ರಣಜಿ ಟ್ರೋಫಿ: ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಪಾದ ಮುಟ್ಟಿ ನಮಸ್ಕರಿಸಿದ ವಿರಾಟ್ ಕೊಹ್ಲಿ -Video
ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿಯ (Virat Kohli) ರಣಜಿ ಟ್ರೋಫಿ ಕಮ್‌ಬ್ಯಾಕ್ ಪಂದ್ಯವು ನಿರೀಕ್ಷಿತ ಪ್ರಮಾಣದಲ್ಲಿ ಫಲ ಕೊಟ್ಟಿಲ್ಲ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಮತ್ತು ರೈಲ್ವೇಸ್ ತಂಡಗಳ ನಡುವಿನ ರಣಜಿ ಟ್ರೋಫಿ ಗ್ರೂಪ್ ಡಿ ಪಂದ್ಯದ 2ನೇ ದಿನದಂದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದರು. 12 ವರ್ಷಗಳ ನಂತರ ರಣಜಿ ಟ್ರೋಫಿಗೆ ಮರಳಿದ ಕೊಹ್ಲಿ, 15 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟ್ ಆದರು.
ಭಾರತದ ಮಾಜಿ ನಾಯಕನಿಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಶುಕ್ರವಾರ (ಜನವರಿ 31) ಪಂದ್ಯದ ಮುಕ್ತಾಯದ ನಂತರ ಸನ್ಮಾನ ಮಾಡಿತು. ಏಕೆಂದರೆ ವೀರೇಂದ್ರ ಸೆಹ್ವಾಗ್ ಮತ್ತು ಇಶಾಂತ್ ಶರ್ಮಾ ನಂತರ ದೆಹಲಿ ತಂಡದಿಂದ 100ಕ್ಕೂ ಹೆಚ್ಚು ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.
ಸನ್ಮಾನ ಕಾರ್ಯಕ್ರಮದಲ್ಲಿ ಕೊಹ್ಲಿ ಅವರ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಉಪಸ್ಥಿತರಿದ್ದರು. ಸನ್ಮಾನ ಆರಂಭವಾಗುವ ಮೊದಲು ಕೊಹ್ಲಿ ತಮ್ಮ ಬಾಲ್ಯದ ಕೋಚ್ ಪಾದಗಳನ್ನು ಮುಟ್ಟಿ ಅಪ್ಪಿಕೊಂಡರು.
ಕಳೆದ ಬಾರಿ ರಣಜಿ ಟ್ರೋಫಿ ಪಂದ್ಯವನ್ನು ಆಡಿದಾಗ ಕೇವಲ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಕೊಹ್ಲಿ, ಈಗ 123 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ಸಾಧನೆಗಳನ್ನು ಸಂಭ್ರಮಿಸಲು ಡಿಡಿಸಿಎ ಅಧ್ಯಕ್ಷ ಅರುಣ್ ಜೇಟ್ಲಿ ಅವರು ಭಾರತದ ಮಾಜಿ ನಾಯಕನನ್ನು ಶಾಲು ಮತ್ತು ವಿಶೇಷ ಟ್ರೋಫಿಯೊಂದಿಗೆ ಸನ್ಮಾನಿಸಿದರು.
ದೆಹಲಿ ಪರ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ಔಟಾದರು. ಪಂದ್ಯ ವೀಕ್ಷಿಸಲು ಸ್ಟೇಡಿಯಂನಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರಿಗೆ ನಿರಾಶೆಯಾಯ್ತು. ರೈಲ್ವೇಸ್ ತಂಡದ ವೇಗಿ ಹಿಮಾಂಶು ಸಾಂಗ್ವಾನ್ ಅವರು ಎಸೆತಕ್ಕೆ ಚೆಂಡು ಆಫ್-ಸ್ಟಂಪ್‌ಗೆ ಬಡಿದು ಕೊಹ್ಲಿ ವಿಕೆಟ್ ಹಾರಿಸಿತು.
ಪಂದ್ಯದ ವೇಳೆ 'ಕೊಹ್ಲಿ, ಕೊಹ್ಲಿ, 'ಆರ್‌ಸಿಬಿ, ಆರ್‌ಸಿಬಿ' ಎಂಬ ಘೋಷಣೆಗಳು ಮೊಳಗಿದವು. ಆದರೆ, ಅಭಿಮಾನಿಗಳಿಗೆ ನಿರಾಶೆಯೊಂದೇ ಸಿಕ್ಕಿತು. ವಿರಾಟ್ ಔಟಾಗುತ್ತಿದ್ದಂತೆಯೇ ಮೈದಾನ ಖಾಲಿಯಾಯ್ತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ ಫ್ಯಾನ್ಸ್, ಮನೆಗೆ ಮರಳಿದರು.
