ಅಬ್ಬರಿಸುತ್ತಿದ್ದ ಹೆನ್ರಿಚ್ ಕ್ಲಾಸೆನ್; ವಿರಾಟ್ ಕೊಹ್ಲಿ ಸಲಹೆ ನೀಡಿದ ಮುಂದಿನ ಎಸೆತದಲ್ಲೇ ಬಿತ್ತು ವಿಕೆಟ್‌
ಕನ್ನಡ ಸುದ್ದಿ  /  ಕ್ರಿಕೆಟ್  /  ಅಬ್ಬರಿಸುತ್ತಿದ್ದ ಹೆನ್ರಿಚ್ ಕ್ಲಾಸೆನ್; ವಿರಾಟ್ ಕೊಹ್ಲಿ ಸಲಹೆ ನೀಡಿದ ಮುಂದಿನ ಎಸೆತದಲ್ಲೇ ಬಿತ್ತು ವಿಕೆಟ್‌

ಅಬ್ಬರಿಸುತ್ತಿದ್ದ ಹೆನ್ರಿಚ್ ಕ್ಲಾಸೆನ್; ವಿರಾಟ್ ಕೊಹ್ಲಿ ಸಲಹೆ ನೀಡಿದ ಮುಂದಿನ ಎಸೆತದಲ್ಲೇ ಬಿತ್ತು ವಿಕೆಟ್‌

ಅಬ್ಬರದ ಆಟವಾಡುತ್ತಿದ್ದ ಹೆನ್ರಿಚ್‌ ಕ್ಲಾಸೆನ್‌ ವಿಕೆಟ್‌ ಪಡೆಯಲು ಸುಯಶ್‌ ಶರ್ಮಾಗೆ ವಿರಾಟ್‌ ಕೊಹ್ಲಿ ಸಲಹೆ ನೆರವಾಗಿದೆ. ಕೊಹ್ಲಿಯಿಂದ ಸಲಹೆ ಪಡೆದ ಮುಂದಿನ ಎಸೆತದಲ್ಲಿ ಕ್ಲಾಸೆನ್‌ ಔಟಾಗಿದ್ದಾರೆ. ವಿರಾಟ್‌ ಅನುಭವ ತಂಡಕ್ಕೆ ನೆರವಾಗಿದೆ.

ವಿರಾಟ್ ಕೊಹ್ಲಿ ಸಲಹೆ ನೀಡಿದ ಮುಂದಿನ ಎಸೆತದಲ್ಲೇ ಬಿತ್ತು ಹೆನ್ರಿಚ್ ಕ್ಲಾಸೆನ್ ವಿಕೆಟ್‌
ವಿರಾಟ್ ಕೊಹ್ಲಿ ಸಲಹೆ ನೀಡಿದ ಮುಂದಿನ ಎಸೆತದಲ್ಲೇ ಬಿತ್ತು ಹೆನ್ರಿಚ್ ಕ್ಲಾಸೆನ್ ವಿಕೆಟ್‌ (Photo by Deepak Gupta/Hindustan Times)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್‌ 2025ರ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯವಾಡುತ್ತಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ (RCB vs SRH) ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ರಜತ್‌ ಪಾಟೀದಾರ್‌ ಬದಲಿಗೆ ಜಿತೇಶ್‌ ಶರ್ಮಾ ಮುನ್ನಡೆಸುತ್ತಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಎಸ್‌ಆರ್‌ಎಚ್‌ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರರಾದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡಿ ಔಟಾದರು. ಇವರ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲು ಬಂದ ಹೆನ್ರಿಚ್‌ ಕ್ಲಾಸೆನ್‌ ಕೂಡಾ ಅಬ್ಬರಿಸಲು ಶುರು ಮಾಡಿದರು.

ಇಶಾನ್‌ ಜೊತೆಗೂಡಿ ಅಬ್ಬರದ ಆಟ ಆರಂಭಿಸಿದ ಕ್ಲಾಸೆನ್‌, ದೊಡ್ಡ ಹೊಡೆತಗಳಿಗೆ ಕೈ ಹಾಕಿದರು. ಅದಾಗಲೇ ಎರಡು ಸಿಕ್ಸರ್‌ ಸಿಡಿಸಿ ಅಬ್ಬರಿಸುತ್ತಿದ್ದ ಅವರು, ಸುಯಶ್‌ ಶರ್ಮಾ ಎಸೆಯಲು ಬಂದ 9ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಅವರು, ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಈ ವೇಳೆ ಆರ್‌ಸಿಬಿಗೆ ವಿಕೆಟ್‌ ಅಗತ್ಯವಿತ್ತು. 9ನೇ ಓವರ್‌ನ ಮೊದಲ 4 ಎಸೆತಗಳಲ್ಲಿ 13 ರನ್‌ ಬಿಟ್ಟುಕೊಟ್ಟಿದ ಸುಯಶ್‌ ತುಸು ನಿರಾಶರಾಗಿದ್ದರು. ಈ ವೇಳೆ‌ ಅವರ ಬಳಿ ವಿರಾಟ್‌ ಬಂದರು.

ಅಸಹಾಯಕರಾಗಿದ್ದ ಸುಯಶ್‌ ಕಿವಿಯಲ್ಲಿ ವಿರಾಟ್‌ ಏನೋ ಹೇಳಿದರು. ಬಹುಶಃ ಕ್ಲಾಸೆನ್‌ಗೆ ಹೇಗೆ ಬೌಲಿಂಗ್‌ ಮಾಡಿದರೆ ವಿಕೆಟ್‌ ಪಡೆಯಬಹುದು ಎಂಬುದಾಗಿ ಕೊಹ್ಲಿ ಸಲಹೆ ನೀಡಿದ್ದಾರೆ. ಅಚ್ಚರಿ ಎಂಬಂತೆ, ಕೊಹ್ಲಿಯ ಸಲಹೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಮುಂದಿನ ಎಸೆತದಲ್ಲಿಯೇ ಕ್ಲಾಸೆನ್‌ ಔಟಾಗಿದ್ದಾರೆ. ದೊಡ್ಡ ಹೊಡೆತಕ್ಕೆ ಕೈ ಹಾಕಿದ ಕ್ಲಾಸೆನ್‌ ರೊಮಾರಿಯೋ ಶೆಫರ್ಡ್‌ ಕೈಗೆ ನೇರವಾಗಿ ಕ್ಯಾಚ್‌ ನೀಡಿದ್ದಾರೆ. 13 ಎಸೆತಗಳಲ್ಲಿ 24 ರನ್‌ ಗಳಿಸಿದ್ದ ಕ್ಲಾಸೆನ್‌ ಔಟಾದರು.

ವಿಕೆಟ್‌ ಪಡೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಸುಯಶ್‌ಗೆ ಈ ವಿಕೆಟ್‌ ಉರುಳಿದಾಗ ಸಮಾಧಾನವಾಗಿದೆ. ವಿರಾಟ್ ಕೊಹ್ಲಿ ನೀಡಿದ ಸಲಹೆ ಇಲ್ಲಿ ಕೆಲಸ ಮಾಡಿದಂತಿದೆ ಎಂದು ಕಾಮೆಂಟರಿಯಲ್ಲಿದ್ದ ದಿಗ್ಗಜರು ಕೂಡಾ ಹೇಳಿದ್ದಾರೆ.

ಜಿತೇಶ್ ಶರ್ಮಾ ಆರ್‌ಸಿಬಿ ನಾಯಕ

ಎಸ್‌ಆರ್‌ಎಚ್‌ ವಿರುದ್ಧದ ಪಂದ್ಯದಲ್ಲಿ ರಜತ್‌ ಪಾಟೀದಾರ್‌ ತಂಡದ ನಾಯಕತ್ವ ವಹಿಸಿಲ್ಲ.‌ ವಿಕೆಟ್‌ ಕೀಪರ್ ಜಿತೇಶ್ ಶರ್ಮಾ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರ್‌ಸಿಬಿ ನಾಯಕನಾಗಿ ಮೊದಲ ಪಂದ್ಯದಲ್ಲೇ ಟಾಸ್‌ ಗೆದ್ದ ಜಿತೇಶ್ ಶರ್ಮಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್‌ಗೆ ಆರ್‌ಸಿಬಿ ಪರ ಆಡುವ ಅವಕಾಶ ಸಿಕ್ಕಿದೆ. ಗಾಯಗೊಂಡಿರುವ ದೇವದತ್ ಪಡಿಕ್ಕಲ್ ಬದಲಿಗೆ ಮಯಾಂಕ್ ಅವರನ್ನು ಆರ್‌ಸಿಬಿ ತಂಡ ಆಯ್ಕೆ ಮಾಡಿ ಆಡುವ ಬಳಗಕ್ಕೆ ಸೇರಿಸಿಕೊಂಡಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.