ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಪುನರಾಗಮನಕ್ಕೆ ಸಿದ್ಧತೆ; ರೈಲ್ವೇಸ್ ವಿರುದ್ಧದ ಪಂದ್ಯಕ್ಕೆ ವಿಶೇಷ ವ್ಯವಸ್ಥೆ, ಉಚಿತ ಪ್ರವೇಶ
ವಿರಾಟ್ ಕೊಹ್ಲಿ 13 ವರ್ಷಗಳ ನಂತರ ಭಾರತದ ಪ್ರಮುಖ ದೇಶೀಯ ಪಂದ್ಯಾವಳಿ ರಣಜಿ ಟ್ರೋಫಿ ಆಡಲು ಸಜ್ಜಾಗಿದ್ದಾರೆ. ರೈಲ್ವೇಸ್ ವಿರುದ್ಧದ ಪಂದ್ಯಕ್ಕಾಗಿ ಡಿಡಿಸಿಎ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತಿದ್ದು, ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲು ಮುಂದಾಗಿದೆ.

ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ದಶಕದ ಬಳಿಕ ದೇಶಿಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಮುಂದಿನ ವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕೊಹ್ಲಿ ಆಡುತ್ತಿದ್ದು, ಡೆಲ್ಲಿ ತಂಡವು ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. 2012ರ ನವೆಂಬರ್ ತಿಂಗಳಲ್ಲಿ ಗಾಜಿಯಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಕೊಹ್ಲಿ ಕೊನೆಯ ಬಾರಿಗೆ ರಣಜಿ ಪಂದ್ಯವನ್ನಾಡಿದ್ದದರು. ಅದಾಗಿ 13 ವರ್ಷಗಳ ನಂತರ ಭಾರತದ ಪ್ರಮುಖ ರೆಡ್ ಬಾಲ್ ದೇಶೀಯ ಟೂರ್ನಮೆಂಟ್‌ಗೆ ಕೊಹ್ಲಿ ಮರಳಿದ್ದಾರೆ.
ಕೊಹ್ಲಿ ದೇಶೀಯ ಕ್ರಿಕೆಟ್ ಆಡುತ್ತಿರುವುದು ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇದಕ್ಕಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ವಿಶೇಷ ವ್ಯವಸ್ಥೆಗಳನ್ನು ಮಾಡುತ್ತಿದೆ. ಕ್ರೀಡಾಂಗಣದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡುವುದರ ಜೊತೆಗೆ, ಡಿಡಿಸಿಎ ಕ್ರೀಡಾಂಗಣದಲ್ಲಿ ಸುಮಾರು 10,000 ಪ್ರೇಕ್ಷಕರಿಗೆ ಉಚಿತ ಆತಿಥ್ಯ ನೀಡಲು ವ್ಯವಸ್ಥೆ ಮಾಡುತ್ತಿದೆ. ಹೀಗಾಗಿ ನಾರ್ತ್ ಎಂಡ್ ಮತ್ತು ಓಲ್ಡ್ ಕ್ಲಬ್ ಹೌಸ್ ಅನ್ನು ಕೂಡಾ ಅಭಿಮಾನಿಗಳಿಗಾಗಿ ತೆರೆಯಲಾಗುತ್ತಿದೆ. ಹೆಚ್ಚುವರಿ ಆಸನ ವ್ಯವಸ್ಥೆಯ ಅಗತ್ಯವಿದ್ದರೆ, ಉಳಿದ ಸ್ಟ್ಯಾಂಡ್‌ಗಳ ನೆಲ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸುದ್ದಿಸಂಸ್ಥೆ ದೈನಿಕ್ ಜಾಗರಣ್ ವರದಿ ತಿಳಿಸಿದೆ.
ಪಂದ್ಯಕ್ಕೆ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ ಎಂದು ಡಿಡಿಸಿಎ ಘೋಷಿಸಿದೆ. ಹೀಗಾಗಿ ಎಲ್ಲಾ ಪ್ರೇಕ್ಷಕರು ಈ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ವರದಿ ಹೇಳಿದೆ. ಕೊಹ್ಲಿ ಪಂದ್ಯದಲ್ಲಿ ಆಡುವುದರಿಂದ ಸ್ಟೇಡಿಯಂ ಹೌಸ್‌ಫುಲ್ ಆಗುವ ನಿರೀಕ್ಷೆ ಇದೆ.
ಸೌರಾಷ್ಟ್ರ ವಿರುದ್ಧದ ಈ ಹಿಂದಿನ ರಣಜಿ ಪಂದ್ಯದಲ್ಲಿ ಡೆಲ್ಲಿ ತಂಡ 10 ವಿಕೆಟ್‌ಗಳಿಂದ ಸೋತಿತ್ತು. ಈವರೆಗೆ ಆಡಿದ ಆರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನ ನಂತರ ತಂಡವು ಡಿ ಗುಂಪಿನ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಕುತ್ತಿಗೆ ನೋವಿಂದಾಗಿ ಕೊನೆಯ ಪಂದ್ಯದಲ್ಲಿ ಆಡದ ಕೊಹ್ಲಿ
ಭಾರತದ ಸ್ಟಾರ್ ಬ್ಯಾಟರ್, ಈ ವಾರದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ದೆಹಲಿ ತಂಡದ ಪಂದ್ಯದಲ್ಲಿ ಆಡಬೇಕಿತ್ತು. ಆದರೆ ಕುತ್ತಿಗೆ ನೋವೆಂದು ಹೇಳಿ ಅವರು ಪಂದ್ಯದಿಂದ ಹಿಂದೆ ಸರಿದರು. ಇದೀಗ ಜನವರಿ 30ರಿಂದ ಆರಂಭವಾಗುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಆಡಲು ಲಭ್ಯ ಎಂದು ಹೇಳಿದ್ದಾರೆ.
ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸುವ ಸಲುವಾಗಿ ಭಾರತದ ಎಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡಲು ಲಭ್ಯವಿರಬೇಕು ಎಂದು ಬಿಸಿಸಿಐ ಕಟುವಾಗಿ ಹೇಳಿದೆ. ಹೀಗಾಗಿ ಕೊಹ್ಲಿ ಕೂಡಾ ರಣಜಿ ಟ್ರೋಫಿಗೆ ಮರಳುವ ನಿರ್ಧಾರ ಕೈಗೊಂಡಿದ್ದಾರೆ.
ಕಳಪೆ ಬ್ಯಾಟಿಂಗ್
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಅಂತ್ಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿರಲಿಲ್ಲ. 36ರ ಹರೆಯದ ಆಟಗಾರ ಪರ್ತ್‌ನಲ್ಲಿ ಏಕೈಕ ಶತಕ ಸೇರಿದಂತೆ 190 ರನ್ ಮಾತ್ರ ಗಳಿಸಿದ್ದರು.
ಈಗಾಗಲೇ ಟೀಮ್ ಇಂಡಿತಾ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಶುಭ್ಮನ್ ಗಿಲ್ ಸೇರಿದಂತೆ ಇತರ ಭಾರತೀಯ ಟೆಸ್ಟ್ ತಂಡದ ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್ ರಣಜಿ ಟ್ರೋಫಿಗೆ ಮರಳಿದ್ದಾರೆ. ಮುಂದೆ ಕೊಹ್ಲಿ ಸರದಿ.
