ಶುಭ್ಮನ್ ಗಿಲ್ ಅರ್ಧಶತಕ, ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್; ಜಿಂಬಾಬ್ವೆ ವಿರುದ್ಧ 3ನೇ ಟಿ20ಯಲ್ಲಿ ಭಾರತಕ್ಕೆ ಜಯ
ಶುಭ್ಮನ್ ಗಿಲ್ ನೇತೃತ್ವದ ಭಾರತ ಯುವ ತಂಡವು ಜಿಂಬಾಬ್ವೆ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಮೊದಲ ಪಂದ್ಯ ಸೋತಿದ್ದ ತಂಡವು ಸತತ ಎರಡು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಜಿಂಬಾಬ್ವೆ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿಯೂ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 23 ರನ್‌ಗಳಿಂದ ಜಯಭೇರಿ ಬಾರಿಸಿದೆ. ಇದರೊಂದಿಗೆ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ನಾಯಕ ಶುಭ್ಮನ್ ಗಿಲ್ ಆಕರ್ಷಕ ಅರ್ಧಶತಕ, ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಆಕ್ರಮಣಕಾರಿ ಆಟ ತಂಡಕ್ಕೆ ನೆರವಾಯ್ತು. ಇದೇ ವೇಳೆ ವಾಷಿಂಗ್ಟನ್ ಸುಂದರ್ ಮಾರಕ ದಾಳಿ ಹಾಗೂ ಖಲೀಲ್ ಅಹ್ಮದ್ ಎಕಾನಮಿ ಬೌಲಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಸ್ಫೋಟಕ ಆರಂಭ ಮತ್ತು ಕೊನೆಯಲ್ಲಿ ಕಂಬ್ಯಾಕ್ ನೆರವಿಂದ ನಾಲ್ಕು ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಸಿಕಂದರ್ ರಝಾ ಬಳಗ, 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಇದರೊಂದಿಗೆ ಸರಣಿಯಲ್ಲಿ ಹಿನ್ನಡೆ ಅನುಭವಿಸಿತು.
ಮೊದಲೆರಡು ಪಂದ್ಯಗಳಿಗಿಂತ ಭಿನ್ನ ತಂಡವನ್ನು ಕಣಕ್ಕಿಳಿಸಿದ ಭಾರತ; ವಿಶ್ವಕಪ್ ವಿಜೇತರಾದ ಜೈಸ್ವಾಲ್, ಸ್ಯಾಮ್ಸನ್ ಹಾಗೂ ದುಬೆ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿತು. ಜೈಸ್ವಾಲ್ 27 ಎಸೆತಗಳಲ್ಲಿ 36 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ ಅಜೇಯ 12 ರನ್ ಗಳಿಸಿದರು. ನಾಯಕನಾಟವಾಡಿದ ಗಿಲ್ 49 ಎಸೆತಗಳಲ್ಲಿ 3 ಸ್ಫೋಟಕ ಸಿಕ್ಸರ್ ಸಹಿತ 66 ರನ್ ಸಿಡಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಲಯ ಕಳೆದುಕೊಂಡ ಕಳೆದ ಪಂದ್ಯದ ಶತಕವೀರ ಅಭಿಷೇಕ್ ಶರ್ಮಾ, 9 ಎಸೆತಗಳಲ್ಲಿ ಕೇವಲ 10 ರನ್ ಮಾತ್ರ ಗಳಿಸಿದರು. ಗಾಯಕ್ವಾಡ್ 28 ಎಸೆತಗಳಲ್ಲಿ 49 ರನ್ ಗಳಿಸಿ ಒಂದು ರನ್ ಕೊರತೆಯಿಂದ ಅರ್ಧಶತಕ ವಂಚಿತರಾದರು.
ಅದ್ಧೂರಿ ಆರಂಭ, ಸಾಧಾರಣ ಟಾರ್ಗೆಟ್
ಜಿಂಬಾಬ್ವೆ ತಂಡವು ಭಾರತದ ಇನ್ನಿಂಗ್ಸ್‌ನುದ್ದಕ್ಕೂ ಫೀಲ್ಡಿಂಗ್‌ನಲ್ಲಿ ತೀರಾ ಕಳಪೆಯಾಗಿತ್ತು. ಹಲವು ಕ್ಯಾಚ್ ಡ್ರಾಪ್ ಮಾಡಿ ಭಾರತೀಯರಿಗೆ ಜೀವದಾನ ಕೊಟ್ಟಿತು. ಫೀಲ್ಡಿಂಗ್‌ನಲ್ಲೂ ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿತು. ಆದರೂ, ಮೊದಲ ನಾಲ್ಕು ಓವರ್‌ಗಳಲ್ಲಿ ಸ್ಫೋಟಕ ಆರಂಭ ಪಡೆದಿದ್ದ ಭಾರತವು 200ಕ್ಕೂ ಅಧಿಕ ರನ್ ಗಳಿಸುವ ಸೂಚನೆ ನೀಡಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ.
ಚೆಂಡಿನೊಂದಿಗೆ ಮತ್ತೊಮ್ಮೆ ಅಬ್ಬರಿಸಿದ ಜಿಂಬಾಬ್ವೆ ನಾಯಕ ಸಿಕಂದರ್ ರಝಾ, 6ರ ಎಕಾನಮಿಯೊಂದಿಗೆ ಬೌಲಿಂಗ್ ಮಾಡಿ 2 ವಿಕೆಟ್ ಪಡೆದರು. ಮುಜರಬಾನಿ ಕೂಡಾ 2 ವಿಕೆಟ್ ಕಬಳಿಸಿದರು.
ಬೃಹತ್ ಗುರಿ ಚೇಸಿಂಗ್‌ಗೆ ಇಳಿದ ಜಿಂಬಾಬ್ವೆ ಮತ್ತೊಮ್ಮೆ ಕಳಪೆ ಆರಂಭ ಪಡೆಯಿತು. 39 ರನ್ ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ ವೆಸ್ಲಿ ಮಾಧೆವೆರೆ 1 ರನ್ ಗಳಿಸಿ ಔಟಾದರೆ, ತಡಿವಾನಾಶೆ ಮರುಮಣಿ ಆಟ 13 ರನ್‌ಗಳಿಗೆ ಅಂತ್ಯವಾಯ್ತು. ಬ್ರಿಯಾನ್ ಬೆನೆಟ್ 4 ರನ್ ಗಳಿಸಿದರೆ, ನಾಯಕ ಸಿಕಂದರ್ ರಝಾ 15 ರನ್ ಗಳಿಸಿದ್ದಾಗ ವಾಷಿಂಗ್ಟನ್ ಎಸೆತದಲ್ಲಿ ರಿಂಕುಗೆ ಕ್ಯಾಚ್ ನೀಡಿ ಔಟಾದರು. ಅವರ ಬೆನ್ನಲ್ಲೇ ಜೋನಾಥನ್ ಕ್ಯಾಂಪ್ಬೆಲ್ ಕೂಡಾ 1 ರನ್ ಗಳಿಸಿ ಔಟಾದರು.
ಈ ವೇಳೆ ಒಂದಾದ ಡಿಯೋನ್ ಮೈಯರ್ಸ್ ಮತ್ತು ಕ್ಲೈವ್ ಮದಂಡೆ ಆಕರ್ಷಕ ಅರ್ಧಶತಕದ ಜೊತೆಯಾಟವಾಡಿದರು. ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಇವರಿಬ್ಬರ ಬ್ಯಾಟ್‌ನಿಂದ 77(57) ರನ್‌ಗಳ ಭರ್ಜರಿ ಜೊತಯಾಟ ಬಂತು. 17ನೇ ಓವರ್‌ನಲ್ಲಿ ಮದಂಡೆ ವಿಕೆಟ್ ಪಡೆಯುವ ಮೂಲಕ ವಾಷಿಂಗ್ಟನ್ ಸುಂದರ್ ಮತ್ತೆ ಪಂದ್ಯದ ತೀವ್ರತೆ ಹೆಚ್ಚಿಸಿದರು. ಆ ಬಳಿಕ ತಂಡದಿಂದ ಗುರಿ ತಲುಪಲು ಸಾಧ್ಯವಾಗಲಿಲ್ಲ. ಅಬ್ಬರಿಸಿದ ಮೈಯರ್ಸ್ ಚೊಚ್ಚಲ ಅರ್ಧಶತಕ ಸಿಡಿಸಿ ಅಬ್ಬರಿಸಿದರು.
ಭಾರತ ಕ್ರಿಕೆಟ್ ತಂಡದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಮುಂದಿನ 3 ವರ್ಷಗಳಲ್ಲಿ 5 ಐಸಿಸಿ ಟೂರ್ನಿಗಳು; ನೂತನ ಹೆಡ್ಕೋಚ್ ಗೌತಮ್ ಗಂಭೀರ್ ಮುಂದಿರುವ ಸವಾಲುಗಳೇನು?