ಟಿ20ಐ ಕ್ರಿಕೆಟ್ ನಿವೃತ್ತಿಯಿಂದ ವಿರಾಟ್ ಕೊಹ್ಲಿ ಯು-ಟರ್ನ್; ಅದು ಕೂಡ ಆ ಒಂದು ಪಂದ್ಯಕ್ಕೆ ಮಾತ್ರವಂತೆ!
Virat Kohli: ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಿವೃತ್ತಿ ಹಿಂಪಡೆಯುವುದಾಗಿ ತಮಾಷೆಯಾಗಿ ಹೇಳಿದ್ದಾರೆ. ಆದರೆ ಆ ಒಂದು ಪಂದ್ಯಕ್ಕೆ ಮಾತ್ರವಂತೆ!

ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ಗೆ (T20I Cricket) ನಿವೃತ್ತಿ ಘೋಷಿಸಿದ್ದಾರೆ. 2024ರ ಟಿ20 ವಿಶ್ವಕಪ್ (T20 World Cup 2024) ಜಯಿಸಿದ ನಂತರ ಕೊಹ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಇದು ಕೋಟ್ಯಂತರ ಅಭಿಮಾನಿಗಳನ್ನು ತೀವ್ರ ನಿರಾಸೆಗೊಳಿಸಿತ್ತು. ಇದೀಗ ಕೊಹ್ಲಿ ಅವರು ಮತ್ತೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಕುರಿತು ಮಾತನಾಡಿದ್ದಾರೆ. ಆದರೆ ಇದು ತಮಾಷೆಯಾಗಿ ಹೇಳಿದ್ದು! ಒಂದು ವೇಳೆ ಮರಳಿದರೂ ಆ ಪಂದು ಪಂದ್ಯಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೌತ್ ಆಫ್ರಿಕಾ ಮಣಿಸಿ ಪ್ರಶಸ್ತಿ ಗೆದ್ದ ನಂತರ ಭಾರತದ ಮಾಜಿ ನಾಯಕ ಈ ಸ್ವರೂಪದಿಂದ ನಿವೃತ್ತರಾಗಿದ್ದರು. ಆದರೆ ಈಗ ಅವರು ಕೇವಲ ಒಂದು ಪಂದ್ಯಕ್ಕೆ ಮರಳುವ ಸಾಧ್ಯತೆಯಿದೆ. 2028ರ ಲಾಸ್ ಏಂಜಲೀಸ್ ಪುರುಷರ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ತಲುಪಿದರೆ, ನಿವೃತ್ತಿಯಿಂದ ಯು-ಟರ್ನ್ ತೆಗೆದುಕೊಳ್ಳುತ್ತೇನೆ ಎಂದು ಆರ್ಸಿಬಿ ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಶೃಂಗಸಭೆಯಲ್ಲಿ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತಕ್ಕೆ ಪದಕ ಗೆಲ್ಲುವ ಆಸೆ ವ್ಯಕ್ತಪಡಿಸಿದ ಕೊಹ್ಲಿ
ಸಂದರ್ಶನದ ಸಮಯದಲ್ಲಿ ಮಾಜಿ ಆಟಗಾರ್ತಿ ಇಶಾ ಗುಹಾ ಅವರು ಕೊಹ್ಲಿಯನ್ನು ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಆಡಲು ಬಯಸುತ್ತೀರಾ ಎಂದು ಕೇಳಿದರು, ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಕೊಹ್ಲಿ, ‘ಒಲಿಂಪಿಕ್ಸ್ನಲ್ಲಿ ಭಾರತ ತಂಡವು ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡರೆ ಆ ಒಂದು ಪಂದ್ಯಕ್ಕೆ ಷರತ್ತಿನ ಮೇಲೆ ಮರಳುತ್ತೇನೆ’ ಎಂದು ನಗುತ್ತಾ ಹೇಳಿದ್ದಾರೆ. ನಿವೃತ್ತಿಯಿಂದ ಯು-ಟರ್ನ್ ಬಗ್ಗೆ ಮಾತನಾಡಿದ ಕೊಹ್ಲಿ, ‘ಇಲ್ಲ, ಮತ್ತೆ ನಿವೃತ್ತಿ ಹಿಂಪಡೆಯುವುದಿಲ್ಲ’ ಎಂದು ಹೇಳಿದ್ದಾರೆ.
‘ಟೀಮ್ ಇಂಡಿಯಾ ಫೈನಲ್ ತಲುಪಿ ಚಿನ್ನದ ಪದಕಕ್ಕಾಗಿ ಪಂದ್ಯ ಆಡಿದರೆ, ನಾನು ಆ ಪಂದ್ಯಕ್ಕೆ ಮತ್ತೆ ಆಡಲು ನಿವೃತ್ತಿ ಹಿಂಪಡೆಯುತ್ತೇನೆ. ನಾನು ಪದಕದೊಂದಿಗೆ ಮನೆಗೆ ಹಿಂತಿರುಗಬೇಕು. ಒಲಿಂಪಿಕ್ ಪದಕ ಗೆದ್ದರೆ ತುಂಬಾ ಚೆನ್ನಾಗಿರುತ್ತದೆ. ಇಂತಹ ಸಾಧನೆ ಮಾಡುವುದು ಮೊದಲನೇಯದ್ದಾಗುತ್ತದೆ’ ಎಂದು ತಮಾಷೆಯಾಗಿ ಹೇಳಿದ್ದಾರೆ. ಕೊಹ್ಲಿ ಈ ಸ್ವರೂಪದಲ್ಲಿ ಮತ್ತೆ ಆಡುವ ಬಯಕೆ ವ್ಯಕ್ತಪಡಿಸಿದ್ದರೂ ಪುನರಾಗಮನ ಕಷ್ಟಕರ. ಇದೇ ವೇಳೆ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆಯೂ ಮಾತನಾಡಿದ್ದಾರೆ. 128 ವರ್ಷಗಳ ಬಳಿಕ 2028ರಲ್ಲಿ ಒಲಿಂಪಿಕ್ಸ್ಗೆ ಕ್ರಿಕೆಟ್ ಮರಳಲಿದೆ.
ನಿವೃತ್ತಿ ಕುರಿತು ಕೊಹ್ಲಿ ಹೇಳಿದ್ದೇನು?
‘ನಿವೃತ್ತಿ ನಂತರ ಏನು ಮಾಡುತ್ತೇನೆ ಎಂಬುದರ ಕುರಿತು ಕೊಹ್ಲಿ ಬಹಿರಂಗಪಡಿಸಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕೆಂದು ತಿಳಿದಿಲ್ಲ ಎಂದು ಕೊಹ್ಲಿ ಹೇಳಿದರು. ಆದರೆ ಬಹುಶಃ ಸಾಧ್ಯವಾದಷ್ಟು ಪ್ರಯಾಣಿಸಲು ಬಯಸುತ್ತೇನೆ’ ಎಂದಿದ್ದಾರೆ. ಅಂದರೆ ಇನ್ನಷ್ಟು ದಿನಗಳ ಕ್ರಿಕೆಟ್ ಆಡುವುದಾಗಿ ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಬಳಿಕ ತನ್ನ ಸಹ ಆಟಗಾರನೂ ಇದೇ ರೀತಿ ಪ್ರಶ್ನೆ ಕೇಳಿದ್ದರು. ಅವರಿಗೂ ಇದೇ ಉತ್ತರ ಕೊಟ್ಟಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.
