ODI World Cup: ಕೊಹ್ಲಿ ಆಟವಂದ್ರೆ ಪಾಕಿಸ್ತಾನಕ್ಕೆ ಯಾಕೆ ಅಷ್ಟೊಂದು ಭಯ; ಈ ದಾಖಲೆಗಳೇ ವಿರಾಟರೂಪಕ್ಕೆ ಸಾಕ್ಷಿ
ಕನ್ನಡ ಸುದ್ದಿ  /  ಕ್ರಿಕೆಟ್  /  Odi World Cup: ಕೊಹ್ಲಿ ಆಟವಂದ್ರೆ ಪಾಕಿಸ್ತಾನಕ್ಕೆ ಯಾಕೆ ಅಷ್ಟೊಂದು ಭಯ; ಈ ದಾಖಲೆಗಳೇ ವಿರಾಟರೂಪಕ್ಕೆ ಸಾಕ್ಷಿ

ODI World Cup: ಕೊಹ್ಲಿ ಆಟವಂದ್ರೆ ಪಾಕಿಸ್ತಾನಕ್ಕೆ ಯಾಕೆ ಅಷ್ಟೊಂದು ಭಯ; ಈ ದಾಖಲೆಗಳೇ ವಿರಾಟರೂಪಕ್ಕೆ ಸಾಕ್ಷಿ

Virat Kohli Records: ವೀಕ್ಷಕ ವಿವರಣೆಕಾರ ಹರ್ಷೆ ಭೋಗ್ಲೆ ಅವರ “ಕೊಹ್ಲಿ ಗೋಸ್‌ ಡೌನ್‌ ದ ಗ್ರೌಂಡ್‌, ಕೊಹ್ಲಿ ಗೋಸ್‌ ಔಟ್‌ ಆಫ್‌ ದ ಗ್ರೌಂಡ್” ಎಂಬ ಕಾಮೆಂಟರಿ ಕ್ರಿಕೆಟ್‌ ಅಭಮಾನಿಗಳ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿರಬಹುದು. ಕೊಹ್ಲಿ ವಿರಾಟ್‌ರೂಪವನ್ನು ಕಣ್ತುಂಬಿಕೊಳ್ಳುವುದೇ ರೋಚಕ. ಅದರಲ್ಲೂ ಪಾಕಿಸ್ತಾನ ವಿರುದ್ಧ ಆ ಅಬ್ಬರ ದುಪ್ಪಟ್ಟು.

ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ವಿರಾಟ್‌ ಕೊಹ್ಲಿ
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ವಿರಾಟ್‌ ಕೊಹ್ಲಿ (AP)

ಇತ್ತೀಚೆಗೆ ಏಷ್ಯಾಕಪ್‌ ಸೂಪರ್‌ ಫೋರ್‌ ಪಂದ್ಯದಲ್ಲಿ ಪಾಕ್‌ ವಿರುದ್ಧದ ಆ ಅಮೋಘ ಶತಕ, ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕ್‌ ವಿರುದ್ಧದ ಮ್ಯಾಚ್‌ ವಿನ್ನಿಂಗ್ ಅಜೇಯ ‌82‌ ರನ್, 2012ರ ಏಷ್ಯಾಕಪ್‌ನಲ್ಲಿ ಅದೇ ಪಾಕಿಸ್ತಾನ ವಿರುದ್ಧ ಚೇಸಿಂಗ್‌ ವೇಳೆ ಅಬ್ಬರದ 183 ರನ್... ಇವೆಲ್ಲಾ ಕ್ರಿಕೆಟ್‌ ಅಭಿಮಾನಿಗಳ ಕಣ್ಣ ಮುಂದೆ ಆಗಾಗ ಹಾದುಹೋಗುವ ರೋಚಕ ಸನ್ನಿವೇಶಗಳು. ವಿರಾಟ್‌ ಕೊಹ್ಲಿ ಎಂಬ ರನ್‌ ಮಷಿನ್‌ ಅಂದ್ರೆ, ಪಾಕಿಸ್ತಾನ ತಂಡಕ್ಕೆ ಹಿಂದಿನಿಂದಲೂ ಭಾರಿ ಭಯ. ಆತ ಕ್ರೀಸ್‌ಕಚ್ಚಿ ಆಡಿದ ಅಂದ್ರೆ ಸೋಲು ಕಟ್ಟಿಟ್ಟ ಬುತ್ತಿ. ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿ ದಾಖಲೆಗಳೇ ಈ ಉತ್ಪ್ರೇಕ್ಷೆಗೆ ಸಾಕ್ಷಿ.

ಕಳೆದ ವರ್ಷ, ಅಂದರೆ 2022ರ ಸೆಪ್ಟೆಂಬರ್‌ 23ರಂದು ಆಸ್ಟ್ರೇಲಿಯಾದ ಐತಿಹಾಸಿಕ ಎಂಸಿಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತವು ಸೋಲಿನ ಸುಳಿಯಲ್ಲಿತ್ತು. ಆಗ ಟೀಮ್‌ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದವರು ವಿರಾಟ್. ವೀಕ್ಷಕ ವಿವರಣೆಕಾರ ಹರ್ಷೆ ಭೋಗ್ಲೆ ಅವರ “Kohli goes down the ground… Kohli goes out of the ground” ಎಂಬ ಕಾಮೆಂಟರಿ ಕ್ರಿಕೆಟ್‌ ಅಭಮಾನಿಗಳ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿರಬಹುದು. ಆ ಕ್ಷಣ ರೋಮಾಂಚಕ.

ಸದ್ಯ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಪಾಕ್‌ ವಿರುದ್ಧ ಅದೇ ದಾಖಲೆಯಾಟವನ್ನು ಕೊಹ್ಲಿ ಮುಂದುವರೆಸುವ ನಿರೀಕ್ಷೆಯಿದೆ. ಅಕ್ಟೋಬರ್‌ 14ರಂದು ಪಾಕಿಸ್ತಾನ ವಿರುದ್ಧ ಭಾರತ ಕಣಕ್ಕಿಳಿಯಲಿದ್ದು, ವಿಶ್ವದ ಅತಿದೊಡ್ಡ ಕ್ರಿಕೆಟ್‌ ಮೈದಾನದಲ್ಲಿ ರೋಚಕ ಪಂದ್ಯದ ನಿರೀಕ್ಷೆಯಿದೆ. ಅದಕ್ಕೂ ಮುನ್ನ ಪಾಕಿಸ್ತಾನ ತಂಡದ ವಿರುದ್ಧ ಕೊಹ್ಲಿ ದಾಖಲೆಗಳು ಹೇಗಿವೆ ಎಂಬುದನ್ನು ನೋಡೋಣ.

2012ರ ಏಕದಿನ ಏಷ್ಯಾಕಪ್: 183 ರನ್

ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ವಿರಾಟ್‌ ಕೊಹ್ಲಿ ಗಳಿಸಿದ ಅತಿ ಹೆಚ್ಚು ರನ್‌ ಇದು. 2012ರಲ್ಲಿ ಮೀರ್‌ಪುರದಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಕೊಹ್ಲಿ ಪಾಕ್‌ ವಿರುದ್ಧ ಅಕ್ಷರಶಃ ವಿರಾಟ ರೂಪ ಪ್ರದರರ್ಶಿಸಿದ್ದರು. ಆಗ ಕೊಹ್ಲಿ ವಯಸ್ಸು 24 ವರ್ಷ. ಆದ್ರೆ ವಿರಾಟ್‌ ರೌದ್ರಾವತಾರ ನೋಡಿ ಪಾಕ್‌ ಬೆಚ್ಚಿಬಿತ್ತು, ಬೌಲರ್‌ಗಳ ಬೆವರು ಹರಿದಿತ್ತು. ಗೆಲ್ಲಲು 330 ರನ್‌ಗಳ ಬೃಹತ್ ಮೊತ್ತ ಪಡೆದ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದು ಇದೇ ವಿರಾಟ್. ಗೌತಮ್ ಗಂಭೀರ್ ಔಟಾದ ಬಳಿಕ ಮೊದಲ ಓವರ್‌ನಲ್ಲಿಯೇ ಕ್ರೀಸ್‌ಗೆ ಕಾಲಿಟ್ಟ ಚೇಸ್‌ ಮಾಸ್ಟರ್‌, ಭರ್ಜರಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು. ಅವರ ಆಟದ ನೆರವಿಂದ ಭಾರತವು ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಗುರಿ ಸಾಧಿಸಿತು. ಈ ನಡುವೆ ಕೊಹ್ಲಿ ಕೇವಲ 148 ಎಸೆತಗಳಲ್ಲಿ 183 ರನ್ ಗಳಿಸಿ ಔಟಾದರು. ಆದರೂ ಭಾರತವು ಆರು ವಿಕೆಟ್‌ಗಳ ಜಯ ಸಾಧಿಸಿತು.

2015ರ ಏಕದಿನ ವಿಶ್ವಕಪ್: 107 ರನ್

‌2011ರಲ್ಲಿ ಚೊಚ್ಚಲ ವಿಶ್ವಕಪ್‌ ಆಡಿದ ಅನುಭವ ಹೊಂದಿದ್ದ ವಿರಾಟ್‌, 2015ರಲ್ಲಿ ಮತ್ತಷ್ಟು ಅನುಭವದೊಂದಿಗೆ ತಮ್ಮ ಎರಡನೇ ವಿಶ್ವಕಪ್ ಆಡಿದರು. ಅಲ್ಲಿಯೂ ಪಾಕ್‌ ವಿರುದ್ಧ ಭಾರತಕ್ಕೆ ಗೆಲುವು ಒಲಿಯಿತು. ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತು. 107 ರನ್‌ ಸಿಡಿಸಿ ಪಾಕಿಸ್ತಾನವನ್ನು ಮತ್ತೊಮ್ಮೆ ಕಾಡಿದರು. ಟೀಮ್‌ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 300 ರನ್‌ ಗಳಿಸಿತು. ಆದರೆ, ಪಾಕಿಸ್ತಾನವು 224 ರನ್‌ಗಳಿಗೆ ಆಲೌಟ್ ಆಯ್ತು. ಕೊಹ್ಲಿ ಪಂದ್ಯಶ್ರೇಷ್ಠರಾದರು.

2019ರ ಏಕದಿನ ವಿಶ್ವಕಪ್; 77 ರನ್

ವಿಶ್ವಕಪ್‌ನ ಕೊನೆಯ ಆವೃತ್ತಿಯಲ್ಲಿಯೂ ಪಾಕ್‌ ವಿರುದ್ಧ ಭಾರತ ಅಬ್ಬರಿಸಿತು. ಇಂಗ್ಲೆಂಡ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಪರ ರೋಹಿತ್ ಶರ್ಮಾ ಭರ್ಜರಿ 140 ರನ್ ಸಿಡಿಸಿದ್ದರು. ಕೊಹ್ಲಿ ಕೂಡಾ 65 ಎಸೆತಗಳಲ್ಲಿ 77 ರನ್‌ ಸಿಡಿಸಿದರು. ಅಂತಿಮವಾಗಿ ಭಾರತ 336/5 ರನ್‌ ಪೇರಿಸಿತು. ಮಳೆ ಅಡ್ಡಿಪಡಿಸಿದ ಆ ಪಂದ್ಯದಲ್ಲಿ ಭಾರತ ಅಂತಿಮವಾಗಿ ಡಿಎಲ್‌ಎಸ್‌ ನಿಯಮದ ಪ್ರಕಾರ 89 ರನ್‌ಗಳಿಂದ ಗೆದ್ದಿತು.

2023ರ ಏಕದಿನ ಏಷ್ಯಾಕಪ್: ಅಜೇಯ 122 ರನ್‌

ಪಾಕ್‌ ವಿರುದ್ಧದ ಸೂಪರ್‌ ಫೋರ್‌ ಪಂದ್ಯದಲ್ಲಿ ಮತ್ತೆ ಪಾಕ್‌ಗೆ ವಿರಾಟ್‌ ಕಂಟಕರಾದರು. 94 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ ಅಜೇಯ 122 ರನ್‌ ಸಿಡಿಸಿದ್ದರು. ಇಲ್ಲೂ ಮತ್ತೆ ಪಂದ್ಯಶ್ರೇಷ್ಠರಾದರು. ಇದೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಹಲವಾರು ದಾಖಲೆಗಳನ್ನು ಬರೆದರು. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 13 ಸಾವಿರ ರನ್‌ ಗಳಿಸಿದ ಸಾಧನೆ ಕೊಹ್ಲಿ ಹೆಸರಲ್ಲಿ ದಾಖಲಾಯ್ತು.

ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಅಂಕಿ-ಅಂಶ

ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ವಿರಾಟ್‌ ಈವರೆಗೆ 15 ಇನ್ನಿಂಗ್ಸ್‌ ಆಡಿದ್ದಾರೆ. ಅದರಲ್ಲಿ 55.16ರ ಸರಾಸರಿಯಲ್ಲಿ 662 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿವೆ. ಇದರಲ್ಲಿ 183 ರನ್‌ ಅವರ ಸಾರ್ವಕಾಲಿಕ ಅತಿ ಹೆಚ್ಚು ರನ್.‌ ಇದು ಏಕದಿನ ಅಂಕಿ ಅಂಶಗಳು ಮಾತ್ರ ಇದರ ಹೊರತಾಗಿ ಟಿ20 ಸ್ವರೂಪದಲ್ಲೂ ಪಾಕ್‌ ವಿರುದ್ಧ ವಿರಾಟ್‌ ಅಬ್ಬರಿಸಿದ್ದಾರೆ.

ಸದ್ಯ ಮುಂದೆ ಏಕದಿನ ವಿಶ್ವಕಪ್‌ ಸಮೀಪಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ಮತ್ತೆ ಇಂಡೋ ಪಾಕ್‌ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ರೋಚಕ ಪೈಪೋಟಿ ಒಂದೆಡೆಯಾದರೆ, ವಿರಾಟ್‌ ಹಾಗೂ ಪಾಕ್‌ ಬೌಲರ್‌ಗಳ ನಡುವೆಯೂ ಜಿದ್ದಿನ ಗುದ್ದಾಟ ಸಾಧ್ಯತೆ ಇದೆ.

Whats_app_banner