ಭಯಪಡಬೇಡಿ, ಸದ್ಯಕ್ಕಿಲ್ಲ ನಿವೃತ್ತಿ; ರಿಟೈರ್ಮೆಂಟ್ ವದಂತಿ ತಳ್ಳಿಹಾಕಿದ ವಿರಾಟ್ ಕೊಹ್ಲಿ
ಅನೇಕ ಸಲ ನಿವೃತ್ತಿ ಯಾವಾಗ, ಏನು ಮಾಡುವಿರಿ ಎಂದು ಬಹಳಷ್ಟು ಮಂದಿ ಕೇಳಿದ್ದಾರೆ. ಆದರೆ ಆ ಬಗ್ಗೆ ನಾನು ಯಾವುದೇ ಯೋಜನೆ ಮಾಡಿಲ್ಲ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ನಿವೃತ್ತಿಯಾಗುತ್ತಾರೆ ಎಂದು ವದಂತಿ ಹಬ್ಬಿತ್ತು. ಅವತ್ತೇ ತನ್ನ ನಿವೃತ್ತಿ ನಿರ್ಧಾರದ ಕುರಿತು ಪರೋಕ್ಷವಾಗಿ ಮೌನ ಮುರಿದಿದ್ದರು. ಆದರೀಗ ನೇರವಾಗಿ ತನ್ನ ರಿಟೈರ್ಮೆಂಟ್ ಬಗ್ಗೆ ತುಟಿಬಿಚ್ಚಿದ್ದಾರೆ. ಭಯಪಡಬೇಡಿ, ನಾನು ಯಾವುದೇ ಘೋಷಣೆ ಮಾಡಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ನಾನು ಆಟವನ್ನು ಆನಂದಿಸುತ್ತಿದ್ದೇನೆ, ನಿವೃತ್ತಿ ಎಂಬುದು ಸದ್ಯಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದುಬೈನಲ್ಲಿ ಇತ್ತೀಚೆಗೆ ನಡೆದ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ ಅವರು ಆರ್ಸಿಬಿ ಇನ್ನೋವೇಶನ್ ಲ್ಯಾಬ್ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದರು. ‘ಭಯಪಡಬೇಡಿ. ನಾನು ಯಾವುದೇ ಘೋಷಣೆ (ನಿವೃತ್ತಿ) ಮಾಡುತ್ತಿಲ್ಲ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ನಾನು ಇನ್ನೂ ಆಡಲು ಇಷ್ಟಪಡುತ್ತೇನೆ. ಸಾಧನೆಗಳಿಗಾಗಿ ಅಲ್ಲ, ಆದರೆ ಕ್ರಿಕೆಟನ್ನು ಆನಂದಿಸಲು ಮಾತ್ರ ಆಡುತ್ತಿದ್ದೇನೆ’ ಎಂದು ನಿವೃತ್ತಿಯ ಚರ್ಚೆಗಳಿಗೆ ತೆರೆ ಎಳೆದರು.
ಸ್ಮರ್ಧಾತ್ಮಕ ಪ್ರವೃತ್ತಿ ಇರುವ ತನಕ ಆಡುವೆ ಎಂದ ಕೊಹ್ಲಿ
2024ರ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ಗೆ ದೂರ ಸರಿದ ವಿರಾಟ್, 'ನಾನು ಆಡುವುದನ್ನು ತುಂಬಾ ಇಷ್ಟಪಡುತ್ತಿದ್ದೇನೆ. ನನಗಿದು ಸ್ಪರ್ಧಾತ್ಮಕ ಮನೋಭಾವ ಕೂಡ ಆಗಿದೆ. ಆಟದ ಮೇಲಿನ ಪ್ರೀತಿ ತುಂಬಾ ಇದೆ. ಸ್ಮರ್ಧಾತ್ಮಕ ಪ್ರವೃತ್ತಿ ಇರುವ ತನಕ ನಾನು ಆಡುತ್ತಲೇ ಇರುತ್ತೇನೆ. ನಾನು ಹಿಂದೆ ಹೇಳಿದಂತೆ, ನಾನು ಯಾವುದೇ ಸಾಧನೆಗಾಗಿ ಆಡುತ್ತಿಲ್ಲ. ಸ್ಪರ್ಧಾತ್ಮಕ ಮನೋಭಾವದಿಂದ ಆಟಗಾರನಿಗೆ ಆಟದಿಂದ ದೂರವಿರಲು ಸರಿಯಾದ ಸಮಯವನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ ಎಂದಿದ್ದಾರೆ.
ನಿಮಗೆ ತಿಳಿದಿದೆ, ಸ್ಪರ್ಧಾತ್ಮಕ ಮನೋಭಾವವು ನಿವೃತ್ತಿಯ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ನಿಮಗೆ ಅವಕಾಶ ನೀಡುವುದಿಲ್ಲ. ನಾನು ಈ ಬಗ್ಗೆ ರಾಹುಲ್ ದ್ರಾವಿಡ್ ಅವರೊಂದಿಗೆ ಬಹಳ ಮುಕ್ತವಾಗಿ ಸಂಭಾಷಣೆ ನಡೆಸಿದ್ದೇನೆ. ಬಹುಶಃ ಇನ್ನೊಂದು ತಿಂಗಳು. ಬಹುಶಃ ಇನ್ನೂ ಆರು ತಿಂಗಳು. ಆದ್ದರಿಂದ ಇದು ಉತ್ತಮ ಸಮತೋಲನ ಎಂದು ನಾನು ಭಾವಿಸುತ್ತೇನೆ. ನನ್ನ ಜೀವನದ ಈ ಸಮಯದಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ.
ನಾನೀಗ ಹೆಚ್ಚಿನ ಶ್ರಮ ಹಾಕಬೇಕಿದೆ ಎಂದ ಕೊಹ್ಲಿ
ಆದರೆ ವಯಸ್ಸು ತನ್ನ ಆಟದ ಅಗ್ರಸ್ಥಾನದಲ್ಲಿ ಉಳಿಯುವ ಇಡೀ ಪ್ರಕ್ರಿಯೆಯನ್ನು ಸ್ವಲ್ಪ ಕಷ್ಟಕರವಾಗಿಸಿದೆ ಎಂದ ಕೊಹ್ಲಿ, 'ನಾನು ನನ್ನ ಶಕ್ತಿ ಮೀರಿ ಶ್ರಮ ಹಾಕಬೇಕಿದೆ. ಈಗ ಇದಕ್ಕೆ ಸಾಕಷ್ಟು ಪ್ರಯತ್ನದ ಅಗತ್ಯವಿದೆ. ದೀರ್ಘಕಾಲ ಆಡಿದವರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ನೀವು 20 ವರ್ಷದವರಿದ್ದಾಗ ಮಾಡಬಹುದಾದಷ್ಟು ಕೆಲಸಗಳನ್ನು 30 ವರ್ಷದ ನಂತರ ಮಾಡಲು ಸಾಧ್ಯವಿಲ್ಲ. ನನ್ನ ಜೀವನದಲ್ಲಿ ಸ್ವಲ್ಪ ವಿಭಿನ್ನ ಹಂತದಲ್ಲಿ ಇದ್ದೇನೆ ಎಂದಿದ್ದಾರೆ.
ಅನೇಕ ಸಲ ನಿವೃತ್ತಿ ಯಾವಾಗ, ಏನು ಮಾಡುವಿರಿ ಎಂದು ಬಹಳಷ್ಟು ಮಂದಿ ಕೇಳಿದ್ದಾರೆ. ಆದರೆ ಆ ಬಗ್ಗೆ ನಾನು ಯಾವುದೇ ಯೋಜನೆ ಮಾಡಿಲ್ಲ. ನಾನು ಹೃದಯದ ಮಾತನ್ನು ಕೇಳಿದ್ದೇನೆ. ಮನಸ್ಸಿಗೆ ಸಂತೋಷವಾಗುವಷ್ಟೇ ಹಣ ಗಳಿಸುತ್ತೇನೆ ಎಂದು ಹೇಳಿದ್ದಾರೆ.


