ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ; ವಾಸಿಂ ಜಾಫರ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ; ವಾಸಿಂ ಜಾಫರ್

ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ; ವಾಸಿಂ ಜಾಫರ್

ಟಿ20 ವಿಶ್ವಕಪ್ 2024ರ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿದ್ದಾರೆ.

ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ
ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ (PTI)

ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಮಾತ್ರವೇ ಟಿ20 ಸ್ವರೂಪದಲ್ಲಿ 4,000 ರನ್ ಗಡಿ ದಾಟಿದ್ದಾರೆ. ಇವರು ಚುಟುಕು ಸ್ವರೂಪದ ಪಂದ್ಯಗಳಲ್ಲಿ ಭಾರತದ ಸಾರ್ವಕಾಲಿಕ ಗರಿಷ್ಠ ರನ್ ಗಳಿಸಿದ ಆಟಗಾರರು. ಸದ್ಯ ಭಾರತ ತಂಡದಲ್ಲಿ ಅನುಭವಿ ಆಟಗಾರರಾಗಿರುವ ಕೊಹ್ಲಿ ಮತ್ತು ರೋಹಿತ್ ತಮ್ಮ ವೃತ್ತಿಬದುಕಿನ ಕೊನೆಯ ಹಂತದಲ್ಲಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಬಹುತೇಕ ಈ ಇಬ್ಬರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಳೆದ ವರ್ಷ ಭಾರತದಲ್ಲಿ ನಡೆದ ಮಹತ್ವದ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಗೆಲ್ಲಲು ವಿಫಲವಾಗಿದ್ದ ಭಾರತ, ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ಕನಸು ಹೊತ್ತಿದೆ. ಆ ಬಳಿಕ ಈ ಇಬ್ಬರು ದಿಗ್ಗಜರು ತಮ್ಮ ಕ್ರಿಕೆಟ್‌ ಭವಿಷ್ಯದ ಕುರಿತು ಮಹತ್ವದ ನಿರ್ಧಾರಕ್ಕೆ ಬರಬಹುದು.

ಧೋನಿ ನಂತರ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಐಕಾನ್‌ಗಳಾಗಿರುವ ಕೊಹ್ಲಿ ಮತ್ತು ರೋಹಿತ್ ಐಸಿಸಿ ಟ್ರೋಫಿಯನ್ನು ಜಂಟಿಯಾಗಿ ಗೆದ್ದಿಲ್ಲ. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ವಿಶ್ವಕಪ್ ಯಶಸ್ಸಿನಲ್ಲಿ ಪಾಲ್ಗೊಂಡಿದ್ದರು. ಅತ್ತ 2007ರ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಧೋನಿ ಬಳಗದ ಭಾಗವಾಗಿದ್ದ ರೋಹಿತ್, ಇದೀಗ ದಶಕಗಳ ಬಳಿಕ 2024ರ ಆವೃತ್ತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿ ದೇಶಕ್ಕೆ ಎರಡನೇ ವಿಶ್ವಕಪ್‌ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಟಿ20 ವಿಶ್ವಕಪ್ ನಂತರ ಕೊಹ್ಲಿ ಮತ್ತು ರೋಹಿತ್ ಟಿ20ಯಿಂದ ನಿವೃತ್ತಿ

ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ಸೋಮವಾರ ಪ್ರಬಲ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಸೆಣಸುತ್ತಿದೆ. ಇಂದು ಗೆದ್ದರೆ ಭಾರತವು ಸೆಮಿಫೈನಲ್‌ಗೆ ಪ್ರವೇಶಿಸಲಿದೆ. ಈ ನಡುವೆ ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಅವರು ಬ್ಯಾಟಿಂಗ್ ದಿಗ್ಗಜರಾದ ಕೊಹ್ಲಿ ಮತ್ತು ರೋಹಿತ್ ಅವರ ಟಿ20 ಭವಿಷ್ಯದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದಾರೆ.

“ಟಿ20 ವಿಶ್ವಕಪ್ ನಂತರ ವಿರಾಟ್ ಮತ್ತು ರೋಹಿತ್ ಇಬ್ಬರೂ ಟಿ20 ಸ್ವರೂಪದಿಂದ ನಿವೃತ್ತರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಂತಿಮವಾಗಿ ಇದು ಅವರಿಗೆ ಬಿಟ್ಟ ನಿರ್ಧಾರ. ಅವರು ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸುತ್ತಾರೆ. ಆದರೆ ಟಿ20 ವಿಶ್ವಕಪ್‌ ಬಳಿಕ ಚುಟುಕು ಸ್ವರೂಪದ ಪಂದ್ಯಗಳಲ್ಲಿ ನಾವು ಅವರನ್ನು ಕೊನೆಯ ಬಾರಿಗೆ ನೋಡುತ್ತಿದ್ದೇವೆ ಎಂದು ನನಗನಿಸುತ್ತಿದೆ” ಎಂದು ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ ವೇಳೆಗೆ ಕೊಹ್ಲಿಗೆ 38 ವರ್ಷ ಮತ್ತು ರೋಹಿತ್‌ ಶರ್ಮಾಗೆ 40 ವರ್ಷ ತುಂಬಲಿದೆ. ಮುಂದಿನ ಟಿ20 ವಿಶ್ವಕಪ್ 2026ರಲ್ಲಿ ನಡೆಯಲಿದ್ದು, ಭಾರತ ಮತ್ತು ಶ್ರೀಲಂಕಾ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಆದರೆ, ಇನ್ನೂ ಒಂದು ವರ್ಷ ಚುಟುಕು ಸ್ವರೂಪದಲ್ಲಿ ಉಭಯ ಆಟಗಾರರು ಆಡುವುದು ಅನುಮಾನ. ಆದರೆ, ತವರಿನಲ್ಲಿ ಟೂರ್ನಿ ನಡೆಯುತ್ತಿರುವ ಕಾರಣದಿಂದ ಆಡಿದರೂ ಅಚ್ಚರಿಯಿಲ್ಲ.

Whats_app_banner