ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ವಿದಾಯ; ಇದು ನನ್ನ ಕೊನೆಯ ಟಿ20 ವಿಶ್ವಕಪ್​ ಎಂದ ಕಿಂಗ್

ಟಿ20 ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ವಿದಾಯ; ಇದು ನನ್ನ ಕೊನೆಯ ಟಿ20 ವಿಶ್ವಕಪ್​ ಎಂದ ಕಿಂಗ್

ವಿರಾಟ್‌ ಕೊಹ್ಲಿ ಟಿ20 ಸ್ವರೂಪಕ್ಕೆ ಅಚ್ಚರಿಯ ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಮಣಿಸಿ ಭಾರತ ತಂಡವು ಟಿ20 ವಿಶ್ವಕಪ್‌ ಗೆಲ್ಲುತ್ತಿದ್ದಂತೆಯೇ, ಕಿಂಗ್‌ ಕೊಹ್ಲಿ ಟಿ20 ನಿವೃತ್ತಿ ಘೋಷಿಸಿದ್ದಾರೆ.

ಟಿ20 ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ವಿದಾಯ; ಇದು ನನ್ನ ಕೊನೆಯ ಟಿ20 ವಿಶ್ವಕಪ್​ ಎಂದ ಕಿಂಗ್
ಟಿ20 ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ವಿದಾಯ; ಇದು ನನ್ನ ಕೊನೆಯ ಟಿ20 ವಿಶ್ವಕಪ್​ ಎಂದ ಕಿಂಗ್ (REUTERS)

ಟಿ20 ವಿಶ್ವಕಪ್‌ ಗೆಲುವಿನೊಂದಿಗೆ ವಿರಾಟ್‌ ಕೊಹ್ಲಿ (Virat Kohli) ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. 13 ವರ್ಷಗಳಿಂದ ಭಾರತ ಬಯಸಿದ್ದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಟೀಮ್‌ ಇಂಡಿಯಾ ಕೊನೆಗೂ ಯಶಸ್ವಿಯಾಗಿದೆ. ಪಂದ್ಯದಲ್ಲಿ ನಿರ್ಣಾಯಕ ಅರ್ಧಶತಕ ಸಿಡಿಸಿದ ವಿರಾಟ್‌, ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಮಾತನಾಡಿದ ಅವರು, ಭಾರತದ ಪರ ಇದು ತಮ್ಮ ಕೊನೆಯ ಟಿ20 ಪಂದ್ಯ ಎಂದು ಹೇಳಿದ್ದಾರೆ. ಇದರೊಂದಿಗೆ ಚುಟುಕು ಸ್ವರೂಪಕ್ಕೆ ವಿರಾಟ್‌ ಕೊಹ್ಲಿ ವಿದಾಯ ಹೇಳಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗುವ ಸಲುವಾಗಿ ಈ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಟೂರ್ನಿಯು ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಭಾರತದ ಪರ ಕೊನೆಯ ಟೂರ್ನಿ ಎಂಬುದು ಮೊದಲೇ ಸ್ಪಷ್ಟವಾಗಿತ್ತು. ಈ ನಡುವೆ, ವಿರಾಟ್‌ ಹಾಗೂ ರೋಹಿತ್‌ ಪಾಲಿಗೆ ಬಹುತೇಕ ಕೊನೆಯ ವಿಶ್ವಕಪ್‌ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿತ್ತು. ಅದರಂತೆಯೇ ವಿರಾಟ್‌ ವಿಶ್ವಕಪ್‌ ಮಾತ್ರವಲ್ಲದೆ ಟಿ20 ಸ್ವರೂಪಕ್ಕೂ ವಿದಾಯ ಹೇಳಿದ್ದಾರೆ.

ಯುವ ಆಟಗಾರರಿಗೆ ಅವಕಾಶ ನೀಡುವ ಸಮಯ

ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ ಏನಂದ್ರು? ಇದನ್ನು ಅವರ ಮಾತಲ್ಲೇ ಕೇಳಿ. ಮುಂದಿರುವುದು ವಿರಾಟ್‌ ಮಾತುಗಳು.

ಟ್ರೆಂಡಿಂಗ್​ ಸುದ್ದಿ

ಇದು ನನ್ನ ಕೊನೆಯ ಟಿ20 ವಿಶ್ವಕಪ್. ನಾವು ನಿಖರವಾಗಿ ಸಾಧಿಸಲು ಬಯಸಿದ್ದು ಇದನ್ನೇ. ಕೆಲವೊಮ್ಮ ನಮ್ಮಿಂದ ರನ್‌ ಗಳಿಸಲು ಆಗುವುದಿಲ್ಲ. ಆದರೆ, ದೇವರು ದೊಡ್ಡವನು. ಭಾರತದ ಪರ ಇದು ನನ್ನ ಕೊನೆಯ ಟಿ20 ಪಂದ್ಯ. ನಾವು ಆ ಒಂದು ಕಪ್ ಗೆಲ್ಲಬೇಕೆಂದು ಸುದೀರ್ಘ ಸಮಯದಿಂದ ಬಯಸಿದ್ದೆವು. ಅದು ಕೊನೆಗೂ ಸಾಧ್ಯವಾಗಿದೆ. ಮುಂದಿನ ಪೀಳಿಗೆ ಟಿ20 ಸ್ವರೂಪವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಅವಕಾಶ ನೀಡುವ ಸಮಯ. ನಾವು ಯುವ ಆಟಗಾರರ ಆಟವನ್ನು ಐಪಿಎಲ್‌ನಲ್ಲಿ ನೋಡಿದ್ದೇವೆ. ಅವರು ಭಾರತದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಈ ತಂಡವನ್ನು ಇಲ್ಲಿಂದ ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.

ಕಪ್‌ ಗೆಲ್ಲಲು ರೋಹಿತ್ ಭಾರತ ತಂಡದಲ್ಲಿ ಹೆಚ್ಚು ಅರ್ಹರು

ಐಸಿಸಿ ಟ್ರೋಫಿ ಗೆಲ್ಲಲು ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ಇದು ನಾನೊಬ್ಬನೇ ಅಲ್ಲ. ರೋಹಿತ್‌ ಕೂಡಾ ಅಷ್ಟೇ. ಅವರು 9 ಟಿ20 ವಿಶ್ವಕಪ್‌ಗಳನ್ನು ಆಡಿದ್ದಾರೆ. ಇದೇ ವೇಳೆ ಇದು ನನ್ನ ಪಾಲಿನ ಆರನೇ ವಿಶ್ವಕಪ್. ಈ ಕಪ್‌ ಗೆಲ್ಲಲು ರೋಹಿತ್ ಭಾರತ ತಂಡದಲ್ಲಿ ಇತರರಿಗಿಂತ ಹೆಚ್ಚು ಅರ್ಹರು. ನಾವು ಆ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪಂದ್ಯ ಗೆದ್ದ ನಂತರ ನಮ್ಮ ಭಾವನೆಗಳನ್ನು ವಿವರಿಸುವುದು ನಿಜಕ್ಕೂ ಕಷ್ಟ. ನಾನು ಯಾವ ರೀತಿಯ ಮನಸ್ಥಿತಿಯಲ್ಲಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು.

ಕಳೆದ ಕೆಲವು ಪಂದ್ಯಗಳಲ್ಲಿ ನನಗೆ ಹೆಚ್ಚು ಆತ್ಮವಿಶ್ವಾಸವಿರಲಿಲ್ಲ. ನಾನು ಆ ಪಂದ್ಯಗಳಲ್ಲಿ ನಿಜಕ್ಕೂ ಚೆನ್ನಾಗಿ ಆಡಿಲ್ಲ. ಆದರೆ ದೇವರು ನಮ್ಮನ್ನು ಆಶೀರ್ವದಿಸಿದಾಗ, ಕೆಲವೊಮ್ಮೆ ಊಹೆಗೂ ನಿಲುಕದ್ದು ಸಾಧ್ಯವಾಗುತ್ತದೆ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾವು ಪಂದ್ಯದಲ್ಲಿ ಕಂಬ್ಯಾಕ್‌ ಮಾಡಿದ ರೀತಿ, ತಂಡದ ಹುಡುಗರು ತೋರಿಸಿದ ಆಟವನ್ನು ನೋಡಿದರೆ, ಯಾವುದೂ ಅಷ್ಟು ಸುಲಭವಾಗಿರಲಿಲ್ಲ. ನಮ್ಮ ಪಾಲಿಗೆ ಇದು ಅದ್ಭುತ ದಿನ.