ವಿರಾಟ್ ಕೊಹ್ಲಿಯಿಂದ ಜೆರ್ಸಿ ಪಡೆದ ಬಾಬರ್ ಅಜಮ್ಗೆ ಹಿಗ್ಗಾಮುಗ್ಗಾ ಜಾಡಿಸಿದ ವಾಸೀಂ ಅಕ್ರಮ್
Wasim Akram slam Babar Azam: ಜೆರ್ಸಿ ಪಡೆದ ಘಟನೆಗೆ ಸಂಬಂಧಿಸಿ ಅತೃಪ್ತಿ ವ್ಯಕ್ತಪಡಿಸಿರುವ ವಾಸೀಂ ಅಕ್ರಮ್, ಬಾಬರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈದಾನದಲ್ಲಿ ಕೊಹ್ಲಿಯನ್ನು ಬಾಬರ್ ಭೇಟಿಯಾಗಿ ಜೆರ್ಸಿ ಪಡೆಯಬಾರದಿತ್ತು ಎಂದು ಹೇಳಿದ್ದಾರೆ.
Wasim Akram: ಭಾರತ ವಿರುದ್ಧ ಪಾಕಿಸ್ತಾನ 7 ವಿಕೆಟ್ಗಳ ಹೀನಾಯ ಸೋಲಿನ ನಂತರ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರಿಂದ ಆಟೋಗ್ರಾಫ್ ಪಡೆದ ಜೆರ್ಸಿ ಉಡುಗೊರೆಯಾಗಿ ಸ್ವೀಕರಿಸಿದ ನಾಯಕ ಬಾಬರ್ ಅಜಮ್ (Babar Azam) ಅವರ ವಿರುದ್ಧ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ (Wasim Akram) ಕಿಡಿಕಾರಿದ್ದಾರೆ. ಜೆರ್ಸಿ ಉಡುಗೊರೆ ಪಡೆಯುವುದಿದ್ದರೆ ಡ್ರೆಸ್ಸಿಂಗ್ ರೂಮ್ಗೆ ಹೋಗಿ ಎಂದು ಅಕ್ರಮ್, ಬಾಬರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ರಣ ರೋಚಕ ಪಂದ್ಯದಲ್ಲಿ ಸೋಲಿನ ನಂತರ ಪಾಕ್ ತಂಡದ ನಾಯಕ ಬಾಬರ್ ಅಜಂ ಅವರು, ವಿರಾಟ್ ಕೊಹ್ಲಿ ಸಹಿ ಮಾಡಿದ ಭಾರತ ತಂಡದ ಜೆರ್ಸಿಯನ್ನು ಪಡೆದಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದಕ್ಕೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬಾಬರ್ ವಿರುದ್ಧ ಕಿಡಿಕಾರಿದ ಅಕ್ರಮ್
ಭಾರತ-ಪಾಕಿಸ್ತಾನ ದೇಶಗಳ ನಡುವೆ ಸಂಬಂಧ ಹದಗೆಟ್ಟಿದೆ. ಆದರೆ ಕ್ರೀಡೆಯಲ್ಲಿ ಉತ್ತಮ ಸ್ನೇಹ ಬಾಂಧವ್ಯಕ್ಕೆ ಜಗತ್ತಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆಯೂ ವಿರಾಟ್ ಕೊಹ್ಲಿ, ಪಾಕ್ ಆಟಗಾರರಿಗೆ ತಮ್ಮ ಜೆರ್ಸಿ ನೀಡಿದ್ದರು. ಆದರೆ, ಬಾಬರ್ ಜೆರ್ಸಿ ಪಡೆದಿದ್ದನ್ನು ಪಾಕ್ನ ಮಾಜಿ ಆಟಗಾರ ವಾಸಿಂ ಅಕ್ರಮ್ ಖಂಡಿಸಿದ್ದಾರೆ.
ಜೆರ್ಸಿ ಪಡೆದ ಘಟನೆಗೆ ಸಂಬಂಧಿಸಿ ಅತೃಪ್ತಿ ವ್ಯಕ್ತಪಡಿಸಿರುವ ಅಕ್ರಮ್, ಬಾಬರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈದಾನದಲ್ಲಿ ಕೊಹ್ಲಿಯನ್ನು ಬಾಬರ್ ಭೇಟಿಯಾಗಿ ಜೆರ್ಸಿ ಪಡೆಯಬಾರದಿತ್ತು. ಬಾಬರ್ ಅಜಂ ಜೆರ್ಸಿ ಪಡೆದು ದೊಡ್ಡ ತಪ್ಪು ಮಾಡಿದರು. ಸೋತಿರುವ ಕಾರಣ ಬಹಿರಂಗವಾಗಿ ಭೇಟಿಯಾಗುವ ಪರಿಸ್ಥಿತಿ ಇದಾಗಿರಲಿಲ್ಲ ಎಂದರು.
‘ಇದು ಅಭಿಮಾನಿಗಳನ್ನು ಕೆರಳಿಸುತ್ತದೆ’
ವಿರಾಟ್ ಕೊಹ್ಲಿ ಅವರಿಂದ ಜೆರ್ಸಿ ಪಡೆದಿರುವ ಕುರಿತು ನನಗೇನು ಆಕ್ಷೇಪ ಇಲ್ಲ. ಆದರೆ, ಕ್ಯಾಮೆರಾಗಳ ಮುಂದೆ ಪಡೆಯುವ ಬದಲು ಡ್ರೆಸ್ಸಿಂಗ್ ರೂಮ್ನಲ್ಲಿ ಪಡೆದಿದ್ದರೆ ಉತ್ತಮವಾಗುತ್ತಿತ್ತು. ಹೀಗೆ ಸಾರ್ವಜನಿಕವಾಗಿ ಪಡೆದಿದ್ದು ತಪ್ಪು. ಅದರಲ್ಲೂ ಜೆರ್ಸಿ ಪಡೆದಿದ್ದು ಅವರ ಚಿಕ್ಕಪ್ಪನ ಮಗನಿಗಾಗಿ ಎಂದು ವಾಸೀಂ ಅಕ್ರಮ್ ಹೇಳಿದ್ದಾರೆ.
ಡ್ರೆಸ್ಸಿಂಗ್ ರೂಮ್ಗೆ ಹೋಗಿ ಪಡೆಯುವಂತೆ ಹೇಳಿದ್ದಕ್ಕೆ ಕಾರಣ ಇದೆ. ಅಭಿಮಾನಿಗಳಿಗೆ ಸೋಲಿನ ನೋವು ಕಾಡುತ್ತಿರುತ್ತದೆ. ಈ ವೇಳೆ ತಾಳ್ಮೆ ಕಳೆದುಕೊಂಡಿರುತ್ತಾರೆ. ಇಂತಹ ವೇಳೆ ಹೀಗೆ ಮಾಡಿದರೆ ಪಾಕ್ ಫ್ಯಾನ್ಸ್ ಇನ್ನಷ್ಟು ಕೆರಳುವಂತೆ ಮಾಡುತ್ತದೆ. ಬಾಬರ್ರ ಈ ನಡೆಗೆ ನನ್ನ ವಿರೋಧ ಕೂಡ ಇದೆ ಎಂದು ಗುಡುಗಿದ್ದಾರೆ.
ಪಂದ್ಯ ಮುಗಿದ ನಂತರ ಆಟಗಾರರ ಮಾತುಕತೆ
ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಸಹ ಮಾತುಕತೆ ನಡೆಸಿದರು. ಇದೇ ವೇಳೆ ಬಾಬರ್ ಜೊತೆ ವಿರಾಟ್ ಕೊಹ್ಲಿ ಸ್ನೇಹಯುತವಾಗಿ ಕೆಲ ಕಾಲ ಕಳೆದರು. ಈ ವೇಳೆ ಕೊಹ್ಲಿ ತಮ್ಮ ಜೆರ್ಸಿಗೆ ಆಟೋಗ್ರಾಫ್ ಹಾಕಿ ಉಡುಗೊರೆಯಾಗಿ ನೀಡಿದರು. ಇದು ನೆಟ್ಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸೋಲಿಗೆ ಕಾರಣ ತಿಳಿಸಿದ ಬಾಬರ್
ಪಂದ್ಯದ ನಂತರ ಮಾತನಾಡಿದ ಬಾಬರ್ ಸೋಲಿಗೆ ಕಾರಣ ಏನೆಂದು ವಿವರಿಸಿದ್ದಾರೆ. ಉತ್ತಮ ಆರಂಭ ಪಡೆದ ಬಳಿಕ ಭಾರತೀಯ ಬೌಲರ್ಗಳು ಹಿಡಿತ ಸಾಧಿಸಿದರು. ನಮ್ಮ ತಂಡದ ಬ್ಯಾಟಿಂಗ್ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿದರು. ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ. ಭಾರತ ತಂಡವು ಅದ್ಭುತ ಪ್ರದರ್ಶನ ನೀಡಿತು ಎಂದರು.
7 ವಿಕೆಟ್ಗಳ ಗೆಲುವು
ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ನಡೆಸಿತು. 42.5 ಓವರ್ಗಳಲ್ಲಿ 191 ರನ್ಗಳಿಗೆ ಸರ್ವಪತನ ಕಂಡಿತು. ಬಾಬರ್ 50, ರಿಜ್ವಾನ್ 49 ರನ್ ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಭಾರತ 30.3 ಓವರ್ಗಳಲ್ಲಿ 7 ವಿಕೆಟ್ಗಳ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ 86, ಶ್ರೇಯಸ್ ಅಯ್ಯರ್ ಅಜೇಯ 53 ರನ್ ಸಿಡಿಸಿ ಮಿಂಚಿದರು.