ನಾನು ಸಾಕಷ್ಟು ಟೀಕೆ ಎದುರಿಸಬೇಕಾಗಬಹುದು; ಆದರೂ ಬಾಬರ್‌ಗಿಂತ ಕೊಹ್ಲಿಯೇ ಉತ್ತಮ ಬ್ಯಾಟರ್‌ ಎಂದ ವಾಸಿಂ ಅಕ್ರಂ
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಸಾಕಷ್ಟು ಟೀಕೆ ಎದುರಿಸಬೇಕಾಗಬಹುದು; ಆದರೂ ಬಾಬರ್‌ಗಿಂತ ಕೊಹ್ಲಿಯೇ ಉತ್ತಮ ಬ್ಯಾಟರ್‌ ಎಂದ ವಾಸಿಂ ಅಕ್ರಂ

ನಾನು ಸಾಕಷ್ಟು ಟೀಕೆ ಎದುರಿಸಬೇಕಾಗಬಹುದು; ಆದರೂ ಬಾಬರ್‌ಗಿಂತ ಕೊಹ್ಲಿಯೇ ಉತ್ತಮ ಬ್ಯಾಟರ್‌ ಎಂದ ವಾಸಿಂ ಅಕ್ರಂ

Virat Kohli vs Babar: ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಾಮ್ ನಡುವೆ ಯಾರು ಶ್ರೇಷ್ಠ ಎಂಬ‌ ಕುರಿತು ಹಲವು ಬಾರಿ ಚರ್ಚೆಗಳಾಗಿವೆ. ಈ ಕುರಿತು ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಂ ಅಕ್ರಂ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ವಿರಾಟ್ ಕೊಹ್ಲಿ ಅಥವಾ ಬಾಬರ್ ಅಜಾಮ್ ಎಂಬ ಬಗ್ಗೆ ವಾಸಿಂ ಅಕ್ರಮ್ ಕುತೂಹಲಕಾರಿ ಉತ್ತರ ಹೇಳಿದ್ದಾರೆ
ವಿರಾಟ್ ಕೊಹ್ಲಿ ಅಥವಾ ಬಾಬರ್ ಅಜಾಮ್ ಎಂಬ ಬಗ್ಗೆ ವಾಸಿಂ ಅಕ್ರಮ್ ಕುತೂಹಲಕಾರಿ ಉತ್ತರ ಹೇಳಿದ್ದಾರೆ

ಭಾರತ ಮತ್ತು ಪಾಕಿಸ್ತಾನ (Pakistan vs India) ನಡುವಿನ ಹೈವೋಲ್ಟೇಜ್ ಏಷ್ಯಾಕಪ್ (Asia Cup) ಘರ್ಷಣೆಗೆ‌ ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳ ಮುಖಾಮುಖಿಗೆ ಅಭಿಮಾನಿಗಳು ಸಿದ್ಧರಾಗಿದ್ದು, ರೋಚಕ ಹಣಾಹಣಿಯ ನಿರೀಕ್ಷೆ ಇದೆ. ಈ ನಡುವೆ ಪಂದ್ಯದಲ್ಲಿ ಜಿದ್ದಿನ ಪೈಪೋಟಿ ಮತ್ತು ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಬಲಿಷ್ಟ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಮ್ ಬಗೆಗಿನ ಚರ್ಚೆಗಳು ಕೂಡಾ ಜೋರಾಗಿವೆ. ಇಬ್ಬರಲ್ಲಿ ಯಾರು ಶ್ರೇಷ್ಠ ಎಂಬ‌ ಆಯ್ಕೆ ಪ್ರಾರಂಭವಾಗಿದೆ. ಈ ಕುರಿತು ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಂ ಅಕ್ರಂ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಏಷ್ಯಾಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ 151 ರನ್‌ ಸಿಡಿಸುವ ಮೂಲಕ ಪಾಕ್‌ ನಾಯಕ ಈಗಾಗಲೇ ಉತ್ತಮ ಆರಂಭ ಪಡೆದಿದ್ದಾರೆ. ಇದು ಏಕದಿನ ವೃತ್ತಿಜೀವನದಲ್ಲಿ ಬಾಬರ್ ಅವರ 19ನೇ ಶತಕವಾಗಿದೆ. ಅತ್ತ ಏಷ್ಯಾಕಪ್‌ನಲ್ಲಿ ಭಾರತದ ಅಭಿಯಾನ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಕೊಹ್ಲಿ ಬ್ಯಾಟಿಂಗ್‌ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಇನ್ನೂ ಲಭಿಸಿಲ್ಲ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ 82 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದ ವಿರಾಟ್‌, ಈ ಬಾರಿ ಎಂಸಿಜಿಯಲ್ಲಿ ತೋರಿದ ವಿರಾಟರೂಪವನ್ನು ಮತ್ತೆ ಪ್ರದರ್ಶಿಸುವ ವಿಶ್ವಾಸ ಮೂಡಿಸಿದ್ದಾರೆ.

ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರ

ಫಾಕ್ಸ್ ಕ್ರಿಕೆಟ್‌ನೊಂದಿಗೆ ಮಾತನಾಡಿದ ವಾಸಿಂ ಅಕ್ರಂ ಅವರಲ್ಲಿ, ಬಾಬರ್‌ ಮತ್ತು ವಿರಾಟ್‌ ಇಬ್ಬರ ನಡುವೆ ಉತ್ತಮ ಬ್ಯಾಟರ್ ಯಾರು ಎಂದು ಆಯ್ಕೆ ಮಾಡುವಂತೆ ಕೇಳಲಾಯ್ತು. ತಮ್ಮದೇ ದೇಶದವರಿಂದ ಟೀಕೆಗಳನ್ನು ಎದುರಿಸಬಹುದು ಎಂದು ತಿಳಿದಿದ್ದರೂ, ಅಕ್ರಂ ಕೊಹ್ಲಿಯನ್ನು ಆಯ್ಕೆ ಮಾಡಿದರು. ಅಲ್ಲದೆ ಬಾಬರ್‌ ಬಗೆಗೂ ಮಾತನಾಡಿದ ಅವರು, ಪಾಕಿಸ್ತಾನದ ನಾಯಕನನ್ನು “ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರ” ಎಂದು ಬಣ್ಣಿಸಿದರು.

“ಇದು ತುಂಬಾ ಕಷ್ಟಕರವಾದ ನಿರ್ಧಾರ. ಇದೇ ಕಾರಣಕ್ಕೆ ನಾನು ಆಯ್ಕೆಗಾರನಾಗುವುದಿಲ್ಲ. ಬಹುಶಃ ನನ್ನ ಉತ್ತರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಬಹುದು. ಆದರೂ ನಾನು ಖಂಡಿತವಾಗಿಯೂ ಬಾಬರ್ ಆಜಮ್‌ಗಿಂತ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುತ್ತೇನೆ. ಬಾಬರ್ ಈಗ ಉನ್ನತ ಕ್ರಿಕೆಟಿಗನಾಗುವ ದಾರಿಯಲ್ಲಿ ಸಾಗುತ್ತಿದ್ದಾನೆ. ಆತ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ,” ಎಂದು ಅಕ್ರಂ ಹೇಳಿದ್ದಾರೆ.

ಆಧುನಿಕ ಕ್ರಿಕೆಟ್‌ ಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುವ ಬಾಬರ್‌, ಎಲ್ಲಾ ಸ್ವರೂಪಗಳಲ್ಲಿಯೂ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಭಾರತದ ವಿರುದ್ಧ ಈವರೆಗೆ ಐದು ಬಾರಿ ಏಕದಿನ ಸ್ವರೂಪದಲ್ಲಿ ಆಡಿರುವ ಬಾಬರ್‌, 2019ರಲ್ಲಿ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಟೀಮ್‌ ಇಂಡಿಯಾ ವಿರುದ್ಧ ಆಡಿದ ಐದು ಪಂದ್ಯಗಳಲ್ಲಿ ಅವರು 31.60ರ ಸರಾಸರಿಯಲ್ಲಿ 158 ರನ್ ಗಳಿಸಿದ್ದಾರೆ.

Whats_app_banner