ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಲೊಲ್ಲದ ವಿರಾಟ್ ಕೊಹ್ಲಿ; ಬಿಸಿಸಿಐ ಯುಟರ್ನ್ ಪ್ರಯತ್ನ ವಿಫಲ
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ನಿರ್ಧಾರದ ಬಗ್ಗೆ ಗಟ್ಟಿ ನಿಲುವು ತಾಳಿದ್ದಾರೆ ಎಂದು ವರದಿಯಾಗಿದೆ. ಅವರ ಮನಸ್ಸನ್ನು ಬದಲಾಯಿಸಲು ಬಿಸಿಸಿಐನಿಂದ ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡುವುದು ಅನುಮಾನ.

ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ, ಪ್ರಸ್ತುತ ಸನ್ನಿವೇಶವು ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್‌ಗೂ ಕಠಿಣವಾಗಿದೆ. ಐಪಿಎಲ್ ಪಂದ್ಯಗಳನ್ನು ಮುಂದೂಡಿದ್ದು ಒಂದೆಡೆಯಾದರೆ, ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಇಚ್ಛೆ ವ್ಯಕ್ತಪಡಿಸಿರುವುದು ಮತ್ತೊಂದು ಕಡೆ. ಟೆಸ್ಟ್ ಕ್ರಿಕೆಟ್‌ನಿಂದ ಹಿಂದೆ ಸರಿಯುವ ಕುರಿತು ಅವರು ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿರಾಟ್ ಕೊಹ್ಲಿಗೆ ಬಿಸಿಸಿಐ ಒತ್ತಾಯಿಸಿದ್ದು, ಮತ್ತೆ ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರೆಸಲು ಹೇಳುವ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿವೆ. ಇದು ಅಭಿಮಾನಿಗಳಿಗೆ ತುಸು ಸಮಾಧಾನ ಮೂಡಿಸಿತ್ತು.
ಭಾರತ ಕ್ರಿಕೆಟ್ ತಂಡವು ಜೂನ್ 20ರಿಂದ ಹೆಡಿಂಗ್ಲೆಯಲ್ಲಿ ಆರಂಭವಾಗುವ ಐದು ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂಥ ಅನುಭವಿ ಆಟಗಾರರು ಟೆಸ್ಟ್‌ಗೆ ವಿದಾಯ ಹೇಳಿದ್ದಾರೆ. ಈ ನಡುವೆ ವಿರಾಟ್ ಕೂಡಾ ನಿವೃತ್ತಿ ಹೇಳಿದರೆ ತಂಡದಲ್ಲಿ ಅನುಭವದ ಕೊರತೆಯಾಗಲಿದೆ.
ಬಿಸಿಸಿಐ ಪ್ರಯತ್ನ ವಿಫಲ
ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಬ್ರಿಯಾನ್ ಲಾರಾ ಅವರಂತಹ ದಿಗ್ಗಜರ ಮನವಿಗಳು ಹಾಗೂ ಬಿಸಿಸಿಐ ನಡೆಸಿದೆ ಎಲ್ಲಾ ರೀತಿಯ ಪ್ರಯತ್ನಗಳ ಹೊರತಾಗಿಯೂ, ಕೊಹ್ಲಿ ತಮ್ಮ ನಿವೃತ್ತಿಯ ದೃಢ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಕೊಹ್ಲಿ ನಿವೃತ್ತಿ ಬಹುತೇಕ ಖಚಿತ ಎನ್ನಲಾಗುತ್ತಿದೆ.
“ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಇಂಗಿತವನ್ನು ಕೊಹ್ಲಿ ಎರಡು ವಾರಗಳ ಹಿಂದೆಯೇ ಆಯ್ಕೆದಾರರಿಗೆ ತಿಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ಬಿಸಿಸಿಐ ಅವರ ಮನವೊಲಿಸಲು ಪ್ರಯತ್ನಿಸುತ್ತಿತ್ತು. ಆದಾಗ್ಯೂ, ಅವರು ಇನ್ನೂ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ಅಂತಿಮ ನಿರ್ಧಾರವು ಮುಂದಿನ ವಾರದ ಆಯ್ಕೆ ಸಭೆ ವೇಳೆಗೆ ಬರಲಿದೆ,” ಎಂದು ಮೂಲವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇತ್ತೀಚೆಗೆ ಕಳಪೆ ಪ್ರದರ್ಶನ
ಕೊಹ್ಲಿ ಬಿಸಿಸಿಐ ಮಾತನ್ನು ಕೇಳಲು ನಿರಾಕರಿಸಿರುವುದರಲ್ಲಿ ಆಶ್ಚರ್ಯವೇನಲ್ಲ. ವಿರಾಟ್ ಕೊಹ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗುವವರು. ನಿವೃತ್ತಿಯ ವಿಷಯವು ಆಯಾ ಆಟಗಾರನ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು. ಇತರರು ಏನು ಹೇಳುತ್ತಾರೋ ಅದರಿಂದ ಕೊಹ್ಲಿ ಪ್ರಭಾವಿತರಾಗುವವರಲ್ಲ. ಇತ್ತೀಚಿನ ಸರಣಿಗಳಲ್ಲಿ ಕೊಹ್ಲಿ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಸತ್ಯ. ಅದರಲ್ಲೂ ಆಫ್-ಸ್ಟಂಪ್‌ನ ಹೊರಗಿನ ಎಸೆತವನ್ನು ಎದುರಿಸಲುವಲ್ಲಿ ಕೊಹ್ಲಿಯ ದೌರ್ಬಲ್ಯ ಸ್ಪಷ್ಟವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು 1-3 ಅಂತರದಿಂದ ಸರಣಿ ಸೋತ ನಂತರ ಕೊಹ್ಲಿ ಟೆಸ್ಟ್‌ನಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಂತಿದೆ. ತಮ್ಮ ನಿವೃತ್ತಿಯಿಂದ ಮತ್ತೊಬ್ಬ ಪ್ರತಿಭಾವಂತ ಆಟಗಾರನಿಗೆ ಸ್ಥಾನ ಸಿಗಬಹುದು ಎಂಬ ಯೋಚನೆ ಅವರದ್ದು.