ವಿರಾಟ್ ಕೊಹ್ಲಿ ವೈಫಲ್ಯ; ವಿಶ್ವಕಪ್ ಸೂಪರ್-8 ಪಂದ್ಯಗಳಿಗೂ ಮುನ್ನ ಮಹತ್ವದ ಸಲಹೆ ನೀಡಿದ ಮೊಹಮ್ಮದ್ ಕೈಫ್
Mohammad Kaif on Virat Kohli: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಕೆನಡಾ ವಿರುದ್ಧ ಮತ್ತು ಸೂಪರ್-8 ಪಂದ್ಯಗಳಿಗೂ ಮುನ್ನ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಮೊಹಮ್ಮದ್ ಕೈಫ್ ಮಹತ್ವದ ಸಲಹೆ ನೀಡಿದ್ದಾರೆ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಅತ್ಯುತ್ತಮ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli), ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಹೀನಾಯ ಪ್ರದರ್ಶನದ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಐಪಿಎಲ್‌ನಲ್ಲಿ ಆರಂಭಿಕರಾಗಿ ಅಬ್ಬರಿಸಿದ್ದ ಕಿಂಗ್, ವಿಶ್ವಕಪ್ನಲ್ಲಿ ಓಪನರ್ ಆಗಿ ರನ್ ಗಳಿಸಲು ಪರದಾಡುತ್ತಿದ್ದು, 3 ಪಂದ್ಯಗಳಲ್ಲಿ 5 ರನ್ ಗಳಿಸಿದ್ದಾರೆ.
ಭಾರತ ತಂಡ ಸೂಪರ್-8 ಪ್ರವೇಶಿಸಿದ್ದು, ಮಹತ್ವದ ಪಂದ್ಯಗಳಿಗೂ ಮುನ್ನ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ವಿರಾಟ್ ಕೊಹ್ಲಿಗೆ ಮಹತ್ವದ ಸಲಹೆ ನೀಡಿದ್ದಾರೆ. ಬ್ಯಾಟಿಂಗ್ ಕ್ರಮಾಂಕ ಬದಲಿಸಬೇಕು ಎಂದು ಸೂಚಿಸಿದ್ದಾರೆ. ವಿಶ್ವಕಪ್ನಲ್ಲಿ ಕೆನಡಾ ವಿರುದ್ಧ ಪ್ರದರ್ಶನ ನೀಡಲು ತೀವ್ರ ಒತ್ತಡಕ್ಕೆ ಸಿಲುಕಿದ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಿಸುವಂತೆ ಟೀಮ್ ಮ್ಯಾನೇಜ್ಮೆಂಟ್ಗೆ ಸೂಚಿಸಿದ್ದಾರೆ.
ಐಪಿಎಲ್‌ನಲ್ಲಿ ಆರ್ಸಿಬಿ ಪರ ಆಡಿದ 15 ಪಂದ್ಯಗಳಲ್ಲಿ 741 ರನ್ ಗಳಿಸಿದ ಕೊಹ್ಲಿ, ವಿಶ್ವಕಪ್ನಲ್ಲಿ ಅದೇ ಫಾರ್ಮ್ ಮುಂದುವರೆಸಲು ವಿಫಲರಾದರು. ಐರ್ಲೆಂಡ್ ವಿರುದ್ಧ 1, ಪಾಕಿಸ್ತಾನ ಎದುರು 4 ಮತ್ತು ಅಮೆರಿಕ ವಿರುದ್ಧ ಡಕೌಟ್ ಆದ ಆರ್ಸಿಬಿ ಸ್ಟಾರ್ ಬ್ಯಾಟರ್, ಕೆನಡಾ ವಿರುದ್ಧ ಮತ್ತು ಸೂಪರ್-8 ಪಂದ್ಯಗಳಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಕೊಹ್ಲಿ ತನ್ನ ಕರಿಯರ್ನಲ್ಲಿ ಯಶಸ್ಸು ಕಂಡಿದ್ದೇ 3ನೇ ಕ್ರಮಾಂಕದಲ್ಲಿ.
ಫಾರ್ಮ್ಗೆ ಬರಲು ಹೀಗೆ ಮಾಡಬೇಕು ಎಂದ ಮೊಹಮ್ಮದ್ ಕೈಫ್
35 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ಕೆನಡಾ ವಿರುದ್ಧ ಅದ್ಭುತ ಆಟವನ್ನು ಪ್ರದರ್ಶಿಸಬಹುದು. ಅದು ಆಕ್ರಮಣಕಾರಿ ಇನ್ನಿಂಗ್ಸ್ ಆಗಿರಲಿದೆ ಎಂದು ಎಲ್ಲರೂ ಅಂದಾಜಿಸಿದ್ದಾರೆ. ಇದರ ನಡುವೆ ವಿರಾಟ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ. ಇದು ಅವರು ಫಾರ್ಮ್ಗೆ ಬರಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೈಫ್, ವಿರಾಟ್ ಕೊಹ್ಲಿ ನಂ. 3 ರಲ್ಲಿ ಆಡಬೇಕು ಎಂದು ನಾನು ಹೇಳುತ್ತಿದ್ದೇನೆ. ಏಕೆಂದರೆ, ಭಾರತದ ಪರ ಆಡಿದ ನಂ. 3ರಲ್ಲಿ ಅವರ ಅಂಕಿ-ಸಂಖ್ಯೆಗಳು ಅಸಾಧಾರಣವಾಗಿವೆ. ಇಲ್ಲಿನ ಪಿಚ್ಪರಿಸ್ಥಿತಿಗಳಲ್ಲಿ ಹೊಸ ಚೆಂಡಿನ ವಿರುದ್ಧ ಆರಂಭಿಕರಾಗಿ ಬ್ಯಾಟಿಂಗ್ ಮಾಡುವುದು ಕಷ್ಟಕರವಾಗಿದೆ. ಹಾಗಾಗಿ ವಿರಾಟ್‌ಗೆ ಸ್ವಲ್ಪ ಸಮಯ ಸಿಗುತ್ತದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
3ನೇ ಕ್ರಮಾಂಕ ಆಡಿದ್ದರೆ ಹೀಗಾಗುತ್ತಿರಲಿಲ್ಲ ಎಂದ ಮಾಜಿ ಕ್ರಿಕೆಟಿಗ
ಉದಾಹರಣೆಗೆ, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಸೌರಭ್ ನೇತ್ರಾವಲ್ಕರ್ ಬೌಲಿಂಗ್ ಎದುರಿಸಿದ ಕೊಹ್ಲಿ, ಮೊದಲ ಎಸೆತವನ್ನು ಬೌಂಡರಿ ಸಿಡಿಸಲು ಯತ್ನಿಸಿ ಔಟಾದರು. ಒಂದು ವೇಳೆ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರೆ, ಬೌಲರ್ಗಳ ಸ್ವಿಂಗ್, ಪೇಸ್ ಹೇಗಿದೆ? ಪಿಚ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಅವರು ಅರಿತುಕೊಳ್ಳುತ್ತಿದ್ದರು. ಉತ್ತಮವಾಗಿ ಬ್ಯಾಟ್ ಮಾಡಲು ಸಾಧ್ಯವಾಗುತ್ತಿತ್ತು ಎಂದು ಕೈಫ್ ವಿವರಿಸಿದ್ದಾರೆ.
ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದನ್ನು ಒಪ್ಪಿಕೊಂಡ ಮಾಜಿ ಕ್ರಿಕೆಟಿಗ, ಐಪಿಎಲ್‌ನಲ್ಲಿ ಆರಂಭಿಕರಾಗಿ ಅತ್ಯುತ್ತಮ ಪ್ರದರ್ಶನ ತೋರಿದರು. ಆದರೆ, ಐಪಿಎಲ್‌ನಲ್ಲಿ ಪಿಚ್ಗಳು ಸಮತಟ್ಟಾಗಿದ್ದವು. ಅವು 200 ರನ್ ಗಳಿಸುವ ಹೆಚ್ಚು ಸ್ಕೋರ್ ನಡೆಸುವ ಪಿಚ್ಗಳು. ಕೊಹ್ಲಿ ಅಲ್ಲಿ ಓಪನಿಂಗ್ ಮಾಡುವಾಗ 80-90 ರನ್ ಗಳಿಸಿದ್ದರು. ಅದಕ್ಕಾಗಿಯೇ ಅವರು ಇಲ್ಲಿ ಓಪನಿಂಗ್ ಮಾಡುತ್ತಿದ್ದಾರೆ. ಆದಾಗ್ಯೂ, ಇಲ್ಲಿ ಪರಿಸ್ಥಿತಿಗಳು ಸ್ವಲ್ಪ ವಿಭಿನ್ನವಾಗಿವೆ. ಹಾಗಾಗಿ ವಿಶ್ವಕಪ್ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
