ಜೋಶ್ ಹೇಜಲ್‌ವುಡ್ ಅಲಭ್ಯ, ವಿರಾಟ್ ಕೊಹ್ಲಿ ಆರಂಭಿಕ; ಕೆಕೆಆರ್ ವಿರುದ್ಧದ ಆರಂಭಿಕ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಬಳಗ
RCB Playing XI: ನೂತನ ನಾಯಕ ರಜತ್ ಪಾಟೀದಾರ್ ನೇತೃತ್ವದಲ್ಲಿ ನೂತನ ಆಟಗಾರರೊಂದಿಗೆ ನೂತನ ಸೀಸನ್ ಆರಂಭಿಸುವ ಲೆಕ್ಕಾಚಾರ ಹೊಂದಿರುವ ಆರ್‌ಸಿಬಿ, ಕೆಕೆಆರ್ ವಿರುದ್ಧದ ಮೊದಲ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಲಿದೆ.

2024ರ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ನಲ್ಲಿ ಮುಗ್ಗರಿಸಿ ನಿರಾಸೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ 2025ರ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಮಾರ್ಚ್ 22ರಿಂದ ಶುರುವಾಗುವ 18ನೇ ಆವೃತ್ತಿಯ ಐಪಿಎಲ್ಗೆ ಸಿದ್ಧತೆ ಆರಂಭಿಸಿರುವ ಆರ್‌ಸಿಬಿ, ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ನೂತನ ನಾಯಕ ರಜತ್ ಪಾಟೀದಾರ್ ನೇತೃತ್ವದಲ್ಲಿ ನೂತನ ಆಟಗಾರರೊಂದಿಗೆ ನೂತನ ಸೀಸನ್ ಆರಂಭಿಸುವ ಲೆಕ್ಕಾಚಾರ ಹೊಂದಿದೆ.
ರೆಡ್ ಆರ್ಮಿ, ತನ್ನ ಮೊದಲ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಲು ಸಜ್ಜಾಗಿದೆ. ಬೌಲಿಂಗ್ ವಿಭಾಗ ಹಿಂದೆಂದಿಗಿಂತಲೂ ಬಲಿಷ್ಠವಾಗಿರುವುದು ತಂಡದ ಬಲ ಹೆಚ್ಚಿಸಿದ್ದರೂ ಸ್ಪೆಷಲಿಸ್ಟ್ ಸ್ಪಿನ್ನರ್ಗಳೇ ಇಲ್ಲದಿರುವುದು ಕಾಡುವಂತೆ ಮಾಡಿದೆ. ಸಮತೋಲಿತ ತಂಡ ಕಟ್ಟಿರುವ ಬೆಂಗಳೂರು, ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ನೀಡಬೇಕು ಎನ್ನುವುದರ ಸವಾಲಿಗೆ ಸಿಲುಕಿದೆ. ಟೀಮ್ ಮ್ಯಾನೇಜ್ಮೆಂಟ್ ಯಾವ ರೀತಿ ನಿಭಾಯಿಸಲಿದೆ ಎಂಬುದು ಕೂಡ ಅಷ್ಟೇ ಪ್ರಮುಖ ಪಾತ್ರವಹಿಸಲಿದೆ.
ಅಗ್ರ ಕ್ರಮಾಂಕ: ಕೊಹ್ಲಿ, ಸಾಲ್ಟ್, ರಜತ್
ಆರ್‌ಸಿಬಿ ಸೇರಿ 18 ವರ್ಷ ಪೂರೈಸಿರುವ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇವರ ಜೊತೆಗೆ ಇಂಗ್ಲೆಂಡ್ ಸ್ಫೋಟಕ ಆಟಗಾರ ಫಿಲ್ ಸಾಲ್ಟ್ ಇನ್ನಿಂಗ್ಸ್ ತೆರೆಯಲಿದ್ದಾರೆ. ಹಾಲಿ ಚಾಂಪಿಯನ್ ಕೆಕೆಆರ್ ಪರ ಆರಂಭಿಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸಾಲ್ಟ್ (435) ಈ ಬಾರಿಯೂ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಕೊಹ್ಲಿ (741) ಕಳೆದ ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಸಿಡಿಲಮರಿ ಹಾಗೂ ನಾಯಕ ರಜತ್ ಪಾಟೀದಾರ್ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕ: ಲಿವಿಂಗ್‌ಸ್ಟೋನ್, ಜಿತೇಶ್, ಡೇವಿಡ್
ಟಾಪ್ ಆರ್ಡರ್ ಬ್ಯಾಟರ್ಗಳು ನಿರಾಸೆ ಮೂಡಿಸಿದರೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಮಧ್ಯಮ ಕ್ರಮಾಂಕದವರ ಮೇಲಿರುತ್ತದೆ. ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಕ್ರಮವಾಗಿ 4, 5, 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆ ಇದೆ. ಡಿಫೆನ್ಸ್, ಹೊಡಿಬಡಿ ಆಟದ ಜತೆಗೆ ಫಿನಿಷಿಂಗ್ ಮಾಡುವುದೂ ಇವರ ಜವಾಬ್ದಾರಿಯಾಗಿರುತ್ತದೆ. ಈ ಮೂವರ ಆಟವು ತಂಡದ ಗೆಲುವಿನಲ್ಲಿ ನಿರ್ಣಾಯಕವಾಗಿರುತ್ತದೆ. ಜಿತೇಶ್ ಶರ್ಮಾ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. ಲಿವಿಂಗ್‌ಸ್ಟೋನ್ ಸ್ಪಿನ್ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಲಿದ್ದಾರೆ.
ಅನುಭವಿ ಬೌಲರ್ಸ್: ಕೃನಾಲ್, ಭುವಿ
ಲಿವಿಂಗ್‌ಸ್ಟೋನ್ ಜೊತೆಗೆ ಕೃನಾಲ್ ಪಾಂಡ್ಯ ಆಲ್ರೌಂಡರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಮತ್ತೊಂದೆಡೆ ಸುಯಾಶ್ ಶರ್ಮಾ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ವೇಗದ ಬೌಲರ್ಗಳಾಗಿ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಅವರು ಎದುರಾಳಿ ತಂಡಗಳ ಮೇಲೆ ಮಾರಕ ಬೌಲಿಂಗ್ ದಾಳಿ ನಡೆಸಿ ಕಂಟಕವಾಗಲಿದ್ದಾರೆ. ಪಂದ್ಯದ ದಿಕ್ಕನ್ನೇ ಬದಲಿಸುವ ಶಕ್ತಿ ಇವರಿಗಿದೆ. ಆದರೆ ಜೋಶ್ ಹೇಜಲ್‌ವುಡ್ ಗಾಯಗೊಂಡಿದ್ದು, ಇನ್ನೂ ಚೇತರಿಸಿಕೊಂಡ ಕುರಿತು ಯಾವುದೇ ಅಪ್ಡೇಟ್ ಬಂದಿಲ್ಲ. ಒಂದು ವೇಳೆ ಅವರು ಇಲ್ಲವಾದರೆ ಬದಲಿಗೆ ವಿದೇಶಿ ಆಟಗಾರರ ಕೋಟಾದಲ್ಲಿ ಲುಂಗಿ ಎನ್‌ಗಿಡಿ ಆಡಬಹುದು. ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್ ಮಾಡುವ ವೇಳೆ ಸುಯಾಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಲುಂಗಿ ಎನ್‌ಗಿಡಿ, ಯಶ್ ದಯಾಳ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ. ಇಂಪ್ಯಾಕ್ಟ್ ಪ್ಲೇಯರ್ - ದೇವದತ್ ಪಡಿಕ್ಕಲ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹೇಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಛಿಕರಾ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಥೀ.
