T20 World Cup 2024: ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿಯಾ ವಿರುದ್ಧ ತಿಣುಕಾಡಿ ಗೆದ್ದ ವೆಸ್ಟ್ ಇಂಡೀಸ್
West Indies vs Papua New Guinea: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ 5 ವಿಕೆಟ್ಗಳ ಗೆಲುವು ಸಾಧಿಸಿತು.

ಟಿ20 ವಿಶ್ವಕಪ್ 2024 ಟೂರ್ನಿಯ ಎರಡನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿಯಾ ವಿರುದ್ಧ ಸಹ ಆತಿಥೇಯ ವೆಸ್ಟ್ ಇಂಡೀಸ್ ತಿಣುಕಾಡಿ ಗೆದ್ದು ಶುಭಾರಂಭ ಮಾಡಿದೆ. ಪಿಎನ್ಜಿ ನೀಡಿದ್ದ ಸಾಧಾರಣ ಮೊತ್ತ ಬೆನ್ನಟ್ಟಲು ಹರಸಾಹಸಪಟ್ಟ ಕೆರಿಬಿಯನ್ನರು 5 ವಿಕೆಟ್ಗಳಿಂದ ಜಯದ ನಗೆ ಬೀರಿತು. ಸಿ ಗುಂಪಿನಲ್ಲಿರುವ ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ದಿಟ್ಟ ಹೋರಾಟ ನಡೆಸಿದರೂ ಸೋಲಿನೊಂದಿಗೆ ಅಭಿಯಾನ ಆರಂಭಿಸಿತು.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ, ವಿಂಡೀಸ್ ಬೌಲರ್ಗಳ ದಾಳಿಗೆ ಬೆದರಿತು. ಸ್ಪಿನ್ ಪಿಚ್ನಲ್ಲಿ ಅನುಭವಿ ಬೌಲರ್ಗಳ ಎದುರು ಹೋರಾಟ ನಡೆಸಿತು. ಆದರೆ, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಆಂಡ್ರೆ ರಸೆಲ್ ಮತ್ತು ಅಲ್ಜಾರಿ ಜೋಸೆಫ್ ತಲಾ 2 ವಿಕೆಟ್ ಉರುಳಿಸಿದರು. ಈ ಸಾಧಾರಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, ರನ್ ಗಳಿಸಲು ತಿಣುಕಾಡಿತು. ತನ್ನ ತವರಿನ ಪಿಚ್ನಲ್ಲಿ ಕ್ರಿಕೆಟ್ ಶಿಶುಗಳ ಬೌಲಿಂಗ್ನಲ್ಲಿ ರನ್ ಗಳಿಸಲು ಪರದಾಡಿದರೂ 19ನೇ ಓವರ್ನಲ್ಲಿ 137 ರನ್ ಗಳಿಸಿ ಗೆಲುವಿನ ಗೆರೆ ದಾಟಿತು.
ತಿಣುಕಾಡಿದ ವೆಸ್ಟ್ ಇಂಡೀಸ್ ಬ್ಯಾಟರ್ಸ್
137 ರನ್ಗಳ ಸುಲಭ ಗುರಿ ಹಿಂಬಾಲಿಸಿದ ವಿಂಡೀಸ್, ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಜಾನ್ಸನ್ ಚಾರ್ಲ್ಸ್ ಡಕೌಟ್ ಆಗಿ ಹೊರ ನಡೆದರು. ಬಳಿಕ ಬ್ರೆಂಡನ್ ಕಿಂಗ್ ಮತ್ತು ನಿಕೋಲಸ್ ಪೂರನ್ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೆ, ಅರ್ಧಶತಕದ ಜೊತೆಯಾಟವಾಡಿದರು. ಆದರೆ ಪಿಎನ್ಜಿ ಬೌಲರ್ಗಳ ದಾಳಿಗೆ ತತ್ತರಿಸಿದ ಇವರು ಸಹ ಬಾಲ್ ಟು ಬಾಲ್ ರನ್ ಗಳಿಸಿದರು. ಪೂರನ್ 27 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರೆ, ಕಿಂಗ್ 29 ಎಸೆತಗಳಲ್ಲಿ 34 ರನ್ ಕಲೆ ಹಾಕಿ ಔಟಾದರು. ನಂತರ ರೋವ್ಮನ್ ಪೊವೆಲ್ 14 ಎಸೆತಗಳಲ್ಲಿ 14 ರನ್, ಶೆರ್ಫಾನೆ ರುದರ್ಫೋರ್ಡ್ 2 ರನ್ ಗಳಿಸಿದರು.
ಪಿಎನ್ಜಿ ಶಿಸ್ತಿನ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ ಸತತ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿತು. ಆದರೆ ಈ ಹಂತದಲ್ಲಿ ರಸ್ಟನ್ ಚೇಸ್ ಅತ್ಯುತ್ತವಾಗಿ ಚೇಸ್ ಮಾಡಿದರು. 27 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 42 ರನ್ ಬಾರಿಸಿದರು. 9 ಎಸೆತಗಳಲ್ಲಿ 15 ರನ್ ಗಳಿಸಿದ ಆಂಡ್ರೆ ರಸೆಲ್ ಅವರು ರಸ್ಟನ್ ಅವರಿಗೆ ಸಾಥ್ ನೀಡಿದರು. ಸುಲಭವಾಗಿ ಗೆಲ್ಲಬೇಕಿದ್ದ ಸ್ಕೋರನ್ನು 19 ಓವರ್ಗಳವರೆಗೂ ಕೊಂಡೊಯ್ದರು.
ಪಪುವಾ ನ್ಯೂಗಿನಿಯಾ ಹೋರಾಟ
ಮೊದಲು ಬ್ಯಾಟಿಂಗ್ ನಡೆಸಿದ ಪಪುವಾ ನ್ಯೂಗಿನಿಯಾ, ಅನುಭವಿ ವೆಸ್ಟ್ ಇಂಡೀಸ್ ಬೌಲರ್ಗಳ ದಿಟ್ಟ ಹೋರಾಟ ನಡೆಸಿತು. ಆರಂಭಿಕ ಆಘಾತಕ್ಕೆ ಒಳಗಾದ ಪಿಎನ್ಜಿಗೆ ಸೆಸೆ ಬೌ ಆಸರೆಯಾದರು. ಟೋನಿ ಉರಾ (2), ಲೆಗಾ ಸಿಯಾಕಾ (1) ತಂಡದ ಮೊತ್ತ 7 ರನ್ ಆಗುವಷ್ಟರಲ್ಲಿ ಔಟಾದರು. ಅಕೇಲ್ ಹೋಸೇನ್ ಮತ್ತು ರೊಮಾರಿಯೊ ಶೆಫರ್ಡ್ ಇಬ್ಬರನ್ನೂ ಔಟ್ ಮಾಡಿ ಕೆರಿಬಿಯನ್ನರಿಗೆ ಮೇಲುಗೈ ತಂದುಕೊಟ್ಟರು. ಬಳಿಕ 21 ರನ್ ಗಳಿಸಿದ ನಾಯಕ ಅಸ್ಸಾದ್ ವಾಲಾ ಚೇತರಿಕೆ ನೀಡಲು ಯತ್ನಿಸಿ ಔಟಾದರು.
ಹಿರಿ ಹಿರಿ (2), ಚಾರ್ಲ್ಸ್ ಅಮಿನಿ (12), ಚಾಡ್ ಸೋಪರ್ (10), ಅಲಿ ನಾವೊ (0) ಕೂಡ ಹೆಚ್ಚು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಆದರೆ ಒಂದೆಡೆ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೆಸೆ ಬೌ, ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 130ರ ಗಡಿ ದಾಟಿಸಲು ನೆರವಾದರು. 43 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 50 ರನ್ ಗಳಿಸಿದರು. ಕೊನೆಯಲ್ಲಿ ಕಿಪ್ಲಿನ್ ಡೋರಿಗಾ ಅಜೇಯ 27 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಆದರೆ ಪಿಎನ್ಜಿ ಕೇವಲ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು.
