ವಿರಾಟ್ ಕೊಹ್ಲಿ ಸರಾಸರಿ 48ಕ್ಕೆ ಕುಸಿಯಲು ಪ್ರಮುಖ ಕಾರಣ ಬಹಿರಂಗ; ಮತ್ತದೇ ತಪ್ಪು ಮಾಡಿದ ಬ್ಯಾಟಿಂಗ್ ಸೂಪರ್ ಸ್ಟಾರ್
Virat Kohli: ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ 48ಕ್ಕೆ ಕುಸಿಯಲು ಪ್ರಮುಖ ಕಾರಣ ಬಹಿರಂಗವಾಗಿದೆ. ಒಂದೇ ರೀತಿಯಲ್ಲಿ ಔಟಾಗುತ್ತಿರುವುದಕ್ಕೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕಿಡಿಕಾರಿದ್ದಾರೆ.
ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಶಾಟ್ ಆಯ್ಕೆಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರ್ತ್ನಲ್ಲಿ ಅದ್ಭುತ ಶತಕದ ನಂತರ ವಿರಾಟ್, ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದ್ದು, ಕೇವಲ ಏಳು ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು.
ಕೆಎಲ್ ರಾಹುಲ್ ಔಟಾದ ಬಳಿಕ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ, ಉತ್ತಮ ಆರಂಭ ಪಡೆದು ಭರವಸೆ ಮೂಡಿಸಿದರು. ಆದರೆ, ತಾನು ಎದುರಿಸಿದ 8ನೇ ಎಸೆತದಲ್ಲೇ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಬೌನ್ಸ್ ಮತ್ತು ಆಫ್ ಸ್ಟಂಪ್ ಹೊರಗಿನ ಎಸೆತಗಳನ್ನು ಡಿಫೆಂಡ್ ಮಾಡಿಕೊಳ್ಳಬೇಕೆ ಅಥವಾ ಬಿಡಬೇಕೇ ಎನ್ನುವ ಗೊಂದಲದಲ್ಲಿ ಸಿಕ್ಕಿ ಬಿದ್ದಿದ್ದ ಕೊಹ್ಲಿ, ಮತ್ತದೆ ನಿರಾಸೆ ಮೂಡಿಸಿದರು. ಆದರೆ ಸಂಜಯ್ ಮಂಜ್ರೇಕರ್, ಕೊಹ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿದ್ದಕ್ಕೆ ಕಿಡಿಕಾರಿದ್ದಾರೆ.
ಸಂಜಯ್ ಮಂಜ್ರೇಕರ್ ಕಿಡಿ
ಪದೇ ಪದೇ ಆಫ್ ಸ್ಟಂಪ್ ಎಸೆತಗಳಲ್ಲೇ ವಿಕೆಟ್ ಒಪ್ಪಿಸುತ್ತಿರುವ ಕೊಹ್ಲಿ, ಅದರಿಂದ ಹೊರ ಬರಲು ವಿಫಲರಾಗುತ್ತಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲೂ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂದು ಕೊಹ್ಲಿನ ಸರಾಸರಿ ಕುಸಿಯಲು ಪ್ರಮುಖ ಕಾರಣ ಏನೆಂಬುದನ್ನು ವಿವರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಂಜ್ರೇಕರ್, "ವಿರಾಟ್ ಅವರ ಸರಾಸರಿ ಈಗ 48ಕ್ಕೆ ಕುಸಿಯಲು ಒಂದು ಪ್ರಮುಖ ಕಾರಣವೆಂದರೆ, ಆಫ್-ಸ್ಟಂಪ್ ದೌರ್ಬಲ್ಯ. ಆದರೆ ಅದನ್ನು ನಿಭಾಯಿಸಲು ಬೇರೆ ಮಾರ್ಗ ಕಂಡುಕೊಳ್ಳದೆ ಇರುವುದು ಅವರ ಹಠಮಾರಿ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಒಂದೇ ರೀತಿಯ ಎಸೆತಗಳಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಔಟ್ ಸೈಡ್ ಆಫ್-ಸ್ಟಂಪ್ ಎಸೆತಗಳನ್ನು ಎದುರಿಸಲು ಹೆಣಗಾಡುತ್ತಿದ್ದಾರೆ. ಕವರ್ ಡ್ರೈವ್ಗೆ ಪ್ರಯತ್ನಿಸುವ ಸಂದರ್ಭದಲ್ಲಿ ವಿಕೆಟ್ ಕೀಪರ್ ಅಥವಾ ಸ್ಲಿಪ್ ಫೀಲ್ಡರ್ಗೆ ಕ್ಯಾಚ್ ನೀಡುತ್ತಿದ್ದಾರೆ. ಈ ವೀಕ್ನೆಸ್ ಅನ್ನು ಅರಿತಿರುವ ಬೌಲರ್ಗಳು, ಕೊಹ್ಲಿಗೆ ಒಂದೇ ರೀತಿಯ ಎಸೆತಗಳನ್ನು ಎಸೆಯುತ್ತಿದ್ದಾರೆ. ಆ ಮೂಲಕ ಸೂಪರ್ ಸ್ಟಾರ್ ಬ್ಯಾಟರ್ನನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಸರಾಸರಿ ಕುಸಿತ
2019ರ ಕೊನೆಯಲ್ಲಿ 54.98ರ ಬ್ಯಾಟಿಂಗ್ ಸರಾಸರಿ ಹೊಂದಿದ್ದ ಕೊಹ್ಲಿ,ಈಗ 47.91ಕ್ಕೆ ಕುಸಿದಿದೆ. 120 ಪಂದ್ಯಗಳಲ್ಲಿ 30 ಶತಕ ಮತ್ತು 31 ಅರ್ಧಶತಕಗಳೊಂದಿಗೆ 9,152 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 254*. 2020ರ ಆರಂಭದಿಂದ 36 ಟೆಸ್ಟ್ ಮತ್ತು 63 ಇನ್ನಿಂಗ್ಸ್ಗಳಲ್ಲಿ 32.50 ಕ್ಕಿಂತ ಕಡಿಮೆ ಸರಾಸರಿಯಲ್ಲಿ 1,950 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 186.
ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ಪರ್ತ್ ಟೆಸ್ಟ್ನಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಮತ್ತೆ ವೈಫಲ್ಯದ ಹಾದಿಗೆ ಮರಳುತ್ತಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಕೊಹ್ಲಿ ಪಾಲಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಈ ವರ್ಷ 8 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ 27.84 ಸರಾಸರಿಯಲ್ಲಿ 362 ರನ್ ಗಳಿಸಿದ್ದಾರೆ. 15 ಇನ್ನಿಂಗ್ಸ್ಗಳಲ್ಲಿ 1 ಶತಕ ಮತ್ತು 1 ಅರ್ಧಶತಕ ಸಿಡಿಸಿದ್ದಾರೆ.