ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ನಲ್ಲಿ ಕೆಟ್ಟ ಪ್ರದರ್ಶನ; ಆಯ್ಕೆ ಸಮಿತಿಯಿಂದ ಇಬ್ಬರನ್ನು ಕಿತ್ತೊಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಟಿ20 ವಿಶ್ವಕಪ್​ನಲ್ಲಿ ಕೆಟ್ಟ ಪ್ರದರ್ಶನ; ಆಯ್ಕೆ ಸಮಿತಿಯಿಂದ ಇಬ್ಬರನ್ನು ಕಿತ್ತೊಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

Pakistan Cricket Board: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯಿಂದ ಇಬ್ಬರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಿತ್ತೊಗೆದಿದೆ.

ಟಿ20 ವಿಶ್ವಕಪ್​ನಲ್ಲಿ ಕೆಟ್ಟ ಪ್ರದರ್ಶನ; ಆಯ್ಕೆ ಸಮಿತಿಯಿಂದ ಇಬ್ಬರನ್ನು ಕಿತ್ತೊಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಟಿ20 ವಿಶ್ವಕಪ್​ನಲ್ಲಿ ಕೆಟ್ಟ ಪ್ರದರ್ಶನ; ಆಯ್ಕೆ ಸಮಿತಿಯಿಂದ ಇಬ್ಬರನ್ನು ಕಿತ್ತೊಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಪಾಕಿಸ್ತಾನ ತಂಡವು (Pakistan Cricket Team) ಕೆಟ್ಟ ಪ್ರದರ್ಶನ ನೀಡಿದ ಸಂದರ್ಭದಲ್ಲೆಲ್ಲಾ ಪಾಕ್ ಕ್ರಿಕೆಟ್ ಮಂಡಳಿಯಲ್ಲಿ (Pakistan Cricket Board) ಬದಲಾವಣೆ ಆಗುತ್ತಲೇ ಇರುತ್ತದೆ. ಅದು ಟಿ20 ವಿಶ್ವಕಪ್ (T20 World Cup 2024) ಬಳಿಕವೂ ಮುಂದುವರೆದಿದೆ. ಮೆಗಾ ಟೂರ್ನಿ ವಿಶ್ವಕಪ್​ನಲ್ಲಿ ಬಾಬರ್ ನೇತೃತ್ವದ ತಂಡವು ಅತಿ ಕಳಪೆ ಪ್ರದರ್ಶನ ನೀಡಿತ್ತು. ಸೂಪರ್​​-8 ಪ್ರವೇಶಿಸಲು ಸಹ ವಿಫಲವಾಯಿತು. ಇದಲ್ಲದೆ ಅಮೆರಿಕದಂತಹ ಸಣ್ಣ ತಂಡದ ವಿರುದ್ಧ ಸೋತು ಮುಖಭಂಗಕ್ಕೆ ಒಳಗಾಗಿತ್ತು. ಇದು ಪಿಸಿಬಿ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು.

ಪಾಕ್ ಗುಂಪು ಹಂತದಲ್ಲೇ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಕೆಲ ಬದಲಾವಣೆಯಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದರಂತೆ ಪಿಸಿಬಿಯಲ್ಲಿ ಇಬ್ಬರಿಗೆ ತಲೆದಂಡವಾಗಿದೆ. ನಿರಾಶಾದಾಯಕ ವಿಶ್ವಕಪ್ ನಂತರ ಆಯ್ಕೆದಾರರ ಸ್ಥಾನದಿಂದ ವಹಾಬ್ ರಿಯಾಜ್ ಮತ್ತು ಅಬ್ದುಲ್ ರಜಾಕ್​​ ಅವರನ್ನು ವಜಾಗೊಳಿಸಲಾಗಿದೆ. ರಜಾಕ್ ಅವರನ್ನು ಕೆಲವು ವಾರಗಳ ಹಿಂದೆ ಪುರುಷ ಮತ್ತು ಮಹಿಳಾ ತಂಡಕ್ಕೆ ಸೆಲೆಕ್ಟರ್​ ಹುದ್ದೆಗೆ ನೇಮಿಸಲಾಗಿತ್ತು. ಆದರೆ ಈಗ ಅವರಿಗೂ ಗೇಟ್​ಪಾಸ್ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಇಎಸ್​​ಪಿಎನ್ ಕ್ರಿಕ್​​ಇನ್ಫೋ ವರದಿ ಪ್ರಕಾರ, ಇನ್ನೊಂದು ವಾರದಲ್ಲಿ ಅಧಿಕೃತವಾಗಿ ಪ್ರಕಟಿಸಬಹುದು. ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಸೂಪರ್​​-8 ಪ್ರವೇಶಿಸಲು ಸಾಧ್ಯವಾಗದ ಕಾರಣ ರಿಯಾಜ್ ಸ್ಥಾನ ಅಪಾಯಕ್ಕೆ ಸಿಲುಕಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ಮೆಗಾ ಟೂರ್ನಿ ಕೇವಲ 11 ದಿನಗಳ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೆಲೆಕ್ಟರ್​​ಗಳ ಸ್ಥಾನದಿಂದ ಇಬ್ಬರನ್ನು ಕಿತ್ತೊಗೆದಿದೆ. ವಹಾಬ್​ ಕೂಡ ಕಳೆದ ವರ್ಷದ ಕೊನೆಯಲ್ಲಿ ಸೆಲೆಕ್ಟರ್ ಹುದ್ದೆಗೇರಿದ್ದರು.

ಮುಖ್ಯ ಆಯ್ಕೆದಾರರ ಮರು ನೇಮಕ

ರಿಯಾಜ್ ಅವರನ್ನು ಈ ಹಿಂದೆ ಚೀಫ್​ ಸೆಲೆಕ್ಟರ್ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ನಂತರ 7 ಆಯ್ಕೆಗಾರರ ​​ಸಮಿತಿಯಲ್ಲಿ ಸೇರಿಸಲಾಯಿತು. ಈ ಸಮಿತಿಗೆ ಯಾವುದೇ ಮುಖ್ಯಸ್ಥರು ಇರಲಿಲ್ಲ. ಇದೀಗ ಪಿಸಿಬಿ ಏಳು ಸದಸ್ಯರ ಆಯ್ಕೆಗಾರರ ​​ತಂಡದಲ್ಲಿ ಬದಲಾವಣೆಗೆ ಮುಂದಾಗಿದೆ. ಆಯ್ಕೆ ಸಮಿತಿಯ ಸ್ವರೂಪವನ್ನು ಪುನರ್​ರಚಿಸಲು ನಿರ್ಧರಿಸಿದೆ. ಮುಖ್ಯ ಆಯ್ಕೆದಾರರನ್ನು ಮರುನೇಮಕ ಮಾಡುವ ನಿರೀಕ್ಷೆಯಿದೆ. ಆಯ್ಕೆಗಾರರ ​​ಸಂಖ್ಯೆಯನ್ನು ಕಡಿತಗೊಳಿಸಲಾಗುವುದು. ರಿಯಾಜ್ ಮತ್ತು ರಜಾಕ್ ಸಮಿತಿಯ ಭಾಗವಾಗಿರುವುದಿಲ್ಲ.

ರಿಯಾಜ್ ಅವರು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಅತ್ಯಂತ ನಿಕಟ ಮಿತ್ರ ಎಂದು ಹೇಳಲಾಗಿದೆ. ಆದರೆ ಅವರನ್ನೇ ವಜಾಗೊಳಿಸಿದ್ದು ಕೆಲವರಿಗೆ ಆಘಾತ ಉಂಟು ಮಾಡಿದೆ. ನಖ್ವಿ ಪಂಜಾಬ್‌ನ (ಪಂಜಾಬ್ ಪಾಕಿಸ್ತಾನದ ಒಂದು ಪ್ರಾಂತ್ಯ) ಉಸ್ತುವಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ರಿಯಾಜ್ ಉಸ್ತುವಾರಿ ಕ್ರೀಡಾ ಸಚಿವರಾಗಿದ್ದರು. ಬಳಿಕ ರಿಯಾಜ್​ರನ್ನು ಪಿಸಿಬಿಗೆ ಕರೆತಂದು ಚೀಫ್ ಸೆಲೆಕ್ಟರ್​ ಮಾಡಲಾಯಿತು. ರಿಯಾಜ್ ಅವರು ಹಿರಿಯ ತಂಡದ ಮ್ಯಾನೇಜರ್ ಆಗಿ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡದೊಂದಿಗೆ ಪ್ರಯಾಣಿಸಿದ್ದರು.

ಈಗ ಮ್ಯಾನೇಜರ್​ ಹುದ್ದೆಯಿಂದಲೂ ಕೆಳಗಿಳಿಸಲು ಪಿಸಿಬಿ ಚಿಂತನೆ ನಡೆಸುತ್ತಿದೆ. ಪಾಕಿಸ್ತಾನ ತಂಡವು ಆಗಸ್ಟ್ 21 ರಿಂದ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳ ಸರಣಿಯನ್ನಾಡಲಿದೆ. ನಿರ್ಣಾಯಕ ಟೆಸ್ಟ್‌ಗಳಿಗೂ ಮುನ್ನ ಆಯ್ಕೆದಾರರ ಹುದ್ದೆಗೆ ಯಾರು ನೇಮಕಗೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.