ಫೈನಲ್‌ ಪಂದ್ಯಕ್ಕಾಗಿ ಸಿದ್ಧತೆ ನಡೆಸಿದ್ದೆವು, ಆದರೆ...; ಅಂಡರ್‌ 19 ವಿಶ್ವಕಪ್ ಸೋಲಿನ ಬಳಿಕ ನಾಯಕ ಉದಯ್ ಸಹರಾನ್ ಮಾತು
ಕನ್ನಡ ಸುದ್ದಿ  /  ಕ್ರಿಕೆಟ್  /  ಫೈನಲ್‌ ಪಂದ್ಯಕ್ಕಾಗಿ ಸಿದ್ಧತೆ ನಡೆಸಿದ್ದೆವು, ಆದರೆ...; ಅಂಡರ್‌ 19 ವಿಶ್ವಕಪ್ ಸೋಲಿನ ಬಳಿಕ ನಾಯಕ ಉದಯ್ ಸಹರಾನ್ ಮಾತು

ಫೈನಲ್‌ ಪಂದ್ಯಕ್ಕಾಗಿ ಸಿದ್ಧತೆ ನಡೆಸಿದ್ದೆವು, ಆದರೆ...; ಅಂಡರ್‌ 19 ವಿಶ್ವಕಪ್ ಸೋಲಿನ ಬಳಿಕ ನಾಯಕ ಉದಯ್ ಸಹರಾನ್ ಮಾತು

Uday Saharan: ಅಂಡರ್‌ 19 ವಿಶ್ವಕಪ್ ಟೂರ್ನಿಯುದ್ದಕ್ಕೂ ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಎಡವಿತು. ಟೀಮ್‌ ಇಂಡಿಯಾ ನಾಯಕ ಉದಯ್ ಸಹರಾನ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದರು. ಪಂದ್ಯದ ಬಳಿಕ ಬ್ಯಾಟಿಂಗ್‌ನಲ್ಲಿ ತಂಡದ ಪ್ರದರ್ಶನವನ್ನು ಅವರು ಹಾಡಿ ಹೊಗಳಿದರು.

Uday Saharan
Uday Saharan (AP)

ಆಸ್ಟ್ರೇಲಿಯಾ ವಿರುದ್ಧದ ಅಂಡರ್‌ 19 ವಿಶ್ವಕಪ್ ಫೈನಲ್‌ (India U19 vs Australia U19 Final) ಪಂದ್ಯದಲ್ಲಿ ಭಾರತ ಕಿರಿಯರ ತಂಡವು 79 ರನ್‌ಗಳ ಹೃದಯವಿದ್ರಾವಕ ಸೋಲು ಅನುಭವಿಸಿತು. ಹಿರಿಯರ ಏಕದಿನ ವಿಶ್ವಕಪ್‌ ಸೋಲನ್ನು ಮರೆಸುವಲ್ಲಿ ಉದಯ್‌ ಸಹರಾನ್‌ ಬಳಗವೂ (ICC Under 19 World Cup 2024) ವಿಫಲವಾಯ್ತು. ಪಂದ್ಯದ ಬಳಿಕ ಸೋಲಿನ ಕುರಿತು ಮಾತನಾಡಿದ ಭಾರತ ಯುವ ತಂಡದ ನಾಯಕ ಉದಯ್‌ ಸಹರಾನ್‌ (Uday Saharan), ಬ್ಯಾಟರ್‌ಗಳು ಸಮರ್ಥವಾಗಿ ಬ್ಯಾಟ್‌ ಬೀಸುವಲ್ಲಿ ಎಡವಿದರು. ದುಡುಕಿನ ಹೊಡೆತಗಳನ್ನು ಆಡಿದ್ದಕ್ಕಾಗಿ ತಕ್ಕ ಬೆಲೆ ತೆರಬೇಕಾಯ್ತು ಎಂದು ನಾಯಕ ಒಪ್ಪಿಕೊಂಡಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 253 ರನ್‌ ಗಳಿಸಿತು. ಗೆಲುವಿಗೆ 254 ರನ್ ಗುರಿ ಬೆನ್ನಟ್ಟಿದ ಭಾರತವು, 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲೌಟ್ ಆಯ್ತು. ತಂಡದ ಪರ ಆರಂಭಿಕ ಆಟಗಾರ ಆದರ್ಶ್ ಸಿಂಗ್ (47) ಮತ್ತು 8ನೇ ಕ್ರಮಾಂಕದ ಮುರುಗನ್ ಅಭಿಷೇಕ್ (42) ಮಾತ್ರವೇ ಕೆಲಕಾಲ ಗೆಲುವಿಗಾಗಿ ಹೋರಾಡಿದರು.

ಯೋಜನೆ ಕಾರ್ಯಗತಗೊಳಿಸುವಲ್ಲಿ ಎಡವಿದೆವು

"ನಾವು ಕೆಲವು ಹೊಡೆತಗಳನ್ನು ಆಡುವಲ್ಲಿ ದುಡುಕಿದೆವು. ಕ್ರೀಸ್‌ಕಚ್ಚಿ ಹೆಚ್ಚು ಹೊತ್ತು ಆಡಲು ಸಾಧ್ಯವಾಗಲಿಲ್ಲ. ನಾವು ಪಂದ್ಯಕ್ಕಾಗಿ ತಯಾರಿ ನಡೆಸಿದ್ದೆವು. ಆದರೆ ಕಾರ್ಯಗತಗೊಳಿಸುವಲ್ಲಿ ವಿಫಲರಾದೆವು" ಎಂದು ಸಹರಾನ್ ಪಂದ್ಯದ ಬಳಿಕ ಹೇಳಿದರು.

ಇದನ್ನೂ ಓದಿ | ಅಂಡರ್-19 ವಿಶ್ವಕಪ್ ಚಾಂಪಿಯನ್ ಆಸೀಸ್​ಗೆೆ ದೊರೆತ ಬಹುಮಾನವೆಷ್ಟು; ರನ್ನರ್​ಅಪ್ ಭಾರತಕ್ಕೆ ಸಿಕ್ಕಿದ್ದೆಷ್ಟು?

ಟೂರ್ನಿಯುದ್ದಕ್ಕೂ ಭಾರತ ಅಜೇಯವಾಗಿ ಮುನ್ನಡೆದು, ಫೈನಲ್‌ ಪಂದ್ಯದಲ್ಲಿ ಮಾತ್ರ ಎಡವಿತು. ಆದರೂ, ನಾಯಕ ಸಹಾರನ್ ಅವರು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದರು. ಬ್ಯಾಟಿಂಗ್‌ನಲ್ಲಿ ತಂಡದ ಪ್ರದರ್ಶನವನ್ನು ಅವರು ಹಾಡಿ ಹೊಗಳಿದರು. “ಪಂದ್ಯಾವಳಿಯುದ್ದಕ್ಕೂ ಉತ್ತಮವಾಗಿ ಆಡಿದೆವು. ತಂಡದ ಹುಡುಗರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರೆಲ್ಲರೂ ಚೆನ್ನಾಗಿ ಆಡಿದ್ದಾರೆ. ಎಲ್ಲರೂ ಆರಂಭದಿಂದಲೂ ಉತ್ತಮ ಹೋರಾಟದ ಮನೋಭಾವ ತೋರಿಸಿದರು” ಎಂದು ಹೇಳಿದರು.

“ಈ ಪಂದ್ಯಾವಳಿಯಿಂದ ಸಾಕಷ್ಟು ಕಲಿತಿದ್ದೇವೆ. ಸಹಾಯಕ ಸಿಬ್ಬಂದಿ ಮಾತ್ರವಲ್ಲದೆ ಆಟದ ಸಮಯದಲ್ಲಿಯೂ ಸಹ ಬಹಳಷ್ಟು ಕಲಿತೆವು. ಕಲಿಕೆ ನಿರಂತರ. ಅದರೊಂದಿಗೆ ಇನ್ನಷ್ಟು ಉತ್ತಮಗೊಳ್ಳಲು ಪ್ರಯತ್ನಿಸುತ್ತೇವೆ,” ಎಂದು ಸಹರಾನ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಕಿರಿಯರ ವಿಶ್ವಕಪ್​ ಫೈನಲ್‌​ನಲ್ಲೂ ಸೋಲು; 8 ತಿಂಗಳ ಅಂತರದಲ್ಲಿ ಆಸ್ಟ್ರೇಲಿಯಾ​ ವಿರುದ್ಧ 3 ಬಾರಿ ಫೈನಲ್ ಸೋತ ಭಾರತ

ಟೂರ್ನಿಯುದ್ದಕ್ಕೂ ಭಾರತ ಅಜೇಯವಾಗಿತ್ತು. ಆದರೆ, ಫೈನಲ್‌ ಪಂದ್ಯದಲ್ಲಿ ಸೋತಿತು. ಬಾಂಗ್ಲಾದೇಶ ವಿರುದ್ಧ 84 ರನ್‌ಗಳ ಸುಲಭ ಜಯದೊಂದಿಗೆ ಅಭಿಯಾನ ಆರಂಭಿಸಿದ ಭಾರತ, ಐರ್ಲೆಂಡ್ ವಿರುದ್ಧ 201 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಅಮೆರಿಕವನ್ನು ಕೂಡಾ 201 ರನ್ ಗಳಿಂದ ಸೋಲಿಸಿತು. ಸೂಪರ್ ಸಿಕ್ಸ್ ಹಂತದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಭರ್ಜರಿ 214 ರನ್‌ಗಳಿಂದ ಮಣಿಸಿದ ತಂಡವು, ಆ ಬಳಿಕ ನೇಪಾಳ ವಿರುದ್ಧ 132 ರನ್‌ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಸೆಮಿ ಕದನದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ ಅಂತರದಿಂದ ಗೆಲುವು ಸಾಧಿಸಿತು.

Whats_app_banner