20 ವರ್ಷಗಳ ದಾಂಪತ್ಯದ ನಂತರ ವೀರೇಂದ್ರ ಸೆಹ್ವಾಗ್-ಆರತಿ ಅಹ್ಲಾವತ್ ವಿಚ್ಛೇದನ? ಪರಸ್ಪರ ಅನ್ಫಾಲೋ, ಪ್ರತ್ಯೇಕ ವಾಸ
Virender Sehwag Aarti Ahlawat divorced?: ವೀರೇಂದ್ರ ಸೆಹ್ವಾಗ್ ಮತ್ತು ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ.

ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ವದಂತಿಯ ನಡುವೆಯೇ ಮಾಜಿ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಹಾಗೂ ಪತ್ನಿ ಆರತಿ ಅಹ್ಲಾವತ್ (Aarti Ahlawat) ಅವರು 20 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. 2004ರಲ್ಲಿ ಮದುವೆಯಾದ ಈ ಜೋಡಿ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸ್ಟಾರ್ ಕಪಲ್ಸ್ ನಡುವೆ ಸಂಬಂಧ ಸಂಪೂರ್ಣ ಹದಗೆಟ್ಟಿದ್ದು, ಡಿವೋರ್ಸ್ ಪಡೆಯಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಹಲವು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಜೋಡಿ ಶೀಘ್ರದಲ್ಲೇ ವಿಚ್ಛೇದನ (Divorce) ಪಡೆಯಲಿದೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.
ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾದ ಸೆಹ್ವಾಗ್ ಮತ್ತು ಆರತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಆರ್ಯವೀರ್ ಮತ್ತು 2010 ರಲ್ಲಿ ವೇದಾಂತ್ ಜನಿಸಿದರು. ದೀರ್ಘಕಾಲದ ಸಹಭಾಗಿತ್ವದ ಹೊರತಾಗಿಯೂ ಇಬ್ಬರ ನಡುವಿನ ಇತ್ತೀಚಿನ ಬೆಳವಣಿಗೆಗಳು ಹೆಚ್ಚುತ್ತಿರುವ ಅಂತರವನ್ನು ಸೂಚಿಸುತ್ತಿವೆ. ದೀಪಾವಳಿ ಆಚರಣೆಯ ಸಮಯದಲ್ಲಿ ವೀರೇಂದ್ರ ತನ್ನ ಮಕ್ಕಳು ಮತ್ತು ತನ್ನ ತಾಯಿಯೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದನ್ನೂ ನಾವು ಗಮನಿಸಬಹುದು. ಆದರೆ, ಆರತಿಯ ಹೆಸರು ಉಲ್ಲೇಖಿಸಿರಲಿಲ್ಲ ಅಥವಾ ಚಿತ್ರಗಳನ್ನೂ ಹಂಚಿಕೊಂಡಿರಲಿಲ್ಲ. ಇದು ಪ್ರತ್ಯೇಕತೆಯ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿತ್ತು.
ಎರಡು ವಾರಗಳ ಹಿಂದೆ ಸೆಹ್ವಾಗ್ ಪಾಲಕ್ಕಾಡ್ನ ವಿಶ್ವ ನಾಗಯಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರವಾಸದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಆದಾಗ್ಯೂ, ಪೋಸ್ಟ್ನಲ್ಲಿ ಆರತಿಯ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಇದು ಅವರ ಸಂಬಂಧ ಹಳಸಿದೆ ಎಂಬುದನ್ನು ಸೂಚಿಸಿತ್ತು. ಕ್ರಿಕೆಟ್ ಐಕಾನ್ ಸೆಹ್ವಾಗ್ ಮತ್ತು ಆರತಿ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡದಿದ್ದರೂ, ದಂಪತಿಗಳು ಬೇರೆ ಬೇರೆಯಾಗಿ ವಾಸಿಸುತ್ತಿರುವುದರ ಕುರಿತು ಮೂಲಗಳು ಖಚಿತಪಡಿಸಿವೆ. ಶೀಘ್ರದಲ್ಲೇ ಇಬ್ಬರು ವಿಚ್ಛೇದನದ ಕುರಿತು ತಮ್ಮ ಅಧಿಕೃತ ಹೇಳಿಕೆಗಳನ್ನು ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಆರತಿ ಯಾರು?
ನವದೆಹಲಿ ಮೂಲದ ಆರತಿ ಅಹ್ಲಾವತ್ ಅವರು 1980ರ ಡಿಸೆಂಬರ್ 16 ರಂದು ಜನಿಸಿದರು. ದೆಹಲಿ ವಿಶ್ವವಿದ್ಯಾಲಯದ ಮೈತ್ರೇಯಿ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರುವ ಅವರು, ಅದಕ್ಕೂ ಮುನ್ನ ಲೇಡಿ ಇರ್ವಿನ್ ಸೆಕೆಂಡರಿ ಶಾಲೆ ಮತ್ತು ಭಾರತೀಯ ವಿದ್ಯಾಭವನದಲ್ಲಿ ಶಿಕ್ಷಣವನ್ನು ಪಡೆದಿದ್ದರು. ಈ ಜೋಡಿಯ ಪ್ರೇಮಕಥೆ 2000ರ ದಶಕದ ಆರಂಭದ್ದು. 2004ರಲ್ಲಿ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ಆಯೋಜಿಸಲಾದ ಭವ್ಯ ಮತ್ತು ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಕೊನೆಗೊಂಡಿತು. ಆರತಿ ಅವರ ತಂದೆ ಸೂರಜ್ ಸಿಂಗ್ ಅಹ್ಲಾವತ್ ವಕೀಲರಾಗಿದ್ದರು.
ಸೆಹ್ವಾಗ್ ಕ್ರಿಕೆಟ್ ಬದ್ಧತೆ ಮತ್ತು ಅವರ ಕುಟುಂಬ ಜೀವನ ಸಮತೋಲನಗೊಳಿಸಲ್ಲಿ ಆರತಿ ಪ್ರಮುಖ ಪಾತ್ರ ವಹಿಸಿದ್ದರು. ಸೆಹ್ವಾಗ್ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಅಂದಿನಿಂದ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಏಜೆನ್ಸಿಯ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುವುದು ಸೇರಿದಂತೆ ವಿವಿಧ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೀರು ಅಥವಾ ಆರತಿ ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ಅವರ ಪ್ರತ್ಯೇಕತೆಯ ಚಿಹ್ನೆಗಳು ಹೆಚ್ಚು ಸ್ಪಷ್ಟವಾಗುತ್ತಿವೆ.
ವೀರೇಂದ್ರ ಸೆಹ್ವಾಗ್ ವೃತ್ತಿಜೀವನ
1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ವೀರು, ಅಂದಿನಿಂದ 2015ರ ತನಕ 374 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಟೆಸ್ಟ್ನಲ್ಲಿ 104 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 23 ಶತಕ, 32 ಅರ್ಧಶತಕ ಸಹಿತ 8586 ರನ್ ಗಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ 251 ಪಂದ್ಯಗಳಲ್ಲಿ 15 ಶತಕ, 38 ಅರ್ಧಶತಕ ಸಹಿತ 8273 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಕಡಿಮೆ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವೀರು, 19 ಪಂದ್ಯಗಳಲ್ಲಿ ಆಡಿದ್ದಾರೆ. 2 ಅರ್ಧಶತಕ ಸಹಿತ 394 ರನ್ ಬಾರಿಸಿದ್ದಾರೆ. ಐಪಿಎಲ್ನಲ್ಲಿ ಹಲವು ತಂಡಗಳ ಪರ ಆಡಿರುವ ದಿಗ್ಗಜ ಕ್ರಿಕೆಟಿಗ, 104 ಪಂದ್ಯಗಳಲ್ಲಿ 2 ಶತಕ, 16 ಅರ್ಧಶತಕ ಸಹಿತ 2728 ರನ್ ಗಳಿಸಿದ್ದಾರೆ.
