ನಮ್ಮವರು ಶತಕವೇ ಗಳಿಸಲಿಲ್ಲ: ಸೋಲಿಗೆ ಭಾರತದ ಬ್ಯಾಟಿಂಗ್ ಪ್ರದರ್ಶನ ದೂಷಿಸಿದ ರಾಹುಲ್ ದ್ರಾವಿಡ್
ಕನ್ನಡ ಸುದ್ದಿ  /  ಕ್ರಿಕೆಟ್  /  ನಮ್ಮವರು ಶತಕವೇ ಗಳಿಸಲಿಲ್ಲ: ಸೋಲಿಗೆ ಭಾರತದ ಬ್ಯಾಟಿಂಗ್ ಪ್ರದರ್ಶನ ದೂಷಿಸಿದ ರಾಹುಲ್ ದ್ರಾವಿಡ್

ನಮ್ಮವರು ಶತಕವೇ ಗಳಿಸಲಿಲ್ಲ: ಸೋಲಿಗೆ ಭಾರತದ ಬ್ಯಾಟಿಂಗ್ ಪ್ರದರ್ಶನ ದೂಷಿಸಿದ ರಾಹುಲ್ ದ್ರಾವಿಡ್

Rahul Dravid: ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನವೇ ಸೋಲಿಗೆ ಕಾರಣ. ನಮ್ಮವರು ಶತಕ ಸಿಡಿಸಿದ್ದರೆ ಪಂದ್ಯ ಗೆಲ್ಲುತ್ತಿತ್ತು ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್.
ರಾಹುಲ್ ದ್ರಾವಿಡ್.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ (India vs England 1st Test) ಅತಿ ದೊಡ್ಡ ಆಘಾತಕಾರಿ ಸೋಲನ್ನು ಅನುಭವಿಸಿತು. ಪ್ರವಾಸಿ ತಂಡದ ಎದುರು 28 ರನ್​ಗಳಿಂದ ಸೋತ ಭಾರತ ತಂಡ, ಐದು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಆ ಮೂಲಕ ಮುಖಭಂಗಕ್ಕೆ ಒಳಗಾಗಿದೆ.

ಎರಡನೇ ದಿನದಾಟದ ಅಂತ್ಯದ ನಂತರ ಆತಿಥೇಯ ಭಾರತ 191 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ್ದ ಕಾರಣ ಆರಾಮದಾಯಕ ಗೆಲುವು ದಾಖಲಿಸುತ್ತದೆ ಎಂದು ಭಾವಿಸಲಾಗಿತ್ತು. ಆದಾಗ್ಯೂ, ರೋಹಿತ್ ಶರ್ಮಾ ನೇತೃತ್ವದ ತಂಡವು ತವರಿನಲ್ಲಿ ಮೊದಲ ಬಾರಿಗೆ ಮತ್ತು ಟೆಸ್ಟ್​ನಲ್ಲಿ ಮೂರನೇ ಬಾರಿಗೆ 100ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದ ನಂತರ ಸೋಲನ್ನು ಅನುಭವಿಸಿತು.

ಓಲಿ ಪೋಪ್ ಅವರ 196 ರನ್‌ಗಳ ಸಂವೇದನಾಶೀಲ ಇನ್ನಿಂಗ್ಸ್​ ನಂತರ ಸ್ಕೋರ್ ಬೋರ್ಡ್‌ನಲ್ಲಿ ಇಂಗ್ಲೆಂಡ್​​ 420 ರನ್‌ಗಳ ಮೊತ್ತ ಕಲೆಹಾಕಿತ್ತು. ಅಲ್ಲದೆ ಭಾರತಕ್ಕೆ 231 ರನ್​​​ಗಳ ಗುರಿ ನೀಡಿತು. ಭಾರತದ ಬೌಲರ್‌ಗಳು 2ನೇ ಇನ್ನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಂತರ 230 ರನ್ ಚೇಸ್‌ನಲ್ಲೂ ಭಾರತ ಕುಸಿಯಿತು. 28 ರನ್‌ಗಳಿಂದ ಘೋರ ಪರಾಭವ ಅನುಭವಿಸಿತು. ರೋಹಿತ್ 39 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದರು.

ಬ್ಯಾಟಿಂಗ್ ಅನ್ನು ದೂಷಿಸಿದ ರಾಹುಲ್ ದ್ರಾವಿಡ್

2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನವು ವ್ಯಾಪಕ ಟೀಕೆಗೆ ಒಳಗಾಗಿದ್ದರೆ, ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಪ್ರದರ್ಶನವೇ ಸೋಲಿಗೆ ಕಾರಣ ಎಂದಿದ್ದಾರೆ. 436 ರನ್‌ಗಳ ಬೃಹತ್ ಸ್ಕೋರ್‌ ಹೊರತಾಗಿಯೂ, ಭಾರತವು 70 ರನ್‌ಗಳನ್ನು ಹೆಚ್ಚು ಗಳಿಸಬಹುದಿತ್ತು. ಯಾವುದೇ ಆಟಗಾರ ದೊಡ್ಡ ಶತಕ ಗಳಿಸಲಿಲ್ಲ ಎಂದು ದೂಷಿಸಿದ್ದಾರೆ.

ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಸ್ಕೋರ್​​ ಬೋರ್ಡ್‌ನಲ್ಲಿ ಬಹುಶಃ ಇನ್ನೂ 70 ರನ್‌ಗಳನ್ನು ಹೆಚ್ಚಾಗಿ ಕಲೆ ಹಾಕುವ ಅವಕಾಶ ಇತ್ತು ಎಂದು ನಾನು ಭಾವಿಸುತ್ತೇನೆ. ಎರಡನೇ ದಿನದಂದು ಬ್ಯಾಟಿಂಗ್ ಮಾಡಲು ಪರಿಸ್ಥಿತಿಗಳು ಉತ್ತಮವಾಗಿದ್ದವು. ಉತ್ತಮ ಆರಂಭ ಕೂಡ ಪಡೆದೆವು. ಆದರೆ ನಾವು ಇದರ ನಿಜವಾಗಿಯೂ ಲಾಭ ಗಳಿಸಲಿಲ್ಲ. ಸಿಕ್ಕ ಅವಕಾಶ ಕೈಚೆಲ್ಲಿ ಕೂತಿದ್ದೇವೆ ಎಂದು ದ್ರಾವಿಡ್​ ಹೇಳಿದ್ದಾರೆ.

ನಮ್ಮಲ್ಲಿ ಯಾರೊಬ್ಬರೂ ದೊಡ್ಡ ಮೊತ್ತವನ್ನು ಗಳಿಸಲಿಲ್ಲ. ನಿಜವಾಗಿಯೂ ದೊಡ್ಡ ಶತಕ ಬರಬೇಕಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಸೋಲಿಗೆ ಇದು ಪ್ರಮುಖ ಕಾರಣ. 2ನೇ ಇನ್ನಿಂಗ್ಸ್ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ ಎಂದು ದ್ರಾವಿಡ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಟಿಂಗ್​ನಿಂದ ಶತಕ ಬಂದಿಲ್ಲ ಎಂಬ ಅಂಶವನ್ನು ದ್ರಾವಿಡ್ ದೂಷಿಸಿದ್ದಾರೆ.

ಮೊದಲ ಟೆಸ್ಟ್​ ಪಂದ್ಯದ ಸಂಕ್ಷಿಪ್ತ ಸ್ಕೋರ್​ ವಿವರ

ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್: 246/10 (ಬೆನ್​ಸ್ಟೋಕ್ಸ್​ 70, ಅಶ್ವಿನ್ 68/3)

ಭಾರತ ಮೊದಲ ಇನ್ನಿಂಗ್ಸ್​: 436/10 (ರವೀಂದ್ರ ಜಡೇಜಾ 87, ಜೋ ರೂಟ್ 79/4)

ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್​: 420/10 (ಒಲ್ಲಿ ಪೋಪ್ 196, ಜಸ್ಪ್ರೀತ್ ಬುಮ್ರಾ 41/4)

ಭಾರತ ಎರಡನೇ ಇನ್ನಿಂಗ್ಸ್​: 202/10 (ರೋಹಿತ್​ 39, ಟಾಮ್​ ಹಾರ್ಟ್ಲೆ 33/7)

Whats_app_banner