ಆತ ಅನ್ಯಗ್ರಹದಿಂದ ಬಂದಿರಬೇಕು; ಭಾರತದ ಆಟಗಾರನ ಫಿಟ್‌ನೆಸ್‌ಗೆ ವಾಸಿಂ ಅಕ್ರಮ್ ಬಹುಪರಾಕ್
ಕನ್ನಡ ಸುದ್ದಿ  /  ಕ್ರಿಕೆಟ್  /  ಆತ ಅನ್ಯಗ್ರಹದಿಂದ ಬಂದಿರಬೇಕು; ಭಾರತದ ಆಟಗಾರನ ಫಿಟ್‌ನೆಸ್‌ಗೆ ವಾಸಿಂ ಅಕ್ರಮ್ ಬಹುಪರಾಕ್

ಆತ ಅನ್ಯಗ್ರಹದಿಂದ ಬಂದಿರಬೇಕು; ಭಾರತದ ಆಟಗಾರನ ಫಿಟ್‌ನೆಸ್‌ಗೆ ವಾಸಿಂ ಅಕ್ರಮ್ ಬಹುಪರಾಕ್

Wasim Akram: ಬಾಂಗ್ಲಾದೇಶದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ ಆಟಗಾರನನ್ನು, ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಂ ಅಕ್ರಮ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಭಾರತದ ಆಟಗಾರನನ್ನು ಹಾಡಿ ಹೊಗಳಿದ ವಾಸಿಂ ಅಕ್ರಮ್
ಭಾರತದ ಆಟಗಾರನನ್ನು ಹಾಡಿ ಹೊಗಳಿದ ವಾಸಿಂ ಅಕ್ರಮ್

ಏಕದಿನ ವಿಶ್ವಕಪ್ 2023ರಲ್ಲಿ (ICC ODI World Cup 2023), ಭಾರತವು ಭಾನುವಾರ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸುತ್ತಿದೆ. ಕಳೆದ ಗುರುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಗಳಿಸಿದ ರೋಹಿತ್‌ ಪಡೆ, ಕಿವೀಸ್‌ ವಿರುದ್ಧವೂ ಅಬ್ಬರದಾಟವಾಡುವ ಉತ್ಸಾಹದಲ್ಲಿದೆ.

ಬಾಂಗ್ಲಾದೇಶ ವಿರುದ್ಧ ಭರ್ಜರಿ ಶತಕ ಸಿಡಿಸಿದ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಕಿವೀಸ್‌ ವಿರುದ್ಧವೂ ಅಬ್ಬರಿಸುವ ಸುಳಿವು ನೀಡಿದ್ದಾರೆ. ಭಾನುವಾರ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಗೆದ್ದರೆ, ಸತತ ಐದು ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗಸ್ಥಾನಕ್ಕೆ ಲಗ್ಗೆ ಹಾಕಲಿದೆ.

ಬಾಂಗ್ಲಾದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿದ ಮೂರನೇ ಕ್ರಮಾಂಕದ ಬ್ಯಾಟರ್‌ ವಿರಾಟ್ ಕೊಹ್ಲಿ ಅವರನ್ನು, ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಂ ಅಕ್ರಮ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿದ ವಿರಾಟ್‌, ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಒಂದು ಹಂತದಲ್ಲಿ ವಿರಾಟ್ ಕೊಹ್ಲಿ ಅವರ 78ನೇ ಅಂತಾರಾಷ್ಟ್ರೀಯ ಶತಕಕ್ಕೆ 27 ರನ್‌ಗಳ ಅಗತ್ಯವಿತ್ತು. ಅತ್ತ ಬಾಂಗ್ಲಾದೇಶದ ವಿರುದ್ಧ 257 ರನ್‌ಗಳ ಗುರಿ ತಲುಪಲು ಭಾರತಕ್ಕೆ 28 ರನ್‌ಗಳು ಬೇಕಿತ್ತು. ಈ ವೇಳೆ ವಿರಾಟ್‌ ಜೊತೆಗೆ ಮೈದಾನದಲ್ಲಿದ್ದ ಕೆಎಲ್‌ ರಾಹುಲ್, ಕೊಹ್ಲಿಗೆ ಶತಕ ಸಿಡಿಸಿಲು ಬೇಕಾದಂತೆ ಸ್ಟ್ರೈಕ್‌ ಕೊಟ್ಟರು. ಸಿಂಗಲ್‌ಗಳನ್ನು ನಿರಾಕರಿಸಿ ವಿರಾಟ್‌ ಕೊಹ್ಲಿಗೆ ಸ್ಟ್ರೈಕ್‌ ಸಿಗುವಂತೆ ನೋಡಿಕೊಂಡರು. ಅತ್ತ ಓವರ್‌ಗಳ ಕೊನೆಯ ಎಸೆತಗಳಲ್ಲಿ ರನ್‌ ಕದಿಯುವಲ್ಲೂ ಸಫಲರಾದರು. ಸ್ಪಿನ್ನರ್ ನಸುಮ್ ಅಹ್ಮದ್ ಎಸೆತದಲ್ಲಿ ಅಂತಿಮವಾಗಿ ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ತಮ್ಮ ಶತಕದೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯದಲ್ಲಿ ಕೊಹ್ಲಿ 97 ಎಸೆತಗಳಲ್ಲಿ ಎದುರಿಸಿ 6 ಬೌಂಡರಿ ಮತ್ತು 4 ಸ್ಫೋಟಕ ಸಿಕ್ಸರ್‌ಗಳ ನೆರವಿನಿಂದ ಅಜೇಯ 103 ರನ್ ಗಳಿಸಿದರು. ಇನ್ನೂ 8.3 ಓವರ್‌ಗಳು ಬಾಕಿ ಇರುವಂತೆಯೇ ಪಂದ್ಯದಲ್ಲಿ ಭಾರತ ಜಯಶಾಲಿಯಾಯ್ತು.

ಅನ್ಯಗ್ರಹದಿಂದ ಬಂದಿರಬೇಕು

2015ರ ಏಕದಿನ ವಿಶ್ವಕಪ್‌ ಬಳಿಕ, ವಿಶ್ವಕಪ್‌ನಲ್ಲಿ ಕೊಹ್ಲಿ ಸಿಡಿಸಿದ ಮೊದಲ ಶತಕ ಇದಾಗಿದೆ. ಅವರ ಅದ್ಭುತ ಇನ್ನಿಂಗ್ಸ್‌ಗೆ ಅನೇಕರು ದಿಗ್ಗಜರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಅವರು ಟೀಮ್ ಇಂಡಿಯಾ ಸ್ಟಾರ್ ಅನ್ನುಹಾಡಿ ಹೊಗಳಿದ್ದಾರೆ. ಕಿಂಗ್‌ ಕೊಹ್ಲಿಯ ಆಟ ಹಾಗೂ ಅದ್ಭುತ ಫಿಟ್‌ನೆಸ್‌ಗೆ ಫಿದಾ ಆಗಿರುವ ಅಕ್ರಮ್‌, ಅವರನ್ನು ಅನ್ಯ ಗ್ರಹದಿಂದ ಬಂದ ವ್ಯಕ್ತಿ ಎಂದು ಹೇಳಿದ್ದಾರೆ.

“ಅವರು ಮೊದಲ 50 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿದರು. ನಂತರ ಅದೇ ಪಂದ್ಯದ 90ನೇ ಓವರ್‌ನಲ್ಲಿ ಅವರು ಮೇಲಿಂದ ಮೇಲೆ ಎರಡು ಬಾರಿ ಎರಡು ರನ್‌ ಓಡಿದರು. ಅದು ಅವರ ಫಿಟ್‌ನೆಸ್ ಏನೆಂಬುದನ್ನು ತೋರಿಸುತ್ತದೆ. ಆತ ಬೇರೆ ಗ್ರಹದಿಂದ ಬಂದಿರುವಂತೆ ಕಾಣುತ್ತದೆ” ಎಂದು ಅಕ್ರಮ್ ಪಾಕಿಸ್ತಾನದ ಚಾನೆಲ್ ಎ ಸ್ಪೋರ್ಟ್ಸ್‌ನ ‌'ದಿ ಪೆವಿಲಿಯನ್' ಶೋನಲ್ಲಿ ಹೇಳಿದ್ದಾರೆ.

ಟೀಕಾಕಾರರ ಬಾಯಿ ಮುಚ್ಚಿಸಿದ ವಾಸಿಂ ಅಕ್ರಮ್

ಕೊಹ್ಲಿ ಆಟವನ್ನು ಟೀಕಿಸುವವರಿಗೆ ಅಕ್ರಮ್‌ ಪ್ರತಿಕ್ರಿಯಿಸಿದ್ದಾರೆ. ಶತಕವನ್ನು ಪೂರ್ಣಗೊಳಿಸಿ ವೈಯಕ್ತಿಕ ಮೈಲಿಗಲ್ಲುಗಳತ್ತ ಗಮನ ಹರಿಸಿದ್ದಕ್ಕೆ ಕೊಹ್ಲಿಯನ್ನು 'ಸ್ವಾರ್ಥಿ' ಎಂದು ಕರೆವರಿಗೆ ಅಕ್ರಮ್‌ ಖಡಕ್‌ ಉತ್ತರ ಕೊಟ್ಟಿದ್ದಾರೆ. “ಪಂದ್ಯದಲ್ಲಿ ಭಾರತ ತುಂಬಾ ಸುಲಭವಾಗಿ ಗೆಲ್ಲುತ್ತಿತ್ತು. ಶತಕ ಸಿಡಿಸುವ ಅವಕಾಶವಿದ್ದರೆ, ಸಿಡಿಸಲಿ ಬಿಡಿ. ಅವರು ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದರು,” ಎಂದು ಅಕ್ರಂ ಕೊಹ್ಲಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

Whats_app_banner