Catch Controversy: ವಿವಾದಾತ್ಮಕ ಕ್ಯಾಚ್ ತೀರ್ಪು ಬಳಿಕ ವಿರಾಟ್ ಕೊಹ್ಲಿ-ಸ್ಟೀವ್ ಸ್ಮಿತ್ ಮಾತಿನ ಚಕಮಕಿ, ಪಾಂಟಿಂಗ್ ಅಸಮಾಧಾನ
Virat Kohli Catch Controversy: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ಯಾಚ್ ವಿಚಾರವಾಗಿ ಅಂಪೈರ್ ಕೊಟ್ಟ ತೀರ್ಪಿಗೆ ಸಂಬಂಧಿಸಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ವಾಗ್ವಾದ ನಡೆಯಿತು. ಮತ್ತೊಂದೆಡೆ ಅಂಪೈರ್ ತೀರ್ಪಿಗೆ ರಿಕಿ ಪಾಂಟಿಂಗ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯದ ವೇಳೆ ಕ್ಯಾಚ್ ಅನ್ನು ನಾಟೌಟ್ ಕೊಟ್ಟ ವಿಚಾರವಾಗಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ಮಾತಿನ ಚಕಮಕಿ ನಡೆದಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ, ಆರಂಭಿಕ ಎರಡು ವಿಕೆಟ್ಗಳನ್ನು ಬೇಗನೇ ಕಳೆದುಕೊಂಡಿತು. ಪರಿಣಾಮ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ವಿರಾಟ್ ಕೊಹ್ಲಿ, ತಾನು ಎದುರಿಸಿದ ಮೊದಲ ಎಸೆತದಲ್ಲೇ ಸ್ಲಿಪ್ನಲ್ಲಿ ಕ್ಯಾಚ್ ಕೊಟ್ಟರು. ಆದರೆ, ಅದೃಷ್ಟವಶಾತ್ ನಾಟೌಟ್ ಎಂದು ಮೂರನೇ ಅಂಪೈರ್ ತೀರ್ಪು ಕೊಟ್ಟರು. ಅಂಪೈರ್ ಕೊಟ್ಟ ತೀರ್ಪು ಇಬ್ಬರ ನಡುವೆ ಟಾಕ್ ಶುರುವಾಗಲು ಕಾರಣವಾಯಿತು.
ಯಶಸ್ವಿ ಜೈಸ್ವಾಲ್ (10) ಮತ್ತು ಕೆಎಲ್ ರಾಹುಲ್ (4) ಔಟಾದ ಬಳಿಕ ಕೊಹ್ಲಿ ಬ್ಯಾಟಿಂಗ್ಗೆ ಬಂದರು. ಅದು ಸ್ಕಾಟ್ ಬೋಲ್ಯಾಂಡ್ ಅವರು ಎಸೆದ 8ನೇ ಓವರ್ನ 5ನೇ ಎಸೆತ ಆಗಿತ್ತು. ಆಗ ತಾನು ಎದುರಿಸಿದ ಮೊದಲ ಎಸೆತವನ್ನು ಬ್ಯಾಟ್ ಮಾಡಿದರು. ಆದರೆ ಚೆಂಡು ಬ್ಯಾಟ್ ಎಡ್ಜ್ ಆಗಿ 2ನೇ ಸ್ಲಿಪ್ ಕಡೆಗೆ ಹೋಯಿತು. ಸ್ಲಿಪ್ನಲ್ಲಿ ಸ್ಟೀವ್ ಸ್ಮಿತ್ ತುಂಬಾ ಕೆಳಗೆ ಬಂದ ಚೆಂಡನ್ನು ಹಿಡಿಯಲು ಯತ್ನಿಸಿದರು. ಆದರೆ ಕಷ್ಟವಾದ ಕಾರಣ ಚೆಂಡನ್ನು ಮೇಲಕ್ಕೆ ಚಿಮ್ಮಿದರು. ಪಕ್ಕದಲ್ಲಿದ್ದ ಫೀಲ್ಡರ್ ಮಾರ್ನಸ್ ಲಬುಶೇನ್ ಆ ಕ್ಯಾಚ್ ಪಡೆದು ಸಂಭ್ರಮಿಸಿದರು. ಆನ್ಫೀಲ್ಡ್ ಅಂಪೈರ್ಸ್ ಈ ಕ್ಯಾಚ್ ಪರಿಶೀಲಿಸುವಂತೆ ಮೂರನೇ ಅಂಪೈರ್ಗೆ ಮನವಿ ಸಲ್ಲಿಸಿದರು. ಆಗ ಸ್ಮಿತ್ ಕ್ಯಾಚ್ ಪಡೆಯುವ ವೇಳೆ ಚೆಂಡು ನೆಲಕ್ಕೆ ತಾಗಿದ್ದು ಕಂಡು ಬಂತು. ಹೀಗಾಗಿ ನಾಟೌಟ್ ಎಂದು ತೀರ್ಪು ಕೊಟ್ಟರು.
ಸ್ಕೂಪ್ ಮಾಡಿದ ಚೆಂಡನ್ನು ಮಾರ್ನಸ್ ಲಬುಶೇನ್ ಕ್ಯಾಚ್ ಪಡೆದ ಬಳಿಕ ಸ್ಮಿತ್ ಇದು ಔಟ್ ಎಂದು ಗಟ್ಟಿ ನಿರ್ಧಾರ ಮಾಡಿಬಿಟ್ಟಿದ್ದರು. ಆದರೆ ಮೂರನೇ ಅಂಪೈರ್ ನಾಟೌಟ್ ಕೊಡುತ್ತಿದ್ದಂತೆ ಅಸಮಾಧಾನ ಹೊರಹಾಕಿದರು. ಅಲ್ಲದೆ, ಆಸ್ಟ್ರೇಲಿಯನ್ ಕ್ರಿಕೆಟ್ ಫ್ಯಾನ್ಸ್ ಕೂಡ ಕೂತಲ್ಲಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಮೂರನೇ ಅಂಪೈರ್ ನೀಡಿದ ತೀರ್ಪನ್ನು ಒಪ್ಪದ ಸ್ಮಿತ್, ತಲೆ ಅಲ್ಲಾಡಿಸುತ್ತಿದ್ದರು. ಈ ವೇಳೆ ಕೊಹ್ಲಿ ಕಡೆ ನೋಡಿ ಏನೋ ಹೇಳುತ್ತಿದ್ದರು. ಇದರಿಂದ ಕೊಹ್ಲಿ ಕೋಪಗೊಂಡರು. ಸ್ಮಿತ್ ಮಾತುಗಳಿಗೆ ತಿರುಗೇಟು ನೀಡಿದರು ಎನ್ನಲಾಗಿದೆ. ಇದು ಇಬ್ಬರು ನಡುವೆ ಮಾತಿನ ಚಕಮತಿ ನಡೆಯಿತು ಎಂದು ವರದಿಯಾಗಿದೆ. ಆದರೆ ಇದು ಕಳೆದ ಪಂದ್ಯದಲ್ಲಿ ಸ್ಯಾಮ್ ಕಾನ್ಸ್ಟಾಸ್ ಜೊತೆಗಿನ ಗಲಾಟೆಯಂತೆ ದೊಡ್ಡದಿರಲಿಲ್ಲ.
ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡ ಕೊಹ್ಲಿ
ವಿರಾಟ್ ಕೊಹ್ಲಿ ಗೋಲ್ಡನ್ ಡಕ್ನಿಂದ ಪಾರಾದರೂ ಆ ಅವಕಾಶದ ಲಾಭ ಪಡೆದು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಸತತ ನಾಲ್ಕನೇ ಪಂದ್ಯದಲ್ಲಿ ಕಳಪೆಯಾಟವನ್ನು ಮುಂದುವರೆಸಿದರು. ಈ ಪಂದ್ಯದಲ್ಲೂ ಆಫ್ಸ್ಟಂಪ್ ಔಟ್ ಸೈಡ್ ಎಸೆತಕ್ಕೆ ಮತ್ತೆ ಔಟಾದರು. 69 ಎಸೆತಗಳನ್ನು ಎದುರಿಸಿದ ಕೊಹ್ಲಿ ಒಂದೂ ಬೌಂಡರಿ ಇಲ್ಲದೆ ಕೇವಲ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್ಗೆ ಶುಭ್ಮನ್ ಗಿಲ್ ಜೊತೆ ಸೇರಿ 40 ರನ್ಗಳ ಪಾಲುದಾರಿಕೆ ಒದಗಿಸಿದರು. ಪ್ರಸ್ತುತ ಈ ಕ್ಯಾಚ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವರು ಔಟ್ ಅಂದರೆ, ಇನ್ನೂ ಕೆಲವರು ನಾಟೌಟ್ ಎಂದು ಪರ-ವಿರೋಧ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಇದರಲ್ಲಿ ಮಾಜಿ ಕ್ರಿಕೆಟಿಗರು ಸೇರಿದ್ದಾರೆ.
ರಿಕಿ ಪಾಂಟಿಂಗ್ ಆಕ್ರೋಶ
ಇದು ನಿಜವಾಗಿಯೂ ಔಟ್ ಎನ್ನುತ್ತಿರುವವರಿಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಚೆಂಡು ಸ್ಮಿತ್ ಅವರ ಕೈಯಿಂದ ಹೊರ ಬಂದಿದ್ದರೆ, ಚೆಂಡನ್ನು ಮೇಲಕ್ಕೆ ಚಿಮ್ಮಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದ್ದಾರೆ. ಅವರ ಬೆರಳುಗಳ ಅಡಿಗೆ ಚೆಂಡು ಸಿಲುಕಿದ್ದ ಕಾರಣಕ್ಕೆ ಮೇಲಕ್ಕೆ ಚೆಂಡನ್ನು ಸ್ಕೂಪ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಆಸ್ಟ್ರೇಲಿಯಾ ಪರ ತಪ್ಪಾಗಿ ತೀರ್ಪು ಕೊಡಲಾಗಿದೆ ಎಂದು 7 ಕ್ರಿಕೆಟ್ ವಾಹಿನಿಯೊಂದಿಗೆ ಕಾಮೆಂಟರಿ ಮಾಡುತ್ತಿದ್ದ ವೇಳೆ ಪಾಂಟಿಂಗ್ ಆಕ್ರೋಶ ಹೊರಹಾಕಿದ್ದಾರೆ.
ವಿರಾಟ್ ಕೊಹ್ಲಿ ಪ್ರದರ್ಶನ
ಪ್ರಸ್ತುತ ಬಿಜಿಟಿ ಸರಣಿಯಲ್ಲಿ ವಿರಾಟ್ ಕೊಹ್ಲಿ ಆರಂಭಿಕ ಪಂದ್ಯದಲ್ಲಿ ಶತಕ ಸಿಡಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಸದ್ದು ಮಾಡಲಿಲ್ಲ. 11, 7, 3, 36, 5, 17 ಈ ಸ್ಕೋರ್ ಶತಕದ ನಂತರ ಬಂದಿರುವುದು. ಒಂದು ಪಂದ್ಯದಲ್ಲೂ ಮಿಂಚದ ಅವರು ಇದೀಗ ವೈಫಲ್ಯ ಅನುಭವಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೊಹ್ಲಿಯನ್ನು ಟೆಸ್ಟ್ ತಂಡದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.