ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್ಗೆ ನಾಲ್ಕನೇ ಸೋಲು
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ಸಹಾಯದಿಂದ ತವರಿನ ಹೊರಗೆ ಆರ್ಸಿಬಿಗೆ ಸತತ 4ನೇ ಗೆಲುವು ದಾಖಲಿಸಿದೆ. ಆದರೆ ರಾಜಸ್ಥಾನ್ಗೆ ನಾಲ್ಕನೇ ಸೋಲು ಕಂಡಿದೆ.

ತವರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಸತತ ಎರಡನೇ ಸೋಲಿಗೆ ಶರಣಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನ ಹೊರಗೆ ನಡೆದ ಸತತ 4ನೇ ಪಂದ್ಯದಲ್ಲಿ ಗೆದ್ದು ಬೀಗಿದೆ. ಫಿಲ್ ಸಾಲ್ಟ್ ಅವರ (65) ಬಿರುಸಿನ ಅರ್ಧಶತಕದ ನೆರವಿನಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ 9 ವಿಕೆಟ್ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ 75 ರನ್ ಗಳಿಸಿ ಅಬ್ಬರದ ಆಟವಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಋತುವಿನಲ್ಲಿ ಆರ್ಆರ್ಗೆ ಇದು ನಾಲ್ಕನೇ ಸೋಲು. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪಿಂಕ್ ಸಿಟಿಯಲ್ಲಿ ಗ್ರೀನ್ ಜೆರ್ಸಿ ತೊಟ್ಟ ಆರ್ಸಿಬಿ ತಂಡದಿಂದ ಆತಿಥೇಯ ರಾಯಲ್ಸ್ ಕಠಿಣ ಹೋರಾಟ ಎದುರಿಸಿತು.
ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 28ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್, ಯಶಸ್ವಿ ಜೈಸ್ವಾಲ್ ಅವರ (75) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ, 17.3 ಓವರ್ಗಳಲ್ಲೇ 1 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಫಿಲ್ ಸಾಲ್ಟ್ (65) ಮತ್ತು ವಿರಾಟ್ ಕೊಹ್ಲಿ (62) ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಬೆಂಗಳೂರು ತಂಡ ಗೆಲ್ಲಲು ಸುಲಭವಾಯಿತು. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ (62*) ಅರ್ಧಶತಕ ಸಿಡಿಸಿದರು. ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ 40 ರನ್ ಗಳಿಸಿದರು.
ಸಾಲ್ಟ್ ಅಬ್ಬರ, ಕೊಹ್ಲಿ ನಿಧಾನ
174 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಆರ್ಸಿಬಿ ಉತ್ತಮ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರು ಆರಂಭಿಕರಾಗಿ ಕಣಕ್ಕಿಳಿದು ಆರ್ಆರ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಇವರಿಬ್ಬರು ಮೊದಲ ವಿಕೆಟ್ಗೆ 92 ರನ್ ಕಲೆಹಾಕಿದರು. ಇನ್ನಿಂಗ್ಸ್ ಆರಂಭದಿಂದಲೇ ಆರ್ಆರ್ ಬೌಲರ್ಗಳು ಬೆಂಗಳೂರು ತಂಡದ ಮೇಲೆ ಒತ್ತಡ ಹಾಕಲು ಯತ್ನಿಸಿದರು. ಆದರೆ ಸಾಲ್ಟ್ ಅದೆಲ್ಲವನ್ನೂ ಮೀರಿ ಬ್ಯಾಟಿಂಗ್ ನಡೆಸಿ ಬೌಲರ್ಗಳ ಮೇಲೆಯೇ ಒತ್ತಡ ಹೇರಿದರು. ಇಂಗ್ಲೆಂಡ್ ಆಟಗಾರ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ ಭರ್ಜರಿ 65 ರನ್ ಗಳಿಸಿ ಔಟಾದರು. ಅದಾಗಲೇ ಆರ್ಸಿಬಿ ಸುಸ್ಥಿತಿಯಲ್ಲಿತ್ತು.
ಸಾಲ್ಟ್ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಕಾರಣ ವಿರಾಟ್ ಕೊಹ್ಲಿ ನಿಧಾನವಾಗಿ ಬ್ಯಾಟ್ ಮಾಡಿದರು. ಪರಿಣಾಮ ವಿಕೆಟ್ ಕಾಪಾಡಿಕೊಳ್ಳುವಲ್ಲಿಯೂ ನೆರವಾದರು. ಆದರೆ ಸಾಲ್ಟ್ ಔಟಾದ ಬಳಿಕ ಕೊಹ್ಲಿ ತಾನೂ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇಂಪ್ಯಾಕ್ಟ್ ಪ್ಲೇಯರ್ ದೇವದತ್ ಪಡಿಕ್ಕಲ್ ಜೊತೆ ಸೇರಿ 2ನೇ ವಿಕೆಟ್ಗೆ ಅಜೇಯ 83 ರನ್ ಗಳಿಸಿ ಮಿಂಚಿದರು. 45 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 62 ರನ್ ಗಳಿಸಿದರು. ಪಡಿಕ್ಕಲ್ 28 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 40 ರನ್ ಬಾರಿಸಿದರು. ಆರ್ಆರ್ ಪರ ಕುಮಾರ್ ಕಾರ್ತಿಕೇಯ ಮಾತ್ರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉಳಿದ ಬೌಲರ್ಗಳು ವಿಕೆಟ್ಗಾಗಿ ಪರದಾಡಿದರು. ಆದರೆ ಯಶಸ್ವಿಯಾಗಲಿಲ್ಲ.
ಜೈಸ್ವಾಲ್ ಅಬ್ಬರ, ಉಳಿದವರು ನಿರಾಸೆ
ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್, ಉತ್ತಮ ಆರಂಭ ಪಡೆಯಿತು. ಪವರ್ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು. ಆದರೆ ಪವರ್ಪ್ಲೇ ಮುಗಿದ ಮರು ಓವರ್ನಲ್ಲೇ ಸಂಜು ಸ್ಯಾಮ್ಸನ್ ಔಟಾದರು. ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಸ್ಟಂಪ್ ಆದರು. ಇದರ ಬಳಿಕ ರಾಯಲ್ಸ್ ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟಿತು. ಮತ್ತೊಂದೆಡೆ ಆರ್ಸಿಬಿ ಬೌಲರ್ಗಳು ಸಹ ಮಾರಕ ದಾಳಿ ನಡೆಸಿ ವಿಕೆಟ್ ಪಡೆಯದಿದ್ದರೂ ರನ್ ನಿಯಂತ್ರಿಸಿದರು. ಆದರೆ ಅರ್ಧಶತಕದ ಬಳಿಕ ಗೇರ್ ಚೇಂಜ್ ಮಾಡಿದ ಜೈಸ್ವಾಲ್, ಹೊಡಿಬಡಿ ಆಟಕ್ಕೆ ಮುಂದಾದರು. ಇದು ಸ್ಕೋರ್ ಏರಿಕೆಗೂ ಕಾರಣವಾಯಿತು.
ಆದರೆ 47 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ 75 ರನ್ ಗಳಿಸಿದ್ದ ಅವಧಿಯಲ್ಲಿ ಜೈಸ್ವಾಲ್, ಜೋಶ್ ಹೇಜಲ್ವುಡ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಆದರು. ರಿಯಾನ್ ಪರಾಗ್ 30 ರನ್ಗಳ ಕಾಣಿಕೆ ನೀಡಿದರೆ, ಧ್ರುವ್ ಜುರೆಲ್ ಅಜೇಯ 35 ರನ್ಗಳ ಕೊಡುಗೆ ನೀಡಿದರು. ಶಿಮ್ರಾನ್ ಹೆಟ್ಮೆಯರ್ 9, ನಿತೀಶ್ ರಾಣಾ 4 ರನ್ಗಳಿಸಿದರು. ಆರ್ಸಿಬಿ ಕಠಿಣ ಬೌಲಿಂಗ್ ದಾಳಿ ನಡೆಸಿ ಬೃಹತ್ ಮೊತ್ತ ಕಲೆ ಹಾಕದಂತೆ ಬ್ಯಾಟರ್ಗಳನ್ನು ನಿಯಂತ್ರಿಸಿದರು. ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್, ಯಶ್ ದಯಾಳ್ ತಲಾ 1 ವಿಕೆಟ್ ಪಡೆದರು.
