ಬಿಜಿಟಿ ಸರಣಿ ಬಳಿಕ ವಿರಾಟ್ ಕೊಹ್ಲಿಗೆ ಮತ್ತೆ ಟೆಸ್ಟ್ ನಾಯಕತ್ವ, ರೋಹಿತ್ ಶರ್ಮಾಗಿಲ್ಲ ತಂಡದಲ್ಲಿ ಸ್ಥಾನ; ವರದಿ
Indian Cricket Team: ಬಾರ್ಡರ್ ಗವಾಸ್ಕರ್ ಟ್ರೋಫಿ ಬಳಿಕ ವಿರಾಟ್ ಕೊಹ್ಲಿಗೆ ಮತ್ತೆ ಟೆಸ್ಟ್ ನಾಯಕತ್ವ ಸಿಗಲಿದೆ ಎಂದು ವರದಿಯಾಗಿದೆ. ಆದರೆ ರೋಹಿತ್ ಶರ್ಮಾ ಅವರಿಗೆ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಅದೇ ವರದಿ ತಿಳಿಸಿದೆ.
ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಅಶಾಂತಿ ನೆಲೆಸಿದೆ. ತಂಡದ ಒಳಗೆ ಎಲ್ಲವೂ ಸರಿಯಿಲ್ಲ. ಉದ್ವಿಗ್ನತೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಈ ಅತೃಪ್ತಿಯ ವಾತಾವರಣ ಭಾರತದ ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರು ತಂಡವನ್ನು ನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಕಳವಳ ಹುಟ್ಟುಹಾಕಿದೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಿ ಮರಳಬಹುದು ಎಂದು ಹೇಳಲಾಗುತ್ತಿದೆ. 2022ರಲ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ಗುಡ್ಬೈ ಹೇಳಿದ್ದ ಕೊಹ್ಲಿ ಮತ್ತೆ ಪಟ್ಟ ಅಲಂಕರಿಸಲು ಸಿದ್ದರಿದ್ದಾರೆ ಎಂದು ವರದಿಯಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದೆ. ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದರೂ ನಂತರ ಮೂರು ಪಂದ್ಯಗಳಲ್ಲಿ ತೀವ್ರ ನಿರಾಸೆ ಮೂಡಿಸಿತು. ಈ ಪೈಕಿ ಎರಡರಲ್ಲಿ ಸೋಲು ಅನುಭವಿಸಿದೆ. ಪ್ರಸ್ತುತ 2-1 ಅಂತರದಿಂದ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಸರಣಿ ಉಳಿಸಿಕೊಳ್ಳಲು ಸಿಡ್ನಿಯಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಹೆಚ್ಚಾಗಿದ್ದು, ರೋಹಿತ್ ಅಂತಿಮ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿಯುವುದು ಅನುಮಾನ ಎಂದು ವರದಿಯಾಗಿದೆ.
ಇನ್ಮುಂದೆ ಟೆಸ್ಟ್ ತಂಡದಲ್ಲಿಲ್ಲ ರೋಹಿತ್ ಶರ್ಮಾಗೆ ಸ್ಥಾನ?
ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರು ಅಂತಿಮ ಟೆಸ್ಟ್ಗೆ ರೋಹಿತ್ ಶರ್ಮಾ ಅವರನ್ನು ಪ್ಲೇಯಿಂಗ್ 11ನಲ್ಲಿ ಆಡಿಸಲಾಗುತ್ತದೆಯೇ ಎಂಬುದನ್ನು ಖಚಿತಪಡಿಸಲು ನಿರಾಕರಿಸಿದ ಕ್ಷಣದಿಂದ ಈ ಚರ್ಚೆ ಹುಟ್ಟುಕೊಂಡಿದೆ. ಮುಂದಿನ ಟೆಸ್ಟ್ ಪಂದ್ಯಕ್ಕೆ ಹಿಟ್ಮ್ಯಾನ್ ಬಹುತೇಕ ಹೊರಕ್ಕೆ ಎಂದು ಹೇಳಲಾಗುತ್ತಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಅವರ ಭವಿಷ್ಯದ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಸಕ್ತ ಸರಣಿಯಲ್ಲಿ ಅವರು ಆಡಿದ 5 ಇನ್ನಿಂಗ್ಸ್ಗಳಲ್ಲಿ ಒಂದು ಸಲ ಮಾತ್ರ ಎರಡಂಕಿ ದಾಟಿದ್ದಾರೆ. ಅವರ ಕಳಪೆ ಪ್ರದರ್ಶನ ಮತ್ತು ನಾಯಕತ್ವದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಂತರ ಭಾರತೀಯ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಅವಕಾಶ ಪಡೆಯುವುದಿಲ್ಲ. ತಂಡದ ಭಾಗವಾಗುವ ಸಾಧ್ಯತೆ ಇಲ್ಲ. ಆದರೆ ತಕ್ಷಣವೇ ಟೆಸ್ಟ್ ಸ್ವರೂಪಕ್ಕೆ ನಿವೃತ್ತಿ ಘೋಷಿಸುವುದಿಲ್ಲ ಎಂದೂ ವರದಿಯಾಗಿದೆ. ತಂಡದಲ್ಲಿ ಈಗಾಗಲೇ ಉದ್ವಿಗ್ನ ವಾತಾವರಣ ಉಲ್ಬಣಗೊಂಡಿರುವ ಕಾರಣ, ಅದನ್ನು ತಪ್ಪಿಸಲು ತಮ್ಮ ನಿರ್ಧಾರವನ್ನು ತಡೆಹಿಡಿಯಬಹುದು ಎಂದು ಮೂಲಗಳು ಹೇಳುತ್ತಿವೆ. ಈಗಾಗಲೇ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಹಿಟ್ಮ್ಯಾನ್ ಏಕದಿನದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬಿಜಿಟಿ ಸರಣಿ ಬಳಿಕ ಕೊಹ್ಲಿಗೆ ಟೆಸ್ಟ್ ನಾಯಕತ್ವ?
ರೋಹಿತ್ ನಿವೃತ್ತಿಯಾಗುತ್ತಾರೆ ಎನ್ನುವ ವರದಿಯೇ, ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ಪಡೆಯಲಿದ್ದಾರೆ ಎಂದು ಉಲ್ಲೇಖಿಸಿದೆ. 2022ರಲ್ಲಿ ಕೊನೆಯದಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ, ಬಿಜಿಟಿ ಸರಣಿ ಬಳಿಕ ಅವರೇ ಟೆಸ್ಟ್ ನಾಯಕತ್ವಕ್ಕೆ ಮರಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಏಕೆಂದರೆ, ಅವರು ಬ್ಯಾಟಿಂಗ್ನಲ್ಲಿ ಪ್ರದರ್ಶನ ನೀಡದಿದ್ದರೂ ಮೈದಾನದಲ್ಲಿ ಫೀಲ್ಡಿಂಗ್, ಪೆಪ್ ಟಾಕ್, ಬೌಲರ್ಗಳಿಗೆ ಸಲಹೆ ನೀಡುವುದು, ಗುಂಪು ಚರ್ಚೆಗಳು, ಯುವ ಆಟಗಾರರಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಎದುರಾಳಿ ಆಟಗಾರರನ್ನು ಭಯದಲ್ಲಿ ಇರಿಸಿದ್ದಾರೆ. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಬಳಿಕ ಕೊಹ್ಲಿಯೇ ಕ್ಯಾಪ್ಟನ್ ಆಗಲಿದ್ದಾರಂತೆ.
ಯುವ ಪೀಳಿಗೆಯ ಆಟಗಾರರಲ್ಲಿ ಸಿದ್ಧತೆ ಮತ್ತು ನಂಬಿಕೆಯ ಕೊರತೆಯ ಬೆಳಕಿನಲ್ಲಿ ಕೊಹ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯನ್ನು ಮ್ಯಾನೇಜ್ಮೆಂಟ್ ನಿರ್ವಹಿಸಿದ ರೀತಿ ಮತ್ತು ಮುಂದಿನ ಪರಿವರ್ತನೆಗಳಿಗೆ ತಂಡವು ಸೂಕ್ತವಾಗಿ ತಯಾರಿ ನಡೆಸಿದೆಯೇ ಎಂಬ ಬಗ್ಗೆ ಬಿಸಿಸಿಐನಲ್ಲಿ ಕಳವಳಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ನಂತರ ಅಶ್ವಿನ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದು ಆಘಾತವನ್ನುಂಟು ಮಾಡಿತು. ಇದಲ್ಲದೆ, ಸ್ಪಿನ್ನರ್ ಮರುದಿನವೇ ಮನೆಗೆ ಮರಳಿದ್ದು ಅಚ್ಚರಿ ಮೂಡಿಸಿತು.
ಕಳೆದ ವರ್ಷದ ಕೊನೆಯಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದಿಂದ ಸೋತಿರುವ ಭಾರತ ಇದೀಗ ಆಸೀಸ್ ಸರಣಿಯಲ್ಲೂ ಕಳಪೆ ಪ್ರದರ್ಶನ ನೀಡಿದ್ದು, ಕೋಚಿಂಗ್ ಸಿಬ್ಬಂದಿ ಪ್ರದರ್ಶನದ ಮೇಲೆಯೂ ಕ್ರಮಕ್ಕೆ ಬಿಸಿಸಿಐ ಮುಂದಾಗಿದೆ. ಆಸ್ಟ್ರೇಲಿಯಾ ಪ್ರವಾಸದ ನಂತರ ಗಂಭೀರ್ ಮತ್ತು ಅವರ ಸಹಾಯಕ ಸಿಬ್ಬಂದಿಯ ಪ್ರದರ್ಶನವನ್ನು ಬಿಸಿಸಿಐ ಪರಿಶೀಲಿಸುವ ಯೋಜನೆಗಳನ್ನು ಹಾಕಿಕೊಂಡಿದೆ. ಮುಂಬರುವ ವಾರಗಳು ಭಾರತ ತಂಡಕ್ಕೆ ಮತ್ತು ಗಂಭೀರ್ ಅಧಿಕಾರಾವಧಿ ಎರಡಕ್ಕೂ ನಿರ್ಣಾಯಕವಾಗಿದೆ ಎಂಬುದನ್ನು ಸದ್ಯದ ಬೆಳವಣಿಗೆಗಳು ಸೂಚಿಸುತ್ತಿವೆ.