ಮತ್ತೆ ಹಾರ್ದಿಕ್ ಪಾಂಡ್ಯ ವಿರುದ್ಧ ಕೂಗಿದ ರೋಹಿತ್ ಫ್ಯಾನ್ಸ್; ಪ್ರೋತ್ಸಾಹಿಸಿ ಎಂದು 2019ರ ಘಟನೆ ನೆನಪಿಸಿದ ವಿರಾಟ್ ಕೊಹ್ಲಿ
Virat Kohli : ಹಾರ್ದಿಕ್ ಪಾಂಡ್ಯ ವಿರುದ್ಧ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳನ್ನು ವಿರಾಟ್ ಕೊಹ್ಲಿ ಶಾಂತಗೊಳಿಸಿದ್ದಾರೆ. ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸುವಂತೆ ಕೇಳಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ರೋಹಿತ್ ಶರ್ಮಾ (Rohit Sharma) ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಪಾಂಡ್ಯ ಬ್ಯಾಟಿಂಗ್ಗೆ ತೆರಳುವ ವೇಳೆ ಫ್ಯಾನ್ಸ್ ಜೋರಾಗಿ ರೋಹಿತ್.. ರೋಹಿತ್.. ಎಂದು ಕೂಗಿದ್ದಾರೆ. ಕಳೆದ ನಾಲ್ಕು ಪಂದ್ಯಗಳಿಂದಲೂ ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಮುಂಬೈ ಇಂಡಿಯನ್ಸ್ (Mumbai Indians) ನಾಯಕ ಮತ್ತೆ ಅಂತಹದ್ದೇ ಸನ್ನಿವೇಶಕ್ಕೆ ಸಾಕ್ಷಿಯಾದರು. ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸುವಂತೆ ವಿರಾಟ್ ಕೊಹ್ಲಿ ಮನವಿ ಮಾಡಿದ್ದು ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಆ ಮೂಲಕ 2019ರ ಘಟನೆಯನ್ನು ನೆನಪಿಸಿದ್ದಾರೆ.
2019ರ ಏಕದಿನ ವಿಶ್ವಕಪ್‌ನಲ್ಲಿ ಓವಲ್‌ನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ವಿರುದ್ಧ ಚೀಟರ್.. ಚೀಟರ್ ಎಂದು ಪ್ರೇಕ್ಷಕರು ಬೊಬ್ಬೆ ಹೊಡೆಯುತ್ತಿದ್ದರು. ಆಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದು ಕೊಹ್ಲಿ ಮನವಿ ಮಾಡಿದ್ದರು. ಅದೇ ರೀತಿ 2023ರ ವಿಶ್ವಕಪ್‌ನಲ್ಲಿ ನವೀನ್-ಉಲ್-ಹಕ್ ವಿರುದ್ಧ ಅಭಿಮಾನಿಗಳು ಗೇಲಿ ಮಾಡಿದ್ದರು. ಆಗ ವಿರಾಟ್ ದೆಹಲಿಯಲ್ಲಿ ಹಾಗೇ ಮಾಡಬಾರದು ಎಂದು ಹೇಳಿದ್ದರು. ಇದೀಗ ವಿರಾಟ್ ಕೊಹ್ಲಿ 2024ರ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ವಿರುದ್ಧ ಕೂಗಬಾರದೆಂದು ಮುಂಬೈ ಅಭಿಮಾನಿಗಳಿಗೆ ಕೇಳಿಕೊಂಡರು.
ಕೊಹ್ಲಿ ಹೇಳಿದ ಬಳಿಕ ಸುಮ್ಮನಾದ ಫ್ಯಾನ್ಸ್
ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯದಲ್ಲಿ ಅತಿಥೇಯರು ರನ್ ಚೇಸ್ನಲ್ಲಿ ರೋಹಿತ್ ಶರ್ಮಾ ಔಟಾದ ಬಳಿಕ ಬ್ಯಾಟಿಂಗ್ ಮಾಡಲು ಹಾರ್ದಿಕ್ ಪಾಂಡ್ಯ ಹೊರ ನಡೆದಾಗ ಆತನ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ಟೇಡಿಯಂ ರೂಫ್ ಕಿತ್ತೊಗುವಂತೆ ಕೂಗಿದರು. ಇದೇ ವೇಳೆ ಕೊಹ್ಲಿ, ಅಭಿಮಾನಿಗಳನ್ನು ಶಾಂತಗೊಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಭಾರತದ ಪರ ಆಡುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಪ್ರೇಕ್ಷಕರಿಗೆ ನೆನಪಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಹೇಳಿದ ಬೆನ್ನಲ್ಲೇ ವಾಂಖೆಡೆ ಮೈದಾನದಲ್ಲಿ ಪ್ರೇಕ್ಷಕರು ಸುಮ್ಮನಾದರು. ವಿಲ್ ಜಾಕ್ಸ್ ಇನ್ನಿಂಗ್ಸ್ನ ಮೊದಲ ಎಸೆತ ಎದುರಿಸಲು ಹಾರ್ದಿಕ್ ಸಜ್ಜಾಗುತ್ತಿದ್ದಂತೆ, ಹಾರ್ದಿಕ್.. ಹಾರ್ದಿಕ್.. ಎಂದು ಹರ್ಷೋದ್ಘಾರಗಳು ಕೇಳಿ ಬಂದವು. ಅಲ್ಲದೆ, ಈ ಪಂದ್ಯದಲ್ಲಿ ಕೇವಲ 6 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 21 ರನ್ ಬಾರಿಸಿದರು. ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿತು. ಇದು ಅಭಿಮಾನಿಗಳಿಗೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ಮೂವರು ಅರ್ಧಶತಕ ಸಿಡಿಸಿದರು. ಫಾಫ್ ಡು ಪ್ಲೆಸಿಸ್ (61), ರಜತ್ ಪಾಟೀದಾರ್ (50), ದಿನೇಶ್ ಕಾರ್ತಿಕ್ (53) ಅವರು ಭರ್ಜರಿ ಆಟದ ನೆರವಿನಿಂದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಪರ ಇಶಾನ್ ಕಿಶನ್ (69), ಸೂರ್ಯಕುಮಾರ್ ಯಾದವ್ (52) ಮತ್ತು ರೋಹಿತ್ ಶರ್ಮಾ (39) ಅವರ ಆರ್ಭಟದಿಂದ ಅಮೋಘ 7 ವಿಕೆಟ್ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದು ಮಿಂಚಿದರು.
ಮುಂಬೈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ. 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಒಟ್ಟು 5 ಪಂದ್ಯಗಳಲ್ಲಿ ಮೂರು ಸೋಲು ಮತ್ತು ಎರಡು ಗೆಲುವು ದಾಖಲಿಸಿದೆ. ಆರ್ಸಿಬಿ 9ನೇ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ 1 ಗೆಲುವು, 5 ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ 10ನೇ ಸ್ಥಾನದಲ್ಲಿದೆ.