ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಪಡೆದ ಯಶಸ್ವಿ ಜೈಸ್ವಾಲ್, ಬೆರಗಾದ ಪ್ರೇಕ್ಷಕರು; ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಪಡೆದ ಯಶಸ್ವಿ ಜೈಸ್ವಾಲ್, ಬೆರಗಾದ ಪ್ರೇಕ್ಷಕರು; ವಿಡಿಯೋ ವೈರಲ್

ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಪಡೆದ ಯಶಸ್ವಿ ಜೈಸ್ವಾಲ್, ಬೆರಗಾದ ಪ್ರೇಕ್ಷಕರು; ವಿಡಿಯೋ ವೈರಲ್

Yashasvi Jaiswal: ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.​ ಅವರ ಕ್ಯಾಚ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಪಡೆದ ಯಶಸ್ವಿ ಜೈಸ್ವಾಲ್, ಬೆರಗಾದ ಪ್ರೇಕ್ಷಕರು; ವಿಡಿಯೋ ವೈರಲ್
ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಪಡೆದ ಯಶಸ್ವಿ ಜೈಸ್ವಾಲ್, ಬೆರಗಾದ ಪ್ರೇಕ್ಷಕರು; ವಿಡಿಯೋ ವೈರಲ್

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (India vs England 1st ODI) ಸ್ಟನ್ನಿಂಗ್ ಕ್ಯಾಚ್ ಹಿಡಿದ ಭಾರತದ ಯಶಸ್ವಿ ಜೈಸ್ವಾಲ್ (Yashasvi Jaiswal) ಎಲ್ಲರ ಗಮನ ಸೆಳೆದಿದ್ದಾರೆ. ತನ್ನ ಪದಾರ್ಪಣೆ ಪಂದ್ಯದಲ್ಲೇ ಚಿರತೆಯಂತೆ ಹಾರಿದ ಜೈಸ್ವಾಲ್, ಅತ್ಯುದ್ಬುತ ಕ್ಯಾಚ್ ಹಿಡಿದು ಭಾರತಕ್ಕೆ ಮುನ್ನಡೆ ತಂದುಕೊಟ್ಟು, ಇಂಗ್ಲೆಂಡ್​ ಆಘಾತ ಎದುರಿಸಲು ಕಾರಣರಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್, ಅದ್ಭುತ ಆರಂಭ ಪಡೆಯಿತು. ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಭಾರತೀಯ ಬೌಲರ್​​ಗಳಿಗೆ ಬೆಂಡೆತ್ತಿದರು. ಪರಿಣಾಮ ಮೊದಲ ವಿಕೆಟ್​ಗೆ 8.5 ಓವರ್​ಗಳಲ್ಲೇ 75 ರನ್​ ಹರಿದು ಬಂತು. 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 43 ರನ್ ​ಗಳಿಸಿದ್ದ ಸಾಲ್ಟ್​ ರನೌಟ್ ಆಗಿ ಹೊರನಡೆದರು.

ಸಾಲ್ಟ್ ಔಟಾದ ಮರು ಓವರ್​​ನಲ್ಲೇ 29 ಎಸೆತಗಳಲ್ಲಿ 6 ಬೌಂಡರಿ ಸಹಿತ 32 ರನ್ ಸಿಡಿಸಿದ್ದ ಬೆನ್ ಡಕೆಟ್ ಕೂಡ ನಿರ್ಗಮಿಸಿದರು. ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಒಂದೇ ಸಮನೆ ಏರಿಸುತ್ತಿದ್ದ ಡಕೆಟ್ ಅವರು ಪದಾರ್ಣೆಗೈದ ಹರ್ಷಿತ್ ರಾಣಾ ಬೌಲಿಂಗ್​ನಲ್ಲಿ, ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್​ಗೆ ಕ್ಯಾಚ್ ಕೊಟ್ಟರು. ಇದು ಅಂತಿಂಥ ಕ್ಯಾಚ್ ಅಲ್ಲ, ತುಂಬಾ ಕಷ್ಟಕರವಾದ ಕ್ಯಾಚ್ ಆಗಿತ್ತು.

ಹಿಂದೆ ಓಡಿ, ಗಾಳಿಯಲ್ಲಿ ಜಿಗಿದು ಕ್ಯಾಚ್

ಆರಂಭದಲ್ಲಿ ದಂಡಿಸಿಕೊಂಡಿದ್ದ ರಾಣಾ, 10ನೇ ಓವರ್​​ನಲ್ಲಿ ಪುನರಾಗಮನ ಮಾಡಿದರು. ಒಂದೇ ಓವರ್​ನಲ್ಲಿ ಎರಡು ವಿಕೆಟ್ ಉರುಳಿಸಿ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದರು. ಈ ಓವರ್​​ನ 3ನೇ ಎಸೆತದಲ್ಲಿ ಡಕೆಟ್ ಔಟಾದರೆ, 5ನೇ ಎಸೆತದಲ್ಲಿ ಹ್ಯಾರಿ ಬ್ರೂಕ್​ ಅವರನ್ನು ಡಕೌಟ್​ ಮಾಡಿ ಪೆವಿಲಿಯನ್​ಗೆ ಕಳುಹಿಸಿದರು. ಲಯ ಕಂಡುಕೊಂಡ ರಾಣಾ ಎಸೆದ ಶಾರ್ಟ್​ ಬಾಲನ್ನು ಡಕೆಟ್ ಅವರು ಡೀಪ್​-ಮಿಡ್ ವಿಕೆಟ್​ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದ್ರು. ಆದರೆ ಟಾಪ್ ಎಡ್ಜ್​ ಆಯಿತು. ಪರಿಣಾಮ ಗಾಳಿಯಲ್ಲಿ ಎತ್ತರಕ್ಕೆ ಹಾರಿತು.

ಆಗ ಮಿಡ್-ವಿಕೆಟ್ ಸ್ಥಾನದಲ್ಲಿದ್ದ ಜೈಸ್ವಾಲ್ ಬಹಳ ದೂರ ಹಿಂದಕ್ಕೆ ಓಡಿ, ಚೆಂಡಿನ ಮೇಲೆ ಕಣ್ಣು ನೆಟ್ಟು ಗಾಳಿಯಲ್ಲಿ ಜಿಗಿದು ಅತ್ಯುತ್ತಮ ಕ್ಯಾಚ್ ಪಡೆದರು. ಪೂರ್ಣ ವೇಗದಲ್ಲಿ ಸಮತೋಲನ ಕಾಯ್ದುಕೊಂಡು ಡೈವ್ ಮಾಡಿ ಕ್ಯಾಚ್ ಅನ್ನು ಸುರಕ್ಷಿತವಾಗಿ ತನ್ನ ಕೈಗಳಲ್ಲಿ ಬಂಧಿಸಿದರು. ಅವರ ಚಮತ್ಕಾರಿಕ ಪ್ರಯತ್ನವು ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು. ಈ ಕ್ಯಾಚ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೈಸ್ವಾಲ್ ಅದ್ಭುತ ಫೀಲ್ಡಿಂಗ್​ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಅದ್ಭುತ ಕ್ಯಾಚ್ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ತಜ್ಞರು ಜೈಸ್ವಾಲ್ ಅವರ ಮೈದಾನದಲ್ಲಿನ ಚುರುಕುತನ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಅವರ ಅಸಾಧಾರಣ ಫೀಲ್ಡಿಂಗ್ ಪ್ರಯತ್ನದಿಂದ, ಜೈಸ್ವಾಲ್ ಈಗಾಗಲೇ ತಾವು ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಮಾತ್ರವಲ್ಲ, ಮೈದಾನದಲ್ಲಿ ಅಮೂಲ್ಯವಾದ ಆಸ್ತಿ ಎಂದು ಸಾಬೀತುಪಡಿಸಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ XI

ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.

ಭಾರತ ಪ್ಲೇಯಿಂಗ್ XI

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.

Whats_app_banner