ಕಪಿಲ್ ದೇವ್ ಕೊಲ್ಲಲು ಪಿಸ್ತೂಲ್ ತೆಗೆದುಕೊಂಡು ಹೋಗಿದ್ದೆ; 1980ರ ಘಟನೆ ನೆನೆದ ಯುವಿ ತಂದೆ ಯೋಗರಾಜ್ ಸಿಂಗ್
Yograj Singh: 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರ ಮನೆಗೆ ತೆರಳಿ ಬೆದರಿಕೆ ಹಾಕಿದ ಘಟನೆಯನ್ನು ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ನೆನಪಿಸಿಕೊಂಡಿದ್ದಾರೆ.

ನವದೆಹಲಿ: ತನ್ನನ್ನು ಭಾರತ ತಂಡದಿಂದ ಕೈಬಿಟ್ಟಿದ್ದಕ್ಕೆ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ಕೊಲ್ಲಲು ಪಿಸ್ತೂಲ್ ತೆಗೆದುಕೊಂಡು ಹೋಗಿದ್ದ ಆಘಾತಕಾರಿ ಘಟನೆಯನ್ನು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಂದೆ ಹಾಗೂ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ. ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಯೋಗರಾಜ್, ಕೇವಲ ಮೂರು ತಿಂಗಳ ಅಂತರದಲ್ಲಿ ಕಪಿಲ್ ದೇವ್ ನಾಯಕನಾಗಿ ಆಯ್ಕೆಯಾದ ಬಳಿಕ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಇದೇ ಕಾರಣಕ್ಕೆ ಯುವಿ ತಂದೆ, ಕೊಲ್ಲಲು ಹೋಗಿದ್ದರಂತೆ!
1980ರ ಡಿಸೆಂಬರ್ 21ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಯೋಗರಾಜ್ ಸಿಂಗ್, ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದರು. ಭಾರತದ ಪರ ಒಂದು ಟೆಸ್ಟ್, 6 ಏಕದಿನ ಆಡಿರುವ ಯೋಗರಾಜ್ಗೆ ಕಪಿಲ್ ದೇವ್ ತನ್ನ ನಾಯಕತ್ವದಲ್ಲಿ ಅವಕಾಶ ನೀಡಲಿಲ್ಲ ಎಂಬ ಆರೋಪ ಇದೆ. ಈ ಕಾರಣಕ್ಕೆ ಕಪಿಲ್ ದೇವ್ ಮನೆಗೆ ತೆರಳಿ ಬೆದರಿಕೆ ಹಾಕಿದ ಘಟನೆಯನ್ನು ಇದೀಗ ನೆನೆದಿದ್ದಾರೆ. ಸಾಮಾಜಿಕ ಮಾಧ್ಯಮ ಪ್ರಭಾವಿ ಸಮದೀಶ್ ಭಾಟಿಯಾ ಅವರ ‘ಅನ್ಫಿಲ್ಟರ್ಡ್ ಬೈ ಸಮದೀಶ್’ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಕುರಿತು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಪಿಸ್ತೂಲ್ ತೆಗೆದುಕೊಂಡು ಹೋಗಿದ್ದೆ ಎಂದ ಯೋಗರಾಜ್
'ಕಪಿಲ್ ದೇವ್ ಅವರು ಭಾರತ ತಂಡ, ಉತ್ತರ ವಲಯ ಮತ್ತು ಹರಿಯಾಣದ ನಾಯಕರಾದಾಗ ಅವರು ಯಾವುದೇ ಕಾರಣವಿಲ್ಲದೆ ನನ್ನನ್ನು ಕೈಬಿಟ್ಟರು. ನನ್ನ ಕೈ ಬಿಟ್ಟಿದ್ದಕ್ಕೆ ಕಪಿಲ್ರನ್ನು ಪ್ರಶ್ನಿಸಲು ನನ್ನ ಹೆಂಡತಿ ಬಯಸಿದ್ದರು. ಆದರೆ ನಾನೇ ಪಾಠ ಕಲಿಸಬೇಕು ಎಂದು ಹೆಂಡತಿಗೆ ಹೇಳಿ, ನನ್ನ ಪಿಸ್ತೂಲ್ ತೆಗೆದುಕೊಂಡು ಸೆಕ್ಟರ್ 9 ರಲ್ಲಿರುವ ಕಪಿಲ್ ಮನೆಗೆ ಹೋದೆ. ಅದೇ ವೇಳೆ ಕಪಿಲ್ ತನ್ನ ತಾಯಿಯೊಂದಿಗೆ ಮನೆಯಿಂದ ಹೊರಗೆ ಬಂದರು. ಆಗ ಮನಬಂದಂತೆ ಬೈದಿದ್ದೆ. ನಿಮ್ಮಿಂದಾಗಿ ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನೀವು ಮಾಡಿದ ಕೆಲಸಕ್ಕೆ ನೀವು ಬೆಲೆ ತೆರುತ್ತೀರಿ ಎಂದು ನಾನು ಅವರಿಗೆ ಹೇಳಿದೆ. ನಾನು ಅವನಿಗೆ ಹೇಳಿದೆ ಎಂದಿದ್ದಾರೆ.
ನಾನೀಗ ಬಂದಿದ್ದು ನಿಮ್ಮ ತಲೆಗೆ ಗುಂಡು ಹಾರಿಸಲು. ಆದರೆ ನಿಮ್ಮ ಧರ್ಮನಿಷ್ಠ ತಾಯಿ ಇಲ್ಲಿದ್ದಾರೆ. ಹೀಗಾಗಿ, ಅಂದುಕೊಂಡದ್ದನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಪಿಲ್ಗೆ ಹೇಳಿದ್ದೆ. ಇನ್ಮುಂದೆ ಕ್ರಿಕೆಟ್ ಆಡಬಾರದೆಂದು ಆ ಕ್ಷಣವೇ ನಿರ್ಧರಿಸಿದೆ. ನನ್ನ ಬದಲಿಗೆ ಯುವರಾಜ್ ಆಡಬೇಕೆಂದು ಅಂದೇ ನಿರ್ಧರಿಸಿಬಿಟ್ಟೆ ಎಂದು 66 ವರ್ಷದ ಯೋಗರಾಜ್ ಹೇಳಿದ್ದಾರೆ. ಅದರಂತೆ ಮಗ ಯುವರಾಜ್ನನ್ನು ಸಿದ್ಧಪಡಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಪರಿಚಯಿಸಿದರು. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.
ಬಿಷನ್ ಸಿಂಗ್ ಬೇಡಿ ವಿರುದ್ಧವೂ ಕಿಡಿ
2000-2017ರ ಅವಧಿಯಲ್ಲಿ 402 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಯುವಿ 11,178 ರನ್ ಗಳಿಸಿದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ 17 ಶತಕ, 71 ಅರ್ಧಶತಕ ಬಾರಿಸಿದ್ದಾರೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ತಮ್ಮ ವೃತ್ತಿಜೀವನ ಕೊನೆಗೊಳಿಸಿದರು. ಇದೇ ವೇಳೆ ದಿವಂಗತ ಬಿಷನ್ ಸಿಂಗ್ ಬೇಡಿ ಬಗ್ಗೆಯೂ ಮಾತನಾಡಿದ ಯೋಗರಾಜ್ ಸಿಂಗ್, ಕಟು ಟೀಕೆ ಮಾಡಿದರು. ತನ್ನ ವಿರುದ್ಧ ಪಿತೂರಿ ನಡೆಸಿದ ವ್ಯಕ್ತಿಗಳಲ್ಲಿ ಬಿಷನ್ ಕೂಡಾ ಇದ್ದರು. ನನ್ನನ್ನು ತಂಡದಿಂದ ಕೈಬಿಡಲು ಅವರು ಕೂಡ ಕಾರಣರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಜಯ್ ಶಾ ಸ್ಥಾನ ತುಂಬಿದ ದೇವಜಿತ್ ಸೈಕಿಯಾ ಯಾರು?
ನನ್ನ ವಿರುದ್ಧ ಸಂಚು ರೂಪಿಸಿದ ವ್ಯಕ್ತಿಗಳಲ್ಲಿ ಬಿಷನ್ ಸಿಂಗ್ ಬೇಡಿ ಕೂಡ ಒಬ್ಬರು. ನಾನು ಬಿಷನ್ ಅವರನ್ನು ಎಂದಿಗೂ ಕ್ಷಮಿಸಲ್ಲ. ನನ್ನನ್ನು ಕೈಬಿಟ್ಟಾಗ ನಾನು ಆಯ್ಕೆದಾರರಲ್ಲಿ ಒಬ್ಬರಾದ ರವೀಂದ್ರ ಚಡ್ಡಾ ಅವರೊಂದಿಗೆ ಮಾತನಾಡಿದ್ದೆ. ಬಿಷನ್ ಸಿಂಗ್ ಬೇಡಿ (ಮುಖ್ಯ ಆಯ್ಕೆದಾರ) ನನ್ನನ್ನು ಆಯ್ಕೆ ಮಾಡಲು ಬಯಸಲಿಲ್ಲ. ಏಕೆಂದರೆ ನಾನು ಸುನಿಲ್ ಗವಾಸ್ಕರ್ ಅವರ ವ್ಯಕ್ತಿ ಎಂದು ಭಾವಿಸಿದ್ದರು ಎಂದ ಯೋಗರಾಜ್, 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಪ್ರಮುಖ ಪಾತ್ರ ವಹಿಸಿದ ನಂತರ ಕಪಿಲ್ ದೇವ್ ಅವರಿಗೆ ಮೆಸೇಜ್ ಮಾಡಿದ ಮತ್ತೊಂದು ಘಟನೆ ನೆನಪಿಸಿಕೊಂಡಿದ್ದಾರೆ.
'2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ಅಳುತ್ತಿದ್ದ ವ್ಯಕ್ತಿ ಅಂದರೆ, ಅದು ಕಪಿಲ್ ದೇವ್. ವಿಶ್ವಕಪ್ನಲ್ಲಿ ನನ್ನ ಮಗ ನಿಮಗಿಂತ ಉತ್ತಮವಾಗಿ ಆಡಿದ್ದಾನೆ ಎಂದು ನಾನು ಅವರಿಗೆ ಸಂದೇಶ ಕಳುಹಿಸಿದೆ. ಮುಂದಿನ ಜನ್ಮದಲ್ಲಿ ನಾವು ಸಹೋದರರಾಗಿ ಹುಟ್ಟೋಣ ಎಂದು ಕಪಿಲ್ ನನಗೆ ರಿಪ್ಲೈ ಮಾಡಿದ್ದರು. ಅವರ ವಿರುದ್ಧ ನನಗೆ ಪ್ರತೀಕಾರವಿದೆ. ಆ ಘಟನೆ ಈಗಲೂ ನೋವುಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
