ನಿಮ್ಮೊಂದಿಗೆ ನಮ್ಮ ಮರ್ಯಾದೆಯೂ ತೆಗೆಯುತ್ತಿದ್ದೀರಿ; ಹಸನ್ ರಾಝಾ ವಿವಾದಾತ್ಮಕ ಹೇಳಿಕೆಗೆ ವಾಸೀಂ ಅಕ್ರಮ್ ತಿರುಗೇಟು
Wasim Akram on Hasan Raza: ಭಾರತದ ಬೌಲರ್ಗಳಿಗೆ ವಿಶೇಷ ಬೌಲಿಂಗ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದ ಪಾಕ್ನ ಹಸನ್ ರಾಝಾಗೆ ಅವರದ್ದೇ ದೇಶದ ವಾಸೀಂ ಅಕ್ರಮ್ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಭಾರತೀಯ ಬೌಲರ್ಗಳಿಗೆ ಐಸಿಸಿ (ICC) ಮತ್ತು ಬಿಸಿಸಿಐ (BCCI) ಸ್ಪೆಷಲ್ ಬಾಲ್ಗಳನ್ನು ನೀಡುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಝಾಗೆ (Hasan Raza) ಅದೇ ದೇಶದ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಮ್ (Wasim Akram) ತಿರುಗೇಟು ಕೊಟ್ಟಿದ್ದಾರೆ. ಇಂತಹ ಹೇಳಿಕೆ ನೀಡುವ ಮೂಲಕ ನೀವಷ್ಟೇ ಅಲ್ಲ, ನಮ್ಮ ಮರ್ಯಾದೆಯೂ ತೆಗೆಯುತ್ತಿದ್ದೀರಿ ಎಂದು ಹೇಳಿದ್ದಾರೆ.
ನವೆಂಬರ್ 2ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್ಗಳ ಘಾತಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಕೇವಲ 55 ರನ್ಗಳಿಗೆ ಕುಸಿದಿತ್ತು. ಈ ಪಂದ್ಯದ ಬೆನ್ನಲ್ಲೇ ಪಾಕ್ ಚಾನೆಲ್ವೊಂದರಲ್ಲಿ ವಿಶ್ಲೇಷಕರಾಗಿ ಭಾಗವಹಿಸಿದ್ದ ಹಸನ್ ರಾಝಾ, ಸಂದರ್ಶಕರ ಪ್ರಶ್ನೆಗೆ ಉತ್ತರಿಸುವಾಗ ನಾಲಿಗೆಯ ಹರಿಯಬಿಟ್ಟಿದ್ದರು. ಇದರಿಂದ ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ.
ರಾಝಾ ಹೇಳಿದ್ದೇನು?
ವಿಶ್ವಕಪ್ನಲ್ಲಿ ಉಳಿದ ತಂಡಗಳಿಗೆ ಹೋಲಿಸಿದರೆ, ಭಾರತದ ತಂಡಕ್ಕೆ ಐಸಿಸಿ ಮತ್ತು ಬಿಸಿಸಿಐ ಹೆಚ್ಚು ಸೀಮ್ ಮತ್ತು ಸ್ವಿಂಗ್ ಆಗುವ ಬಾಲ್ಗಳನ್ನೇ ನೀಡುತ್ತಿವೆ. ಇದೇ ಕಾರಣಕ್ಕೆ ಮೆನ್ ಇನ್ ಬ್ಲೂ ಬೌಲರ್ಗಳು ಪರಿಣಾಮಕಾರಿ ಬೌಲಿಂಗ್ ನಡೆಸಲು ಸಾಧ್ಯವಾಗುತ್ತಿದೆ. ಇದು ತನಿಖೆ ಆಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು.
ವಾಸೀಂ ಅಕ್ರಮ್ ಕಟು ಟೀಕೆ
ರಾಝಾ ಅವರು ಮಾಡಿದ್ದ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಕ್ ಮಾಜಿ ನಾಯಕ ವಾಸಿಂ ಅಕ್ರಮ್, ತಿರುಗೇಟು ನೀಡಿದ್ದಾರೆ. ಸದ್ಯ ಅಕ್ರಮ್ ಟೀಕಿಸಿದ್ದು, ನೀವು ಮಾತ್ರವಲ್ಲದೆ ನಮಗೂ ಮುಜುಗರ ತರುವಂತೆ ಮಾಡುತ್ತಿದ್ದೀರಿ ಎಂದರು. ಚೆಂಡುಗಳ ಆಯ್ಕೆ ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ಸಹ ವಿವರಿಸಿದ ವಾಸೀಂ ಅಕ್ರಮ್, ರಾಝಾರ ಬಾಲಿಶ ಹೇಳಿಕೆ ತಿರುಗೇಟು ಕೊಟ್ಟಿದ್ದಾರೆ.
ಮ್ಯಾಚ್ಗೂ ಮುನ್ನ ಅಂಪೈರ್ಗಳು 12 ಚೆಂಡುಗಳ ಬಾಕ್ಸ್ನೊಂದಿಗೆ ಬೌಲರ್ಗಳ ತರುತ್ತಾರೆ. ಅವರು ಆದ್ಯತೆಯ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ. ಉಳಿದ 10 ಚೆಂಡುಗಳನ್ನು 4ನೇ ಅಂಪೈರ್ ಕೊಂಡೊಯ್ಯುತ್ತಾರೆ. ಬಳಿಕ ಮೊದಲು ಬ್ಯಾಟಿಂಗ್ ನಡೆಸಿದ ತಂಡವೂ ಮತ್ತೆ ಬೌಲಿಂಗ್ಗಿಳಿಯುವಾಗ ಇದೇ ರೀತಿ ಮಾಡಲಾಗುತ್ತದೆ. ಆಗಲೂ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ ಎಂದರು.
ಜಗತ್ತಿನ ಮುಂದೆ ಅವಮಾನಿಸುತ್ತಿದ್ದೀರಿ?
ಇದು ಎಲ್ಲಾ ಪಂದ್ಯಗಳಲ್ಲೂ ಇದೇ ಕ್ರಮ ಜರುಗುತ್ತದೆ. ಆದರೆ ಭಾರತದ ಬೌಲರ್ಸ್ಗೆ ಬೇರೆ ಚೆಂಡು ನೀಡಲಾಗುತ್ತದೆ ಎಂಬುದು ತಪ್ಪು. ಕಳೆದ ಎರಡು ದಿನಗಳಿಂದ ಈ ಆರೋಪದ ಬಗ್ಗೆ ಕೇಳುತ್ತಿದ್ದೆ. ನೀವು ನಿಮ್ಮನ್ನು ಮುಜುಗರಕ್ಕೆ ಒಳಗಾಗುವುದಲ್ಲದೆ, ಜಗತ್ತಿನ ಮುಂದೆ ನೀವು ನಮ್ಮನ್ನು ಅವಮಾನಿಸುತ್ತೀರಿ ಎಂದು ಎ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ. ವಾಸೀಂ ಅಕ್ರಮ್ ಭಾರತದ ಬೌಲಿಂಗ್ ವಿಭಾಗವನ್ನೂ ಹೊಗಳಿದರು.
ಭಾರತಕ್ಕೆ ಭರ್ಜರಿ ಗೆಲುವು
ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ 302 ರನ್ಗಳ ದಾಖಲೆಯ ಗೆಲುವು ಸಾಧಿಸಿತು. ಭಾರತೀಯ ಬೌಲರ್ಗಳ ದಾಳಿಗೆ ತತ್ತರಿಸಿದ ಲಂಕಾ 55 ರನ್ಗಳಿಗೆ ಸರ್ವಪತನಗೊಂಡಿತು. ಮೊಹಮ್ಮದ್ ಶಮಿ 5 ವಿಕೆಟ್, ಸಿರಾಜ್ 3, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ಟೀಮ್ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಅರಗಿಸಿಕೊಳ್ಳಲಾಗದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಟೀಕೆ ಮಾಡುತ್ತಿದ್ದಾರೆ.