ಭಾರತ ತಂಡದಲ್ಲಿ ಅವಕಾಶ ಪಡೆಯಬೇಕೇ? ರೋಹಿತ್-ಕೊಹ್ಲಿ ಟೆಸ್ಟ್ ಭವಿಷ್ಯದ ಕುರಿತು ಗೌತಮ್ ಗಂಭೀರ್ ಕೊಟ್ರು ಹೊಸ ಅಪ್ಡೇಟ್
Gautam Gambhir: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಸೂಕ್ಷ್ಮ ಸಂದೇಶ ರವಾನಿಸಿದ ಹೆಡ್ ಕೋಚ್ ಗೌತಮ್ ಗಂಭೀರ್ ಅವರು, ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
10 ವರ್ಷಗಳ ನಂತರ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು (BGT 2024-25) ಕಳೆದುಕೊಂಡಿದೆ. ಸತತ ಐದನೇ ಬಾರಿಗೆ ಈ ಸರಣಿ ಗೆಲ್ಲುವ ಗುರಿಯೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡ (Team India), ಇದೀಗ ನಿರಾಸೆಯೊಂದಿಗೆ ತವರಿಗೆ ಮರಳುತ್ತಿದೆ. ಇದಕ್ಕೆ ಕಾರಣ ಭಾರತೀಯ ಬ್ಯಾಟರ್ಗಳ ವೈಫಲ್ಯ. ಸೋಲಿನ ಬೆನ್ನಲ್ಲೇ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಹೆಡ್ಕೋಚ್ ಗೌತಮ್ ಗಂಭೀರ್ (Gautam Gambhir), ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರಿಗೆ ಪರೋಕ್ಷವಾಗಿ ವಾರ್ನಿಂಗ್ ನೀಡಿದ್ದಾರೆ. ಇನ್ಮುಂದೆ ಭಾರತ ತಂಡದಲ್ಲಿ ಆಡಬೇಕು ಎಂದರೆ ಆಟಗಾರರು ದೇಶೀಯ ಕ್ರಿಕೆಟ್ ಟೂರ್ನಿ ಆಡಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತ ತಂಡ ಮುಂದಿನ 6 ತಿಂಗಳ ತನಕ ಯಾವುದೇ ಟೆಸ್ಟ್ ಪಂದ್ಯವನ್ನು ಆಡುವುದಿಲ್ಲ. ಹೀಗಾಗಿ ಕೊಹ್ಲಿ ಮತ್ತು ರೋಹಿತ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಕಳಪೆ ಫಾರ್ಮ್ನಲ್ಲಿದ್ದರೂ ಇಬ್ಬರೂ ರಣಜಿ ಆಡದೇ ಇರುವ ಕುರಿತು ಮಾಜಿ ಕ್ರಿಕೆಟಿಗರು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ ಕೊಹ್ಲಿ ಮತ್ತು ರೋಹಿತ್ ದೇಶೀಯ ಕ್ರಿಕೆಟ್ ಆಡಿ ವರ್ಷಗಳೇ ಕಳೆದಿವೆ. ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆದ ನಂತರ ಅವರು ರಣಜಿ ಕ್ರಿಕೆಟ್ ಆಡಿಯೇ ಇಲ್ಲ. ಇದೀಗ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಗಂಭೀರ್ ಸ್ಪಷ್ಟ ಸಂದೇಶ ರವಾನಿಸಿದ್ದು, ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಎಚ್ಚರಿಕೆಯ ಸಂದೇಶ ಸೂಚಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನದ ನಂತರ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಟೀಕೆಗೆ ಗುರಿಯಾಗಿದ್ದಾರೆ. ಇದು ಇತ್ತೀಚೆಗೆ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದ ರವಿಚಂದ್ರನ್ ಅಶ್ವಿನ್ ಹಾದಿಯನ್ನೇ ಅನುಸರಿಸಬಹುದು ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ಕಳಪೆ ಫಾರ್ಮ್ನಿಂದಾಗಿ ಸರಣಿಯ ಅಂತಿಮ ಟೆಸ್ಟ್ನಿಂದ ಹೊರಗುಳಿದಿದ್ದ ರೋಹಿತ್, ಸೆಪ್ಟೆಂಬರ್ನಿಂದ 15 ಇನ್ನಿಂಗ್ಸ್ಗಳಲ್ಲಿ ಕಣಕ್ಕಿಳಿದಿದ್ದು 10.93 ಸರಾಸರಿಯಲ್ಲಿ 164 ರನ್ ಮಾತ್ರ ಗಳಿಸಿದ್ದಾರೆ. ಬಿಜಿಟಿ ಸರಣಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 6.20 ಮಾತ್ರ. ಗಳಿಸಿದ ರನ್ 31 ಮಾತ್ರ. ಇನ್ನು ಕೊಹ್ಲಿ 19 ಇನ್ನಿಂಗ್ಸ್ಗಳಲ್ಲಿ 22.47 ಸರಾಸರಿಯಲ್ಲಿ 382 ರನ್ ಗಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್-ಕೊಹ್ಲಿಯ ಭವಿಷ್ಯವೇನು?
ಇಂಗ್ಲೆಂಡ್ ಪ್ರವಾಸದೊಂದಿಗೆ ಜೂನ್ನಲ್ಲಿ ಪ್ರಾರಂಭವಾಗುವ ಮುಂದಿನ ಡಬ್ಲ್ಯುಟಿಸಿ ಆವೃತ್ತಿಗೆ ಕೊಹ್ಲಿ-ರೋಹಿತ್ ಅವರನ್ನು ಪರಿಗಣಿಸುವ ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಲಾಗಿದೆ. ಇಬ್ಬರ ಆಟಗಾರರ ಭವಿಷ್ಯದ ಕುರಿತ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ನಾನು ಯಾವುದೇ ಆಟಗಾರನ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಅದು ಅವರಿಗೆ ಬಿಟ್ಟದ್ದು. ಆದರೆ ಅವರಿಬ್ಬರಲ್ಲಿ ಇನ್ನೂ ಹಸಿವಿದೆ, ಉತ್ಸಾಹ ಇದೆ. ಇಬ್ಬರು ಕಠಿಣ ಪರಿಶ್ರಮ ಹಾಕುವವರು. ಅವರು ಭಾರತೀಯ ಕ್ರಿಕೆಟ್ ಅನ್ನು ಮುಂದೆ ಕೊಂಡೊಯ್ಯುವುದನ್ನು ಮುಂದುವರಿಸಬಹುದು ಎಂದು ಆಶಿಸುತ್ತೇವೆ. ನಾವು ಏನೇ ಯೋಜಿಸಿದರೂ ಅದು ಭಾರತೀಯ ಕ್ರಿಕೆಟ್ನ ಹಿತಾಸಕ್ತಿಗಾಗಿ ಅಷ್ಟೆ ಎಂದು ಅವರು ಹೇಳಿದ್ದಾರೆ.
ನನ್ನ ದೃಷ್ಟಿಕೋನ ಒಂದೇ…
ಎಲ್ಲರೊಂದಿಗೂ ಪ್ರಾಮಾಣಿಕವಾಗಿರುವುದು ನನ್ನ ಕೆಲಸ. ನಾನು ಕೆಲವು ಆಟಗಾರರಿಗೆ ಮಾತ್ರ ಆದ್ಯತೆ ನೀಡುತ್ತೇನೆ ಎನ್ನುವುದು ತಪ್ಪು. ಆದರೆ ನನ್ನ ಕೆಲಸವೆಂದರೆ ಪ್ರತಿಯೊಬ್ಬ ಆಟಗಾರನನ್ನು ಅವರು ಪದಾರ್ಪಣೆ ಮಾಡಲಿ ಅಥವಾ 100 ಟೆಸ್ಟ್ ಆಡಿರಲಿ ಇಬ್ಬರನ್ನೂ ನೋಡುವ ದೃಷ್ಟಿಕೋನ ಒಂದೇ ಇರುತ್ತದೆ. ಎಲ್ಲರೊಂದಿಗೆ ನ್ಯಾಯಯುತವಾಗಿರಬೇಕು ಎಂದಿದ್ದಾರೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ರಣಜಿ ಟ್ರೋಫಿ ಋತುವಿನ ದ್ವಿತೀಯಾರ್ಧದಲ್ಲಿ ಕೊಹ್ಲಿ-ರೋಹಿತ್ ಜೊತೆಗೆ ಉಳಿದವರು ಲಭ್ಯವಿರುತ್ತಾರೆ ಎಂದು ಗಂಭೀರ್ ಆಶಿಸಿದ್ದಾರೆ. ಪ್ರತಿಯೊಬ್ಬರೂ ಲಭ್ಯವಿದ್ದರೆ ದೇಶೀಯ ಕ್ರಿಕೆಟ್ ಆಡಬೇಕೆಂದು ನಾನು ಯಾವಾಗಲೂ ಬಯಸುತ್ತೇನೆ. ನಿಮಗೆ ಕೆಂಪು ಚೆಂಡಿನ ಕ್ರಿಕೆಟ್ ಆಡುವ ಬದ್ಧತೆ ಇದ್ದರೆ ದೇಶೀಯ ಪಂದ್ಯಗಳನ್ನು ಆಡಿ ಎಂದು ಸೂಚಿಸಿದ್ದಾರೆ.