ವೈರಲ್ ಆಗಿರುವ ಮಗುವಿನ ಪೋಟೊದಲ್ಲಿರುವುದು ವಿರಾಟ್ ಕೊಹ್ಲಿ ಪುತ್ರ ಅಕಾಯ್ ಅಲ್ಲ; ಕೊಹ್ಲಿ ಸಹೋದರಿ ಭಾವನಾ ಸ್ಪಷ್ಟನೆ
ಟೀಂ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರ ಪುತ್ರನದ್ದು ಎನ್ನಲಾದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ವಿರಾಟ್ ಅವರ ಸಹೋದರಿ ಭಾವನಾ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ಇವರು ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಆಸ್ಟ್ರೇಲಿಯಾದ ಪರ್ತ್ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡು ಸುದ್ದಿಗೆ ಗ್ರಾಸವಾಗಿದ್ದರು. ಪಂದ್ಯದ ಮೂರನೇ ದಿನ, ಅಂದರೆ ನವೆಂಬರ್ 24 ರ ಭಾನುವಾರ, ವ್ಯಕ್ತಿಯೊಬ್ಬ ಅನುಷ್ಕಾ ಶರ್ಮಾ ಹಿಂದೆ ಮಗುವನ್ನು ಎತ್ತಿಕೊಂಡಿರುವುದು ಕಂಡುಬಂದಿತ್ತು. ಈ ಫೋಟೊವನ್ನು ಸ್ಟೇಡಿಯಂನಲ್ಲಿದ್ದ ಕ್ಯಾಮೆರಾಗಳು ಸೆರೆಹಿಡಿದಿವೆ. ವಿಡಿಯೊದಲ್ಲಿ ಮಗುವಿನ ಸ್ಕ್ರೀನ್ ಶಾಟ್ ಗಳನ್ನು ತೆಗೆಯಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಫೋಟೊದಲ್ಲಿರುವುದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಗ ಅಕಾಯ್ ಎಂದು ಕೆಲವರು ಹಂಚಿಕೊಂಡಿದ್ದಾರೆ. ಆದರೆ ವೈರಲ್ ಆಗಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಇದು ಸುಳ್ಳು ಸುದ್ದಿ. ಫೋಟೊದಲ್ಲಿರುವುದು ವಿರಾಟ್ ಕೊಹ್ಲಿ ಪುತ್ರನಲ್ಲ ಎಂಬುದನ್ನು ವಿರಾಟ್ ಅವರ ಸಹೋದರಿ ಭಾವನಾ ಸ್ಪಷ್ಟನೆ ನೀಡಿದ್ದಾರೆ.
ವಾಸ್ತವವಾಗಿ ಅಕಾಯ್ ಹೆಸರಿನಲ್ಲಿ ವೈರಲ್ ಆಗುತ್ತಿರುವ ಫೋಟೊ ನೋಡಿದ ವಿರಾಟ್ ಕೊಹ್ಲಿ ಸಹೋದರಿ ಭಾವನಾ ಕೊಹ್ಲಿ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದಾರೆ. "ಅನುಷ್ಕಾ ಅವರ ಸ್ನೇಹಿತನ ಮಗಳ ಫೋಟೊವನ್ನು ಅಕಾಯ್ ಹೆಸರಿನಲ್ಲಿ ವೈರಲ್ ಆಗುತ್ತಿವೆ. ಈ ಫೋಟೊಗಳಲ್ಲಿ ಇರುವ ಮಗು ನಮ್ಮ ಅಕಾಯ್ ಅಲ್ಲ. ಧನ್ಯವಾದಗಳು. " ಎಂದು ಸ್ಪಷ್ಟಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಎರಡನೇ ಬಾರಿಗೆ ತಂದೆಯಾದರು. ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯ ಸಮಯದಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಆಡಿದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದರು. ವಿರಾಟ್-ಅನುಷ್ಕಾ ತಮ್ಮ ಪುತ್ರನ ಮುಖವನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ ಪುತ್ರಿಯ ಫೋಟೊಗಳನ್ನು ವಿರಾಟ್ ದಂಪತಿ ಹಂಚಿಕೊಂಡಿದ್ದರು. ಮಗನ ಜನನದ ನಂತರ ವಿರಾಟ್ ಮತ್ತು ಅನುಷ್ಕಾ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ. ವಿರಾಟ್ ಟೀಂ ಇಂಡಿಯಾದಲ್ಲಿ ಆಡುತ್ತಿದ್ದಾರೆ. ಅನುಷ್ಕಾ ಆಸ್ಟ್ರೇಲಿಯಾದಲ್ಲಿ ವಿರಾಟ್ ಅವರೊಂದಿಗೆ ಇದ್ದಾರೆ. ಅವರ ಮಗ ಮತ್ತು ಮಗಳು ಕೂಡ ಆಸ್ಟ್ರೇಲಿಯಾದಲ್ಲಿರಲಿದ್ದಾರೆ. ಆದರೂ ತಮ್ಮ ಮಕ್ಕಳನ್ನು ಕ್ಯಾಮೆರಾ ಕಣ್ಣುಗಳಿಂದ ದೂರ ಇಟ್ಟಿದ್ದಾರೆ.