ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾದ ವಿರಾಟ್ ಕೊಹ್ಲಿ; ಬೃಹತ್‌ ಮೈಲಿಗಲ್ಲಿನ ಮೇಲೆ ಕಣ್ಣು
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾದ ವಿರಾಟ್ ಕೊಹ್ಲಿ; ಬೃಹತ್‌ ಮೈಲಿಗಲ್ಲಿನ ಮೇಲೆ ಕಣ್ಣು

ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾದ ವಿರಾಟ್ ಕೊಹ್ಲಿ; ಬೃಹತ್‌ ಮೈಲಿಗಲ್ಲಿನ ಮೇಲೆ ಕಣ್ಣು

Virat Kohli: ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಮುನ್ನ ಮುನ್ನಾ, ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ವಿರಾಟ್‌ ಕೊಹ್ಲಿ ಅಭ್ಯಾಸ ನಡೆಸಿದರು. ಕೊಹ್ಲಿ ಮೈದಾನಕ್ಕೆ ಕಾಲಿಡುತ್ತಿದ್ದಂತೆಯೇ ಅಭಿಮಾನಿಗಳು ಖುಷಿಯಾದರು.

ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾದ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾದ ವಿರಾಟ್ ಕೊಹ್ಲಿ

ಇಂಗ್ಲೆಂಡ್‌ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಆಡುವ ಬಳಗದಿಂದ ಹೊರಗಿದ್ದ ವಿರಾಟ್‌ ಕೊಹ್ಲಿ (Virat Kohli), ಎರಡನೇ ಏಕದಿನ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ದ್ವಿತೀಯ ಪಂದ್ಯ ನಡೆಯುತ್ತಿದ್ದು, ಅಭ್ಯಾಸದ ವೇಳೆ ಮೈದಾನಕ್ಕೆ ವಿರಾಟ್ ಕೊಹ್ಲಿ ಬರುತ್ತಿದ್ದಂತೆಯೇ ಸ್ಟೇಡಿಯಂನಲ್ಲಿ ಸಂಭ್ರಮ ಮನೆ ಮಾಡಿತ್ತು. ಮೊಣಕಾಲಿನ ನೋವಿನಿಂದಾಗಿ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ ಆಡಿರಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಮುಂದಿನ ಪಂದ್ಯದಲ್ಲಿ ಸ್ಟಾರ್‌ ಆಟಗಾರ ಆಡುವ ಸುಳಿವು ಸಿಗುತ್ತಿದ್ದಂತೆಯೇ ಕಟಕ್‌ ಫ್ಯಾನ್ಸ್‌ ಖುಷಿಯಾಗಿದ್ದಾರೆ.

ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಕೊನೆಯದಾಗಿ ಸ್ಪರ್ಧಾತ್ಮಕ ಪಂದ್ಯ ಆಡಿದ್ದ ಕೊಹ್ಲಿ, ಗಾಯದ ಸಮಸ್ಯೆಯಿಂದಾಗಿ ನಾಗ್ಪುರದಲ್ಲಿ ಆಡಿರಲಿಲ್ಲ. ಕೊನೆಯದಾಗಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಅವರು, ಕಳಪೆ ಫಾರ್ಮ್‌ನಲ್ಲಿದ್ದರು. ರಣಜಿ ಟ್ರೋಫಿಯಲ್ಲಿಯೂ ಅದೇ ನಿರಾಶೆ ಮುಂದುವರೆಯಿತು.

ಏಕದಿನ ಕ್ರಿಕೆಟ್‌ ಕೊಹ್ಲಿಯ ಫೇವರೆಟ್‌ ಫಾರ್ಮ್‌. ಈ ಸ್ವರೂಪದಲ್ಲಿ ಅವರು ಮಾಡಿರುವ ದಾಖಲೆಯ ಸಮೀಪಕ್ಕೂ ಇತರ ಕ್ರಿಕೆಟಿಗರು ಬರುವುದು ಕಷ್ಟ. ಏಕದಿನದಲ್ಲಿ ಮತ್ತಷ್ಟು ಅಪಾಯಕಾರಿ ಆಟವಾಡುವ ಅವರು, ತಮ್ಮ ಚಾಣಾಕ್ಷ ಆಟದೊಂದಿಗೆ ಫಾರ್ಮ್‌ಗೆ ಮರಳಬಲ್ಲರು ಎಂಬುವುದರಲ್ಲಿ ಅನುಮಾನವಿಲ್ಲ.

ಅವಕಾಶಕ್ಕೆ ನ್ಯಾಯ ಒದಗಿಸಿದ ಶ್ರೇಯಸ್‌ ಅಯ್ಯರ್

ನಾಗ್ಪುರ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿ ಮಿಂಚಿದರು. ಕೊಹ್ಲಿಯ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದ ಅವರು, ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾದರು. ಹೀಗಾಗಿ ಎರಡನೇ ಪಂದ್ಯದಲ್ಲಿ ವಿರಾಟ್‌ ಸ್ಥಾನ ಕೊಡಲು ಯಾರು ಸ್ಥಾನ ಬಿಟ್ಟುಕೊಡಬೇಕು ಎಂಬುದನ್ನು ನೋಡಬೇಕಷ್ಟೇ.

ಸದ್ಯ ಆಡುವ ಬಳಗಕ್ಕೆ ಕೊಹ್ಲಿಯ ಸೇರ್ಪಡೆ ತಂಡಕ್ಕೆ ನಿರ್ಣಾಯಕವಾಗಿದೆ. ಕೋಚ್ ಗೌತಮ್‌ ಗಂಭೀರ್‌ ಕೂಡಾ ಎಡ-ಬಲ ಜೋಡಿಗಳಿಗೆ ಆದ್ಯತೆ ನೀಡುತ್ತಿರುವುದು‌ ಸ್ಪಷ್ಟವಾಗಿದೆ. ಹೀಗಾಗಿ ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರನ್ನೊಳಗೊಂಡ ತಂಡದಲ್ಲಿ ಕೊಹ್ಲಿ ಪ್ರಮುಖ ಭಾಗವಾಗಿದ್ದಾರೆ. ಶುಭ್ಮನ್ ಗಿಲ್ ಹಾಗೂ ಕೊಹ್ಲಿ ಅವರನ್ನು ಮೂರು ಹಾಗೂ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ತಂಡ ಹೇಗೆ ಬಳಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ದಾಖಲೆಯ ಹೊಸ್ತಿಲ್ಲಲ್ಲಿ ಕೊಹ್ಲಿ

ಸಚಿನ್ ತೆಂಡೂಲ್ಕರ್ (18,426) ಮತ್ತು ಕುಮಾರ ಸಂಗಕ್ಕಾರ (14,234) ನಂತರ ಏಕದಿನ ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ಮೂರನೇ ಬ್ಯಾಟರ್ ಆಗಲು ಕೊಹ್ಲಿಗೆ ಈಗ ಕೇವಲ 94 ರನ್‌ಗಳ ಅಗತ್ಯವಿದೆ. 283 ಏಕದಿನ ಇನ್ನಿಂಗ್ಸ್‌ ಆಡಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ (350 ಇನ್ನಿಂಗ್ಸ್) ಹಾಗೂ ಸಂಗಕ್ಕಾರ (378 ಇನ್ನಿಂಗ್ಸ್) ಅವರನ್ನು ಹಿಂದಿಕ್ಕಿ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಭಾರತ ಕ್ರಿಕೆಟ್‌ ತಂಡ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್‌ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ವಾಷಿಂಗ್ಟನ್, ವಿರಾಟ್ ಕೊಹ್ಲಿ, ಆರ್ಷದೀಪ್ ಸಿಂಗ್.

Whats_app_banner