ಕಿಂಗ್ ರೋರಿಂಗ್, ಐಪಿಎಲ್‌ನಲ್ಲಿ ದಾಖಲೆಯ 8ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ; ದಿಗ್ಗಜರ ದಾಖಲೆಗಳು ಉಡೀಸ್
Virat Kohli IPL Century : 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 8ನೇ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 8ನೇ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ವರ್ಷ 2 ಸೆಂಚುರಿ ಬಾರಿಸಿದ್ದ ಕೊಹ್ಲಿ, 17ನೇ ಆವೃತ್ತಿಯ ಐಪಿಎಲ್‌ನಲ್ಲಿ ನೂರು ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಶ್ರೀಮಂತ ಲೀಗ್ನಲ್ಲಿ ಒಟ್ಟಾರೆ 8 ಸಲ ಮೂರಂಕಿ ದಾಟಿರುವ ವಿರಾಟ್, 67ನೇ ಎಸೆತದಲ್ಲಿ ಶತಕ ಪೂರೈಸಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ 19ನೇ ಪಂದ್ಯದಲ್ಲಿ ಪಂದ್ಯದ ಆರಂಭದಿಂದ ಕೊನೆಯವರೆಗೂ ಕ್ರೀಸ್ನಲ್ಲಿ ಕೊಹ್ಲಿ, 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಿತ 156.94ರ ಸ್ಟ್ರೇಕ್ರೇಟ್ನಲ್ಲಿ ಅಜೇಯ 113 ರನ್ ಬಾರಿಸಿದ್ದಾರೆ. ಇದರೊಂದಿಗೆ ಐಪಿಎಲ್ ಮತ್ತು ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. 2024ರ ಐಪಿಎಲ್‌ನಲ್ಲಿ ಅಲ್ಲದೆ, ರಾಜಸ್ಥಾನ ವಿರುದ್ಧ ಕೊಹ್ಲಿ ಸಿಡಿಸಿದ ಮೊದಲ ಶತಕ ಕೂಡ ಆಗಿದೆ.
ವಾರ್ನರ್, ಫಿಂಚ್ ದಾಖಲೆ ಮುರಿದ ಕೊಹ್ಲಿ
ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ವಿಶ್ವದ ಮೂರನೇ ಆಟಗಾರನಾಗಿದ್ದಾರೆ. ತಲಾ 8 ಸೆಂಚುರಿ ಬಾರಿಸಿದ್ದ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್, ಮೈಕಲ್ ಕ್ಲಿಂಗರ್ ಅವರನ್ನು ಹಿಂದಿಕ್ಕಿದ್ದಾರೆ. ಇದೀಗ ಕೊಹ್ಲಿ ಶತಕಗಳ ಸಂಖ್ಯೆ 9ಕ್ಕೇರಿದೆ. ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ 22, ಬಾಬರ್ ಅಜಮ್ 11 ಶತಕ ಬಾರಿಸಿದ್ದಾರೆ.
ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳು
22 - ಕ್ರಿಸ್ ಗೇಲ್
11 - ಬಾಬರ್ ಅಜಮ್
9 - ವಿರಾಟ್ ಕೊಹ್ಲಿ
8 - ಆ್ಯರೋನ್ ಫಿಂಚ್
8 - ಮೈಕಲ್ ಕ್ಲಿಂಗರ್
8 - ಡೇವಿಡ್ ವಾರ್ನರ್
ಐಪಿಎಲ್‌ನಲ್ಲಿ ಅತ್ಯಧಿಕ ಶತಕ
ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ 8 ಶತಕಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕ್ರಿಸ್ಗೇಲ್ ಅವರು 6, ಜೋಸ್ ಬಟ್ಲರ್ 5, ಕೆಎಲ್ ರಾಹುಲ್, ಶೇನ್ ವ್ಯಾಟ್ಸನ್, ಡೇವಿಡ್ ವಾರ್ನರ್ ಅವರು ತಲಾ 4 ಶತಕ ಸಿಡಿಸಿದ್ದಾರೆ.
ನಿಧಾನಗತಿಯ ಶತಕ ಸಿಡಿಸಿದವರ ಪಟ್ಟಿ (ಎಸೆತಗಳಲ್ಲಿ)
67 - ಮನೀಶ್ ಪಾಂಡೆ (ಆರ್ಸಿಬಿ) vs ಡೆಕ್ಕನ್ ಚಾರ್ಜಸ್, ಸೆಂಚುರಿಯನ್, 2009
67 - ವಿರಾಟ್ ಕೊಹ್ಲಿ (ಆರ್ಸಿಬಿ) vs ಆರ್ಆರ್, ಜೈಪುರ, 2024
66 - ಸಚಿನ್ ತೆಂಡೂಲ್ಕರ್ (ಎಂಐ) vs ಕೆಟಿಕೆ, ಮುಂಬೈ, 2011
66 - ಡೇವಿಡ್ ವಾರ್ನರ್ (ಡಿಸಿ) vs ಕೆಕೆಆರ್, ಡೆಲ್ಲಿ, 2010
66 - ಜೋಸ್ ಬಟ್ಲರ್ (ಆರ್ಆರ್) vs ಎಂಐ, ಮುಂಬೈ, 2022
ಐಪಿಎಲ್‌ನಲ್ಲಿ ಹೆಚ್ಚಿನ 100+ ಜೊತೆಯಾಟದಲ್ಲಿ ತೊಡಗಿಸಿದ ಬ್ಯಾಟರ್ಸ್
ವಿರಾಟ್ ಕೊಹ್ಲಿ - 28 (ಬಾರಿ ಶತಕದ ಜೊತೆಯಾಟ)
ಡೇವಿಡ್ ವಾರ್ನರ್ -26
ಶಿಖರ್ ಧವನ್ - 21
ಕ್ರಿಸ್ ಗೇಲ್ - 20
ಫಾಫ್ ಡು ಪ್ಲೆಸಿಸ್ - 19
ಎಬಿ ಡಿವಿಲಿಯರ್ಸ್ - 17
ಕ್ರ.ಸಂ | ಆಟಗಾರ | ಪಂದ್ಯ | ರನ್ | ಶತಕ |
---|---|---|---|---|
1. | ವಿರಾಟ್ ಕೊಹ್ಲಿ | 242 | 7579 | 8 |
2. | ಕ್ರಿಸ್ ಗೇಲ್ | 142 | 4965 | 6 |
3. | ಜೋಸ್ ಬಟ್ಲರ್ | 100 | 3258 | 5 |
4. | ಕೆಎಲ್ ರಾಹುಲ್ | 121 | 4256 | 4 |
5. | ಶೇನ್ ವ್ಯಾಟ್ಸನ್ | 145 | 3874 | 4 |
6. | ಡೇವಿಡ್ ವಾರ್ನರ್ | 180 | 6545 | 4 |
7. | ಶುಭ್ಮನ್ ಗಿಲ್ | 95 | 2954 | 3 |
8. | ಸಂಜು ಸ್ಯಾಮ್ಸನ್ | 155 | 3997 | 3 |
9. | ಎಬಿ ಡಿವಿಲಿಯರ್ಸ್ | 184 | 5162 | 3 |