ ರೀತಿ ಅದ್ಭುತವಾಗಿತ್ತು. ನಾವು ಕೇವಲ 10 ಪಂದ್ಯಗಳನ್ನು ಗೆದ್ದಿಲ್ಲ. ಎದುರಾಳಿಗಳನ್ನು ಹೆದರಿಸಿದ್ದೇವೆ. ಭಾರತದಂತೆ ಜಗತ್ತಿನಲ್ಲಿ ಬೇರೆ ಯಾವ ತಂಡವು ಉತ್ತಮ ಕ್ರಿಕೆಟ್ ಆಡುತ್ತದೆ ಎಂದು ನಾನು ಭಾವಿಸಿಲ್ಲ ಎಂದು ಶರ್ಮಾ ಹೇಳಿದರು.