ಕೊಹ್ಲಿ ನಾಯಕ, ರೋಹಿತ್‌ಗೆ ಇಲ್ಲ ಸ್ಥಾನ; ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿದ ವಿಶ್ವಕಪ್ ತಂಡದಲ್ಲಿ ನಾಲ್ವರು ಭಾರತೀಯರು
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊಹ್ಲಿ ನಾಯಕ, ರೋಹಿತ್‌ಗೆ ಇಲ್ಲ ಸ್ಥಾನ; ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿದ ವಿಶ್ವಕಪ್ ತಂಡದಲ್ಲಿ ನಾಲ್ವರು ಭಾರತೀಯರು

ಕೊಹ್ಲಿ ನಾಯಕ, ರೋಹಿತ್‌ಗೆ ಇಲ್ಲ ಸ್ಥಾನ; ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿದ ವಿಶ್ವಕಪ್ ತಂಡದಲ್ಲಿ ನಾಲ್ವರು ಭಾರತೀಯರು

Cricket Australia: ಕ್ರಿಕೆಟ್‌ ಆಸ್ಟ್ರೇಲಿಯಾ ಹೆಸರಿಸಿದ ವಿಶ್ವಕಪ್‌ ಆಡುವ ಬಳಗದಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ತಲಾ ಮೂವರು ಮತ್ತು ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ತಂಡದ ತಲಾ ಒಬ್ಬರು ಕಾಣಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (AFP)

ಏಕದಿನ ವಿಶ್ವಕಪ್‌ 2023ರ (ICC ODI World Cup 2023) ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಬೆಂಗಳೂರಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು ಬರೋಬ್ಬರಿ 160 ರನ್‌ಗಳಿಂದ ಸೋಲಿಸಿ, ಅಜೇಯ ಓಟ ಮುಂದುವರೆಸಿತು. ಮುಂದೆ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ನವೆಂಬರ್‌ 15ರ ಬುಧವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ 2019ರ ಸೆಮೀಸ್‌ ಎದುರಾಳಿ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲಿದೆ. ಗುರುವಾರ ನಡೆಯಲಿರುವ ಎರಡನೇ ಸೆಮಿ ಕದನದಲ್ಲಿ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್‌ 19ರ ಭಾನುವಾರ ಫೈನಲ್‌ ಪಂದ್ಯದೊಂದಿಗೆ ಟೂರ್ನಿಗೆ ತೆರೆ ಬೀಳಲಿದೆ.

ಲೀಗ್‌ ಹಂತದಲ್ಲಿ ಪಂದ್ಯಗಳು ಮುಗಿಯುತ್ತಿದ್ದಂತೆಯೇ, ಟೂರ್ನಿಯ ಅತ್ಯುತ್ತಮ ತಂಡಗಳು ಯಾವುವು ಎಂಬ ಚರ್ಚೆ ನಡೆಯುತ್ತಿವೆ. ಹೀಗಾಗಿ ನಾಕೌಟ್ ಹಂತಕ್ಕೂ ಮುಂಚಿತವಾಗಿ, ಕ್ರಿಕೆಟ್ ಆಸ್ಟ್ರೇಲಿಯಾವು ವಿಶ್ವಕಪ್ 2023ರ ಅತ್ಯುತ್ತಮ ಆಡುವ ಬಳಗವನ್ನು ಹೆಸರಿಸಿದೆ. ಅಚ್ಚರಿಯೆಂದರೆ, ಟೀಮ್‌ ಇಂಡಿಯಾವನ್ನು ಯಶಸ್ವಿ 9 ಗೆಲುವಿನತ್ತ ಮುನ್ನಡೆಸಿದ ನಾಯಕ ರೋಹಿತ್‌ ಶರ್ಮಾಗೆ ಇದರಲ್ಲಿ ಸ್ಥಾನವನ್ನೇ ನೀಡಿಲ್ಲ.

11ಆಟಗಾರರ ಆಡುವ ಬಳಗದೊಂದಿಗೆ 12ನೇ ವ್ಯಕ್ತಿಯನ್ನೂ ಒಳಗೊಂಡಿರುವ ತಂಡದಲ್ಲಿ ಭಾರತದ ನಾಲ್ವರು, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಲಾ ಮೂವರು ಮತ್ತು ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾದಿಂದ ತಲಾ ಒಬ್ಬರು ಕಾಣಿಸಿಕೊಂಡಿದ್ದಾರೆ.

ರೋಹಿತ್‌ ಶರ್ಮಾಗೆ ಸ್ಥಾನವಿಲ್ಲ

ಕ್ರಿಕೆಟ್ ಆಸ್ಟ್ರೇಲಿಯಾ ರಚಿಸಿದ ತಂಡದಲ್ಲಿ ಸ್ಥಾನ ಪಡೆದ ನಾಲ್ವರು ಭಾರತೀಯರ ಪೈಕಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಲ್ಲದಿರುವುದು ಆಶ್ಚರ್ಯವೇನಿಲ್ಲ. ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬಂದಿರುವ ಅನುಭವಿ ಆರಂಭಿಕ ಆಟಗಾರ, ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆರಂಭಿಕ ಆಟಗಾರನಾಗಿ ತಂಡಕ್ಕೆ ಬಲ ತುಂಬುವುದು ಮಾತ್ರವಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಒತ್ತಡ ಕಡಿಮೆ ಮಾಡುತ್ತಿದ್ದಾರೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಮೂರು ಅರ್ಧಶತಕಗಳು ಮತ್ತು ಒಂದು ಶತಕ ಸಹಿತ 503 ರನ್ ಗಳಿಸಿದ್ದಾರೆ. ಎಲ್ಲಕ್ಕೂ ಹೆಚ್ಚಾಗಿ ನಾಯಕನಾಗಿ ಯಶಸ್ವಿಯಾಗಿದ್ದಾರೆ.‌

ವಿರಾಟ್‌ ಕೊಹ್ಲಿ ನಾಯಕ

ಪ್ರಸಕ್ತ ಆವೃತ್ತಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಿರುವ ಕ್ವಿಂಟನ್ ಡಿ ಕಾಕ್‌, ಮತ್ತು ಆಸೀಸ್‌ ಸ್ಫೋಟಕ ಬ್ಯಾಟರ್‌ ಡೇವಿಡ್ ವಾರ್ನರ್ ಅವರನ್ನು ಎರಡನೇ ಆಯ್ಕೆಯ ಆರಂಭಿಕ ಆಟಗಾರನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದೆ. ಇವರಿಬ್ಬರೂ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ವಿಶೇಷವೆಂದರೆ ಕ್ರಿಕೆಟ್ ಆಸ್ಟ್ರೇಲಿಯಾ ವಿರಾಟ್ ಕೊಹ್ಲಿ ಅವರನ್ನು ತನ್ನ ತಂಡದ ನಾಯಕನಾಗಿ ಹೆಸರಿಸಿದೆ. ಪಂದ್ಯಾವಳಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡುತ್ತಿರುವ ಕೊಹ್ಲಿ, ಎರಡು ಶತಕಗಳೊಂದಿಗೆ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಈಗಾಗಲೇ ಸರಿಗಟ್ಟಿದ್ದಾರೆ.

ಇಬ್ಬರು ವೇಗಿಗಳು

ಆಸೀಸ್‌ ಹೆಸರಿಸಿರುವ ತಂಡದಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ 8ನೇ ಕ್ರಮಾಂಕದಲ್ಲಿದ್ದಾರೆ. ಕೇವಲ 3.96ರ ಎಕಾನಮಿ ದರದೊಂದಿಗೆ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. 3.65ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿರುವ ಜಸ್ಪ್ರೀತ್ ಬುಮ್ರಾ, ಮತ್ತು ಭಾರತೀಯ ಬೌಲಿಂಗ್ ದಾಳಿಯ ಬೆನ್ನೆಲುಬಾಗಿರುವ ಮೊಹಮ್ಮದ್ ಶಮಿ ಈ ತಂಡದ ಪ್ರಮುಖ ವೇಗಿಗಳಾಗಿದ್ದಾರೆ.

ಆಸ್ಟ್ರೇಲಿಯಾ ರಚಿಸಿದ 2023ರ ವಿಶ್ವಕಪ್‌ನ ಅತ್ಯುತ್ತಮ ತಂಡ ಹೀಗಿದೆ

ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್, ರಚಿನ್ ರವೀಂದ್ರ, ವಿರಾಟ್ ಕೊಹ್ಲಿ (ನಾಯಕ), ಐಡೆನ್ ಮಾರ್ಕ್ರಾಮ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಆಡಮ್ ಜಂಪಾ, ಜಸ್ಪ್ರೀತ್ ಬುಮ್ರಾ, ದಿಲ್ಶನ್ ಮಧುಶಂಕ (12ನೇ ಆಟಗಾರ).

Whats_app_banner