ಟಿ20 ಕ್ರಿಕೆಟ್ನಲ್ಲಿ 12000 ರನ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1000 ರನ್; ಚರಿತ್ರೆ ಸೃಷ್ಟಿಸಿದ ವಿರಾಟ್ ಕೊಹ್ಲಿ
Virat Kohli: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 21 ರನ್ ಗಳಿಸಿದ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅವುಗಳ ನೋಟ ಇಲ್ಲಿದೆ.
![ಚರಿತ್ರೆ ಸೃಷ್ಟಿಸಿದ ವಿರಾಟ್ ಕೊಹ್ಲಿ ಚರಿತ್ರೆ ಸೃಷ್ಟಿಸಿದ ವಿರಾಟ್ ಕೊಹ್ಲಿ](https://images.hindustantimes.com/kannada/img/2024/03/22/550x309/ANI-20240322326-0_1711124041874_1711124076507.jpg)
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ವೇಗದ 12 ಸಾವಿರ ರನ್ ಪೂರೈಸಿದ ಕೊಹ್ಲಿ, ಸಿಎಸ್ಕೆ ವಿರುದ್ಧ 1000 ರನ್ ಗಳಿಸಿದ ದಾಖಲೆಯನ್ನೂ ಬರೆದರು.
ಎರಡು ತಿಂಗಳ ನಂತರ ಮೈದಾನಕ್ಕಿಳಿದ ಕೊಹ್ಲಿ, 2024ರ ಐಪಿಎಲ್ನ ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದರು. 20 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 21 ರನ್ ಗಳಿಸಿ ಮುಸ್ತಫಿಜುರ್ ರೆಹಮಾನ್ ಬೌಲಿಂಗ್ನಲ್ಲಿ ಅಜಿಂಕ್ಯ ರಹಾನೆಗೆ ಕ್ಯಾಚ್ ನೀಡಿ ಹೊರ ನಡೆದರು. ಇದರ ನಡುವೆಯೂ ವಿರಾಟ್ ಮೂರು ಪ್ರಮುಖ ದಾಖಲೆಗಳನ್ನು ನಿರ್ಮಿಸಿದರು. ಕೊಹ್ಲಿ ಬರೆದ ಮೂರು ದಾಖಲೆಗಳ ಪಟ್ಟಿ ಇಲ್ಲಿದೆ.
ಸಿಎಸ್ಕೆ ವಿರುದ್ಧ 1000+ ರನ್
ಚೆನ್ನೈ ವಿರುದ್ಧ 985 ರನ್ ಗಳಿಸಿದ್ದ ವಿರಾಟ್, ಈ ಪಂದ್ಯದಲ್ಲಿ 15 ರನ್ ಗಳಿಸಿದ ವೇಳೆ 1000 ರನ್ ಪೂರ್ಣಗೊಳಿಸಿದ ಸಾಧನೆ ಮಾಡಿದರು. ಆ ಮೂಲಕ ಐಪಿಎಲ್ನಲ್ಲಿ ಸಿಎಸ್ಕೆ ವಿರುದ್ಧ ಸಾವಿರ ರನ್ ಗಳಿಸಿದ 2ನೇ ಆಟಗಾರ (ಕೊಹ್ಲಿ 1006) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿಗಿಂತ ಮೊದಲು ಶಿಖರ್ ಧವನ್, ಚೆನ್ನೈ ವಿರುದ್ಧ 1057 ರನ್ ಕಲೆ ಹಾಕಿದ್ದಾರೆ.
ಐಪಿಎಲ್ನಲ್ಲಿ ತಂಡವೊಂದರ ವಿರುದ್ಧ 1000+ ರನ್ ಕಲೆ ಹಾಕಿದ ಆರನೇ ಆಟಗಾರ ಎಂಬ ದಾಖಲೆಗೂ ಕೊಹ್ಲಿ ಒಳಗಾಗಿದ್ದಾರೆ. ಈ ಪೈಕಿ ಕೊಹ್ಲಿಯೇ 2 ಬಾರಿ ಸಾಧನೆ ಮಾಡಿದ್ದಾರೆ. ಚೆನ್ನೈ ವಿರುದ್ಧಕ್ಕೂ ಮೊದಲು ಡೆಲ್ಲಿ ಎದುರು ಸಾವಿರ (1030) ಗಡಿ ತಲುಪಿದ್ದರು. ಡೇವಿಡ್ ವಾರ್ನರ್ 2 ಬಾರಿ, ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ತಲಾ ಒಂದೊಂದು ಸಲ ಐಪಿಎಲ್ನಲ್ಲಿ ತಂಡವೊಂದರ ವಿರುದ್ಧ 1000+ರನ್ ಗಳಿಸಿದ್ದಾರೆ.
ಐಪಿಎಲ್ ತಂಡವೊಂದರ ವಿರುದ್ಧ 1000+ ರನ್ ಗಳಿಸಿದ ಆಟಗಾರರು
1105 - ಡೇವಿಡ್ ವಾರ್ನರ್ vs ಪಂಜಾಬ್ ಕಿಂಗ್ಸ್
1075 - ಡೇವಿಡ್ ವಾರ್ನರ್ vs ಕೋಲ್ಕತ್ತಾ ನೈಟ್ ರೈಡರ್ಸ್
1057 - ಶಿಖರ್ ಧವನ್ vs ಚೆನ್ನೈ ಸೂಪರ್ ಕಿಂಗ್ಸ್
1040 - ರೋಹಿತ್ ಶರ್ಮಾ vs ಕೋಲ್ಕತ್ತಾ ನೈಟ್ ರೈಡರ್ಸ್
1030 - ವಿರಾಟ್ ಕೊಹ್ಲಿ vs ಡೆಲ್ಲಿ ಕ್ಯಾಪಿಟಲ್ಸ್
1006* - ವಿರಾಟ್ ಕೊಹ್ಲಿ vs ಚೆನ್ನೈ ಸೂಪರ್ ಕಿಂಗ್ಸ್
12 ಸಾವಿರ ರನ್ ಪೂರೈಸಿದ ಕೊಹ್ಲಿ
ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ 12 ಸಾವಿರ (ಅಂತಾರಾಷ್ಟ್ರೀಯ ಟಿ20 ಸೇರಿ) ರನ್ ಪೂರ್ಣಗೊಳಿಸಿದ ವಿಶ್ವದ 6ನೇ ಮತ್ತು ಭಾರತದ ಮೊದಲ ಆಟಗಾರ ಎಂಬ ಚರಿತ್ರೆ ಸೃಷ್ಟಿಸಿದ್ದಾರೆ. ಚೆನ್ನೈ ವಿರುದ್ಧ 5 ರನ್ ಗಳಿಸಿದ ವೇಳೆ ಈ ಸಾಧನೆ ಮಾಡಿದರು. ಅಲ್ಲದೆ, ಇದಕ್ಕೂ ಮೊದಲು ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಕಿರನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್, ಡೇವಿಡ್ ವಾರ್ನರ್ ನಂತರ ಈ ಸಾಧನೆ ಮಾಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ 12000 ಪೂರೈಸಿದ ಕ್ರಿಕೆಟರ್ಸ್
14562 - ಕ್ರಿಸ್ಗೇಲ್ (ವೆಸ್ಟ್ ಇಂಡೀಸ್)
13360 - ಶೋಯೆಬ್ ಮಲಿಕ್ (ಪಾಕಿಸ್ತಾನ)
12900 - ಕಿರನ್ ಪೊಲಾರ್ಡ್ (ವೆಸ್ಟ್ ಇಂಡೀಸ್)
12319 - ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)
12065 - ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
12000* - ವಿರಾಟ್ ಕೊಹ್ಲಿ (ಭಾರತ)
ಕೊಹ್ಲಿ ವೇಗದ 12 ಸಾವಿರ ರನ್
12 ಸಾವಿರ ರನ್ ಗಳಿಸಿದ ಕೊಹ್ಲಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 12 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಆಟಗಾರ ಎನಿಸಿದ್ದಾರೆ. ಆ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಕೇವಲ 360 ಇನ್ನಿಂಗ್ಸ್ಗಳಲ್ಲಿ ವೇಗದ 12000 ಗಡಿ ದಾಟಿ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಇದ್ದಾರೆ. ಅವರು 345 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ವೇಗದ 12,000 ಸಿಡಿಸಿದ ಆಟಗಾರರು (ಇನ್ನಿಂಗ್ಸ್ಗಳಲ್ಲಿ)
345 ಇನ್ನಿಂಗ್ಸ್ - ಕ್ರಿಸ್ ಗೇಲ್
360 ಇನ್ನಿಂಗ್ಸ್ - ವಿರಾಟ್ ಕೊಹ್ಲಿ
368 ಇನ್ನಿಂಗ್ಸ್ - ಡೇವಿಡ್ ವಾರ್ನರ್
432 ಇನ್ನಿಂಗ್ಸ್ - ಅಲೆಕ್ಸ್ ಹೇಲ್ಸ್
451 ಇನ್ನಿಂಗ್ಸ್ - ಶೋಯೆಬ್ ಮಲಿಕ್
550 ಇನ್ನಿಂಗ್ಸ್ - ಕಿರನ್ ಪೊಲಾರ್ಡ್
![Whats_app_banner Whats_app_banner](https://kannada.hindustantimes.com/static-content/1y/wBanner.png)