ಕನ್ನಡ ಸುದ್ದಿ  /  Cricket  /  Virat Kohli Smashed Fifty And Gives A Reply To Critics Kohli Overtakes Chris Gayle Most Sixes For Rcb T20 World Cup Prs

ಭರ್ಜರಿ ಅರ್ಧಶತಕ ಸಿಡಿಸಿ ಟಿ20ಗೆ ಅನ್​ಫಿಟ್ ಎಂದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ವಿರಾಟ್ ಕೊಹ್ಲಿ; ಗೇಲ್, ಎಬಿಡಿ ದಾಖಲೆ ಉಡೀಸ್

Virat Kohli Record: ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ ತನ್ನ ಅದ್ಭುತ ಇನ್ನಿಂಗ್ಸ್​ನಲ್ಲಿ ಭರ್ಜರಿ 4 ಸಿಕ್ಸರ್​ ಬಾರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿಶೇಷ ದಾಖಲೆ ಬರೆದಿದ್ದಾರೆ.

ಟಿ20​ಗೆ ಅನ್​ಫಿಟ್ ಎಂದು ಟೀಕಿಸಿದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಕೊಹ್ಲಿ
ಟಿ20​ಗೆ ಅನ್​ಫಿಟ್ ಎಂದು ಟೀಕಿಸಿದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಕೊಹ್ಲಿ (PTI)

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಸೂಪರ್​ಸ್ಟಾರ್ ವಿರಾಟ್ ಕೊಹ್ಲಿ ಮತ್ತೊಂದು ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಹಲವು ಎಬಿ ಡಿವಿಲಿಯರ್ಸ್ ದಾಖಲೆ ಮುರಿದ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್​ ಟೂರ್ನಿಗೆ ಪರಿಗಣಿಸಬಾರದು ಎಂದು ಹೇಳುತ್ತಿದ್ದವರಿಗೆ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮತ್ತೊಂದು ಆಕರ್ಷಕ ಇನ್ನಿಂಗ್ಸ್​ ಕಟ್ಟಿದ ವಿರಾಟ್ ಕೊಹ್ಲಿ, ಏಕಾಂಗಿ ಹೋರಾಟ ನಡೆಸಿದರು. ಆಪದ್ಬಾಂಧವನಾದ ಕಿಂಗ್ ಕೊಹ್ಲಿ, 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ ನೆರವಿನಿಂದ ಅಜೇಯ 83 ರನ್ ಗಳಿಸಿದರು. ಪೂರ್ಣ 20 ಓವರ್​​ಗಳಲ್ಲೂ ಬ್ಯಾಟ್ ಬೀಸಿದ ಕೊಹ್ಲಿಗೆ ತಂಡದ ಸಹ ಆಟಗಾರರಿಂದ ಸರಿಯಾದ ಸಾಥ್ ನೀಡಲಿಲ್ಲ.

ಕ್ರಿಸ್​ ಗೇಲ್ ದಾಖಲೆ ಬ್ರೇಕ್

ತನ್ನ ಅದ್ಭುತ ಇನ್ನಿಂಗ್ಸ್​ನಲ್ಲಿ ಭರ್ಜರಿ 4 ಸಿಕ್ಸರ್​ಗಳನ್ನು ಬಾರಿಸಿದ ವಿರಾಟ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿಶೇಷ ದಾಖಲೆ ಬರೆದಿದ್ದಾರೆ. ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರ ಸಿಕ್ಸರ್​​ಗಳ ದಾಖಲೆಯನ್ನು ಧೂಳೀಪಟಗೊಳಿಸಿದ್ದಾರೆ. ಇದೀಗ ಆರ್​ಸಿಬಿ ಪರ ಅತ್ಯಧಿಕ ಸಿಕ್ಸರ್​​ಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಬೆಂಗಳೂರು ಪರ ಈವರೆಗೂ 240 ಪಂದ್ಯಗಳನ್ನಾಡಿರುವ ಕೊಹ್ಲಿ, 232 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್​ ನಡೆಸಿದ್ದಾರೆ. 37.79ರ ಬ್ಯಾಟಿಂಗ್ ಸರಾಸರಿ ಮತ್ತು 130.28ರ ಬ್ಯಾಟಿಂಗ್ ಸ್ಟ್ರೈಕ್​​ರೇಟ್​ನಲ್ಲಿ 52 ಅರ್ಧಶತಕ ಹಾಗೂ 7 ಶತಕಗಳ ನೆರವಿನಿಂದ 7444 ರನ್ ಗಳಿಸಿದ್ದಾರೆ. ಈ ಪೈಕಿ ಅವರು 241 ಸಿಕ್ಸರ್​​ಗಳನ್ನು ಬಾರಿಸಿದ್ದಾರೆ. 658 ಬೌಂಡರಿಗಳನ್ನೂ ಚಚ್ಚಿದ್ದಾರೆ.

ಆರ್​​ಸಿಬಿ ತಂಡದ ಪರ 241 ಸಿಕ್ಸರ್​​ಗಳನ್ನು ಬಾರಿಸಿರುವ ಕೊಹ್ಲಿ, 238 ಸಿಕ್ಸರ್​ ಬಾರಿಸಿದ್ದ ಎಬಿ ಡಿವಿಲಿಯರ್ಸ್ ಮತ್ತು 239 ಸಿಕ್ಸರ್​ ಬಾರಿಸಿದ್ದ ಕ್ರಿಸ್ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ಈ ಪಂದ್ಯಕ್ಕೂ ಮುನ್ನ 237 ಸಿಕ್ಸರ್ ಸಿಡಿಸಿದ್ದರು. ಇದೀಗ ಈ ಇಬ್ಬರನ್ನು ಹಿಂದಿಕ್ಕಿ ಆರ್​​ಸಿಬಿ ಪರ ಅತ್ಯಧಿಕ ಸಿಕ್ಸರ್​ ಸಿಡಿಸಿರುವ ಆಟಗಾರನಾಗಿದ್ದಾರೆ.

ಐಪಿಎಲ್​ನಲ್ಲಿ ಆರ್​ಸಿಬಿ ಪರ ಅತ್ಯಧಿಕ ಸಿಕ್ಸರ್​

240 - ವಿರಾಟ್ ಕೊಹ್ಲಿ

239 - ಕ್ರಿಸ್​ ಗೇಲ್

238 - ಎಬಿ ಡಿವಿಲಿಯರ್ಸ್

67 - ಗ್ಲೆನ್ ಮ್ಯಾಕ್ಸ್​ವೆಲ್

50 - ಫಾಫ್ ಡು ಪ್ಲೆಸಿಸ್

ಧೋನಿ ದಾಖಲೆ ಮುರಿದ ಕೊಹ್ಲಿ

ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸಿಕ್ಸರ್​ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ 239 ಸಿಕ್ಸರ್​ ಬಾರಿಸಿರುವ ಎಂಎಸ್ ಧೋನಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಮಾಹಿ ಈಗ ಐದನೇಸ ಸ್ಥಾನಕ್ಕೆ ಕುಸಿದಿದ್ದಾರೆ. ಅಗ್ರಸ್ಥಾನದಲ್ಲಿ 357 ಸಿಕ್ಸರ್ ಬಾರಿಸಿದ ಕ್ರಿಸ್​ ಗೇಲ್ ಇದ್ದಾರೆ. ರೋಹಿತ್​ ಶರ್ಮಾ 261 ಸಿಕ್ಸರ್​, ಎಬಿ ಡಿವಿಲಿಯರ್ಸ್ 251 ಸಿಕ್ಸರ್​ ಸಿಡಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್​ಗೆ ಸಿದ್ದ

ಟಿ20 ವಿಶ್ವಕಪ್ ಟೂರ್ನಿಗೆ ಕೈಬಿಡಬೇಕು ಎಂದು ಹೇಳುತ್ತಿದ್ದವರಿಗೆ ತನ್ನ ಬ್ಯಾಟ್ ಮೂಲಕವೇ ಕೊಹ್ಲಿ ತಿರುಗೇಟು ನೀಡಿದ್ದಾರೆ. ಬಿಸಿಸಿಐ ಮತ್ತು ಸೆಲೆಕ್ಟರ್​ಗಳು ವಿರಾಟ್ ಅವರು ಟಿ20 ಕ್ರಿಕೆಟ್​ಗೆ ಅನ್​ಫಿಟ್. ಅವರ ಸ್ಟ್ರೈಕ್​ರೇಟ್​ ಚುಟುಕು ಕ್ರಿಕೆಟ್​​ಗೆ ಸೂಕ್ತವಾಗಿಲ್ಲ ಎಂದು ಭಾವಿಸಿ ಅವರಿಲ್ಲದ ವರ್ಲ್ಡ್​ಕಪ್​ಗೆ ಭಾರತ ತಂಡ ಕಟ್ಟಲು ನಿರ್ಧರಿಸಿದ್ದಾರೆ. ಕೊಹ್ಲಿ ತನ್ನ ಅದ್ಭುತ ಇನ್ನಿಂಗ್ಸ್​ ಮೂಲಕ ಸೆಲೆಕ್ಟರ್​​​ಗಳಿಗೆ ನಾನಿನ್ನೂ ಟಿ20 ಕ್ರಿಕೆಟ್​ಗೆ ಫಿಟ್ ಆಗಿದ್ದೇನೆ ಎಂದು ಸಂದೇಶ ರವಾನಿಸಿದ್ದಾರೆ.