ಜೂನಿಯರ್​ಗೆ ಸೀನಿಯರ್ ಅಭಯ; ಆರ್​ಸಿಬಿ ಹೊಸ ನಾಯಕ ರಜತ್ ಪಾಟೀದಾರ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಜೂನಿಯರ್​ಗೆ ಸೀನಿಯರ್ ಅಭಯ; ಆರ್​ಸಿಬಿ ಹೊಸ ನಾಯಕ ರಜತ್ ಪಾಟೀದಾರ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ

ಜೂನಿಯರ್​ಗೆ ಸೀನಿಯರ್ ಅಭಯ; ಆರ್​ಸಿಬಿ ಹೊಸ ನಾಯಕ ರಜತ್ ಪಾಟೀದಾರ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ

18ನೇ ಆವೃತ್ತಿಯ ಐಪಿಎಲ್​ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ನೂತನ ನಾಯಕನನ್ನು ನೇಮಿಸಿದೆ. ರಜತ್ ಪಾಟೀದಾರ್ ನೇಮಕದ ಬೆನ್ನಲ್ಲೇ ನೂತನ ನಾಯಕನಿಗೆ ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.

ಜೂನಿಯರ್​ಗೆ ಸೀನಿಯರ್ ಬೆಂಬಲ; ಆರ್​ಸಿಬಿ ಹೊಸ ನಾಯಕ ರಜತ್ ಪಾಟೀದಾರ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ
ಜೂನಿಯರ್​ಗೆ ಸೀನಿಯರ್ ಬೆಂಬಲ; ಆರ್​ಸಿಬಿ ಹೊಸ ನಾಯಕ ರಜತ್ ಪಾಟೀದಾರ್ ಕುರಿತು ವಿರಾಟ್ ಕೊಹ್ಲಿ ಪ್ರತಿಕ್ರಿಯೆ

2025ರ ಇಂಡಿಯನ್ ಪ್ರೀಮಿಯರ್ ಲೀಗ್​​ಗೂ ಮುನ್ನ ನೂತನ ನಾಯಕನನ್ನಾಗಿ ರಜತ್ ಪಾಟೀದಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಘೋಷಿಸಿದೆ. ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮಹತ್ವದ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ 2013 ರಿಂದ 2021ರ ತನಕ ಫ್ರಾಂಚೈಸಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಐಪಿಎಲ್ ಹರಾಜಿಗೂ ಮುನ್ನ ಆರ್​ಸಿಬಿ ಉಳಿಸಿಕೊಂಡಿದ್ದ ಮೂವರು ಆಟಗಾರರ ಪೈಕಿ ರಜತ್ ಪಾಟೀದಾರ್ ಕೂಡ ಹೌದು. ರಜತ್ ಆರ್​​ಸಿಬಿ 8ನೇ ಕ್ಯಾಪ್ಟನ್.

31 ವರ್ಷದ ಮಧ್ಯಪ್ರದೇಶದ ಆಟಗಾರನು ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಟಿ20) ಮತ್ತು ವಿಜಯ್ ಹಜಾರೆ ಟ್ರೋಫಿ (ಏಕದಿನ) ಗಳಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ ಫೈನಲ್​ಗೂ ಅರ್ಹತೆ ಪಡೆದಿತ್ತು. ರಜತ್ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೆ ಸಂತಸ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ, ಅಭಿನಂದನೆ ಸಲ್ಲಿಸಿದ್ದಾರೆ. ಯಾವಾಗಲೂ ನಿಮ್ಮ ಹಿಂದೆಯೇ ಇರುತ್ತೇವೆ. ನಿಮಗೆ ಬೇಕಾದ ಎಲ್ಲಾ ಮಾರ್ಗದರ್ಶನ ನೀಡಲು ಸಿದ್ಧರಿದ್ದೇವೆ ಎಂದು ಕೊಹ್ಲಿ ಅಭಯ ನೀಡಿದ್ದಾರೆ.

ರಜತ್​ಗೆ ಶುಭ ಹಾರೈಸಿದ ವಿರಾಟ್ ಕೊಹ್ಲಿ

‘ರಜತ್, ನಿಮಗೆ ಅಭಿನಂದನೆಗಳು. ಶುಭವಾಗಲಿ ಎಂದು ಹಾರೈಸುತ್ತೇನೆ. ಈ ಫ್ರ್ಯಾಂಚೈಸ್​​ನಲ್ಲಿ​ ನೀವು ಬೆಳೆದ ಮತ್ತು ಪ್ರದರ್ಶನ ನೀಡಿದ ರೀತಿಗೆ ಧನ್ಯವಾದಗಳು. ನಿಜವಾಗಿಯೂ ಭಾರತದಾದ್ಯಂತ ಆರ್​ಸಿಬಿಯ ಎಲ್ಲಾ ಅಭಿಮಾನಿಗಳ ಹೃದಯ ಗೆದ್ದಿದ್ದೀರಿ. ನಿಮ್ಮ ಆಟವನ್ನು ಮೆಚ್ಚಿದ್ದಾರೆ. ಇದಕ್ಕೆ ನೀವು ಅರ್ಹರು. ನಾನು ಮತ್ತು ಇತರ ತಂಡದ ಸದಸ್ಯರು ನಿಮ್ಮ ಹಿಂದೆಯೇ ಇರುತ್ತೇವೆ. ನಮ್ಮ ಎಲ್ಲಾ ಬೆಂಬಲವಿರುತ್ತದೆ’ ಎಂದು ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಡಿಯೊ ಸಂದೇಶದಲ್ಲಿ ಹೇಳಿದರು.

‘ಖಂಡಿತವಾಗಿಯೂ, ಇದು ದೊಡ್ಡ ಜವಾಬ್ದಾರಿ. ನಾನು ಕೂಡ ಹಲವು ವರ್ಷಗಳ ಕಾಲ ಈ ಜವಾಬ್ದಾರಿ ಹೊತ್ತಿದ್ದೆ. ಫಾಫ್ ಕಳೆದ ಕೆಲವು 3 ವರ್ಷಗಳಲ್ಲಿ ಅತ್ಯುತ್ತಮವಾಗಿ ನಿರ್ವಹಿಸಿದ್ದರು. ಈ ಫ್ರ್ಯಾಂಚೈಸಿಯನ್ನು ಇನ್ನಷ್ಟು ಮುಂದೆ ಕೊಂಡೊಯ್ಯಲು ನಿಮಗೆ ಸಿಕ್ಕ ದೊಡ್ಡ ಗೌರವ ಎಂದು ನನಗೆ ಖಾತ್ರಿಯಿದೆ. ನಿಮ್ಮ ನಾಯಕತ್ವದ ನಿರ್ಧಾರ ನಿಜವಾಗಲೂ ಸಂತೋಷವಾಗಿದೆ. ಇನ್ನಷ್ಟು ಬೆಳೆಯುತ್ತೀರಿ ಎನ್ನುವ ಖಾತ್ರಿ ನನಗಿದೆ. ಕಳೆದ 2 ವರ್ಷಗಳಲ್ಲಿ ಆಟಗಾರನಾಗಿ ಸಾಕಷ್ಟು ವಿಕಸನಗೊಂಡಿದ್ದೀರಿ. ನಿಮಗೆ ಭಾರತ ತಂಡದ ಪರ ಆಡುವ ಅವಕಾಶ ಕೂಡ ಸಿಕ್ಕಿದೆ’ ಎಂದು ಅವರು ಹೇಳಿದರು.

ಅಭಿಮಾನಿಗಳಿಗೆ ವಿನಂತಿಸಿದ ವಿರಾಟ್

‘ಕಳೆದ ಎರಡು ವರ್ಷಗಳಲ್ಲಿ ಅವರ ಆಟ ಸುಧಾರಿಸಿದೆ. ಆತ ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ರೀತಿ. ಅವರು ತೆಗೆದುಕೊಂಡ ಜವಾಬ್ದಾರಿ ಅದ್ಭುತವಾಗಿತ್ತು. ಈ ಅದ್ಭುತ ಫ್ರ್ಯಾಂಚೈಸಿ ಮುನ್ನಡೆಸಲು ಬೇಕಾದ ಎಲ್ಲಾ ಅರ್ಹತೆಗಳು ಅವರಲ್ಲಿವೆ. ನಾನು ಅವರಿಗೆ ಶುಭ ಹಾರೈಸುತ್ತೇನೆ. ರಜತ್​ಗೆ ಸಂಪೂರ್ಣ ಬೆಂಬಲ ತೋರಿಸುವಂತೆ ಎಲ್ಲಾ ಫ್ಯಾನ್ಸ್​ಗೆ ವಿನಂತಿಸುತ್ತೇನೆ. ಅವರು ಯಾವಾಗಲೂ ತಂಡಕ್ಕೆ ಉತ್ತಮವಾದದ್ದನ್ನೇ ಮಾಡುತ್ತಾರೆ. ನಾವೆಲ್ಲರೂ ಒಗ್ಗೂಡಿ ಅವರನ್ನು ಬೆಂಬಲಿಸಬೇಕು. ರಜತ್ ಅವರು ಈ ಆವೃತ್ತಿಯನ್ನು ಭರ್ಜರಿಯಾಗಿ ಪ್ರಾರಂಭಿಸಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner