ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಕುರಿತು ಬಿಸಿಸಿಐಗೆ ತಿಳಿಸಿದ ವಿರಾಟ್ ಕೊಹ್ಲಿ; ಮರುಪರಿಶೀಲನೆಗೆ ಸೂಚಿಸಿದ ಮಂಡಳಿ
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ವಿರಾಟ್ ಕೊಹ್ಲಿ ಬಯಸಿದ್ದಾರೆ. ಆದರೆ ಅವರು ಮನಸ್ಸು ಬದಲಿಸುವಂತೆ ಬಿಸಿಸಿಐ ಸೂಚಿಸಿದ್ದು, ನಿಮ್ಮ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸಿ ಎಂದು ಕೇಳಿಕೊಂಡಿದೆ.

ನವದೆಹಲಿ: ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಈಗಾಗಲೇ ನಿವೃತ್ತಿ ಘೋಷಿಸಿರುವ ಬೆನ್ನಲ್ಲೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಮುಂದಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಇಚ್ಛೆಯನ್ನು ಭಾರತೀಯ ಕ್ರಿಕೆಟ್ ಮಂಡಳಿಯೆದುರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಬಿಸಿಸಿಐನ ಹಿರಿಯ ಅಧಿಕಾರಿಗಳು ಕೊಹ್ಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸಿದ್ದಾರೆ. ಇಂಗ್ಲೆಂಡ್ ಪ್ರವಾಸ ಸಮೀಪಿಸುತ್ತಿರುವುದರಿಂದ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಸಿಐ ಅವರನ್ನು ಒತ್ತಾಯಿಸಿದೆ. ಅವರು ಇನ್ನೂ ಮನವಿಗೆ ಸ್ಪಂದಿಸಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಗೆ ತಂಡವನ್ನು ಅಂತಿಮಗೊಳಿಸಲು ಆಯ್ಕೆದಾರರು ಮುಂದಿನ ದಿನಗಳಲ್ಲಿ ಸಭೆ ಸೇರಲಿದ್ದಾರೆ. ಕೊಹ್ಲಿ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರೆ, ಕೆಎಲ್ ರಾಹುಲ್ ಮಾತ್ರ ತಂಡದಲ್ಲಿ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್‌ನಲ್ಲಿ ಉತ್ತಮ ಅನುಭವ ಹೊಂದಿರುವ ಕ್ರಿಕೆಟಿಗನಾಗಿ ಇರಲಿದ್ದಾರೆ. ವಿರಾಟ್ ಕೊಹ್ಲಿ ಡಿಸೆಂಬರ್ 2014 ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು ಮತ್ತು ರೋಹಿತ್ ಶರ್ಮಾ ಫೆಬ್ರವರಿ 2022ರಲ್ಲಿ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಈಗ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಾರೆ.
ವಿರಾಟ್ ಕೊಹ್ಲಿ ಈವರೆಗೆ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ, ಆದರೆ ಕಳೆದ ಐದು ವರ್ಷಗಳಲ್ಲಿ, ಅವರು 37 ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ ಕೇವಲ 1,990 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ ಪ್ರಾರಂಭವಾಗುವ ಮೊದಲು, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನದ ಬಗ್ಗೆ ಕೊಹ್ಲಿ ಮಾತನಾಡಿದ್ದರು, ಅಲ್ಲಿ ಅವರು ಈಗಾಗಲೇ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರಬಹುದು ಎಂದು ಸುಳಿವು ಕೂಡ ನೀಡಿದ್ದರು. ಹೀಗಾಗಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಕೊಹ್ಲಿ ಇದು ಸೂಕ್ತ ಸಮಯ ಎಂದುಕೊಂಡಿದ್ದಾರೆ ಎಂದು ವರದಿಯಾಗಿದೆ.
ವೆಸ್ಟ್ ಇಂಡೀಸ್‌ನಲ್ಲಿ ಭಾರತದ 2024 ರ ವಿಶ್ವಕಪ್ ಗೆಲುವಿನ ನಂತರ ಟಿ 20 ಪಂದ್ಯಗಳಿಂದ ನಿವೃತ್ತರಾಗಿದ್ದರೂ, ಕೊಹ್ಲಿ ಐಪಿಎಲ್ 2025 ರಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. 11 ಪಂದ್ಯಗಳಲ್ಲಿ 143.46 ಸ್ಟ್ರೈಕ್ ರೇಟ್‌ನೊಂದಿಗೆ 505 ರನ್ ಗಳಿಸಿದ್ದಾರೆ. ಅವರು ಪ್ರಸ್ತುತ 2025ರ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ, ಅಲ್ಲದೆ ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿರುವ ಸೂರ್ಯಕುಮಾರ್ ಯಾದವ್ ಅವರಿಗಿಂತ ಕೇವಲ ಐದು ರನ್ ಹಿಂದೆ ಇದ್ದಾರೆ.