1 ಓವರ್, 10 ಎಸೆತ, 22 ರನ್: ಐಪಿಎಲ್ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದ ಎಲ್‌ಎಸ್‌ಜಿ ವೇಗಿ ಶಮರ್ ಜೋಸೆಫ್
ಕನ್ನಡ ಸುದ್ದಿ  /  ಕ್ರಿಕೆಟ್  /  1 ಓವರ್, 10 ಎಸೆತ, 22 ರನ್: ಐಪಿಎಲ್ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದ ಎಲ್‌ಎಸ್‌ಜಿ ವೇಗಿ ಶಮರ್ ಜೋಸೆಫ್

1 ಓವರ್, 10 ಎಸೆತ, 22 ರನ್: ಐಪಿಎಲ್ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದ ಎಲ್‌ಎಸ್‌ಜಿ ವೇಗಿ ಶಮರ್ ಜೋಸೆಫ್

ವೆಸ್ಟ್‌ ಇಂಡೀಸ್‌ ವೇಗಿ ಶಮರ್ ಜೋಸೆಫ್, ಐಪಿಎಲ್ ವೃತ್ತಿಜೀವನದಲ್ಲಿ ಕಳಪೆ ಆರಂಭ ಪಡೆದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಪರ ಪದಾರ್ಪಣೆ ಮಾಡಿದ ಅವರು, 47 ರನ್ ಬಿಟ್ಟುಕೊಟ್ಟರು.‌ ಮೊದಲ ಓವರ್‌ನಲ್ಲೇ 22 ರನ್‌ ಸೋರಿಕೆ ಮಾಡಿ ದುಬಾರಿಯಾದರು.

ಐಪಿಎಲ್ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದ ಎಲ್‌ಎಸ್‌ಜಿ ವೇಗಿ ಶಮರ್ ಜೋಸೆಫ್
ಐಪಿಎಲ್ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದ ಎಲ್‌ಎಸ್‌ಜಿ ವೇಗಿ ಶಮರ್ ಜೋಸೆಫ್

ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡುವ ಹಲವು ಆಟಗಾರರು, ತಮ್ಮ ಮೊದಲ ಪಂದ್ಯದಲ್ಲೇ ದಾಖಲೆ ನಿರ್ಮಿಸುತ್ತಾರೆ. ಇನ್ನೂ ಕೆಲ ಆಟಗಾರರು ಚೊಚ್ಚಿಲ ಮ್ಯಾಚ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೊಳಗಾಗುತ್ತಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೇಗಿ ಶಾಮರ್ ಜೋಸೆಫ್, ಕೂಡಾ ಕಳಪೆ ಪ್ರದರ್ಶನ ನೀಡಿದ್ದಾರೆ. ಏಪ್ರಿಲ್ ‌14ರ ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ, ಮೊದಲ ಐಪಿಎಲ್‌ ಪಂದ್ಯವಾಡಿದ ಜೋಸೆಫ್ ನಿರೀಕ್ಷೆಯಂತೆ ಆಡಲಿಲ್ಲ. ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ತಮ್ಮ ಮೊದಲ ಓವರ್ ಎಸೆದ ಜೋಸೆಫ್, ತಲಾ ಎರಡು ನೋ ಬಾಲ್‌ ಹಾಗೂ ವೈಡ್‌ ಬಾಲ್‌ ಎಸೆದು ಒಟ್ಟು 22 ರನ್‌ಗಳನ್ನು ಬಿಟ್ಟುಕೊಟ್ಟರು.

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಚೇಸಿಂಗ್‌ ಮಾಡುತ್ತಿದ್ದ ವೇಳೆ ಜೋಸೆಫ್ ಮೊದಲ ಓವರ್‌ ಎಸೆದರು. ಓವರ್‌ನ ಮೊದಲ ಐದು ಎಸೆತಗಳು ಕ್ರಮಬದ್ಧವಾಗಿದ್ದವು. ಆದರೆ, ಕೊನೆಯ ಒಂದು ಎಸೆತ ಪೂರ್ಣಗೊಳಿಸುವಾಗ ಆದ ತಪ್ಪಿನಿಂದ ಹೆಚ್ಚುವರಿ ರನ್‌ಗಳ ಜೊತೆಗೆ ಒಟ್ಟು 10 ಚೆಂಡು ಬೌಲ್‌ ಮಾಡಬೇಕಾಯ್ತು.

ಇನ್ನಿಂಗ್ಸ್‌ನ ಆರಂಭಿಕ ಎಸೆತ ಡಾಟ್ ಆಗಿತ್ತು. ಎರಡನೇ ಎಸೆತದಲ್ಲಿ ಒಂದು ಲೆಗ್‌ ಬೈ ರನ್‌ ಬಂತು. 146 ಕಿ.ಮೀ ವೇಗದಲ್ಲಿ ಎಸೆದ ಮೂರನೇ ಎಸೆತವನ್ನು ಎದುರಿಸಿದ ಸುನಿಲ್ ನರೈನ್, ಕವರ್‌ಗಳ ಮೂಲಕ ಚೆಂಡನ್ನು ಬೌಂಡರಿಗಟ್ಟಿದರು. ನಾಲ್ಕನೇ ಎಸೆತದಲ್ಲಿ ಎರಡು ರನ್ ಬಂತು. ಐದನೇ ಎಸೆತದಲ್ಲಿ ಒಂದು ಬೈ ರನ್‌ ಬಂತು. ಆಗ ನಾಟಕೀಯ ಆಟ ಆರಂಭವಾಯ್ತು.

ಒಂದು ಎಸೆತದ ಬದಲು 5 ಎಸೆತ ಎಸೆದ ಶಮರ್

ಕೊನೆಯ ಎಸೆತದಲ್ಲಿ ಓವರ್‌ ಮುಗಿಯಬೇಕಿತ್ತು. ಆದರೆ ಜೋಸೆಫ್‌ ನೋ ಬಾಲ್ ಎಸೆದರು. ಫ್ರೀ ಹಿಟ್‌ ಎಸೆತ ವೈಡ್‌ ಆಯ್ತು. ಮುಂದಿನ ಎಸೆತಕ್ಕೆ ಮತ್ತೆ ಫ್ರೀ ಹಿಟ್‌ ಮುಂದುವರೆಯಿತು. ಆದರೆ, ಇದನ್ನು ಮತ್ತಷ್ಟು ವೈಡ್‌ ಎಸೆದ ಶಮರ್‌, ಕೆಕೆಆರ್‌ಗೆ ಐದು ರನ್‌ ಬಿಟ್ಟುಕೊಟ್ಟರು. ಏಕೆಂದರೆ, ಚೆಂಡು ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ ತಡೆಯನ್ನು ಮೀರಿ ಬೌಂಡರಿ ಲೈನ್‌ ಬಳಿ ತಲುಪಿತು.‌ ಆ ಬಳಿಕ ಕೊನೆಯ ಫ್ರೀ ಹಿಟ್ ಎಸೆತದಲ್ಲಿ ಫಿಲ್‌ ಸಾಲ್ಟ್‌ ನೇರವಾಗಿ ಸಿಕ್ಸ್‌ ಸಿಡಿಸಿದರು.

ಇದನ್ನೂ ಓದಿ | ಟಿ20 ವಿಶ್ವಕಪ್: ವಿಕೆಟ್ ಕೀಪರ್ ಸ್ಥಾನಕ್ಕೆ ಹಲವರ ಪೈಪೋಟಿ; ಸಂಜು ಸ್ಯಾಮ್ಸನ್‌ಗಿಂತ ರಿಷಭ್ ಪಂತ್ ನೆಚ್ಚಿನ ಆಟಗಾರ

ಅಷ್ಟರಲ್ಲೇ ಒಂದು ಓವರ್‌ನಲ್ಲಿ 22 ರನ್‌ ಹರಿದು ಬಂದಿತ್ತು. ಒಂದು ಓವರ್‌ ಪೂರ್ಣಗೊಳಿಸಲು ಶಮರ್‌ ಜೋಸೆಫ್‌ 10 ಎಸೆತಗಳನ್ನು ಎಸೆಯಬೇಕಾಯ್ತು. ಒಟ್ಟಾರೆಯಾಗಿ ಜೋಸೆಫ್ ತಮ್ಮ ನಾಲ್ಕು ಓವರ್‌ಗಳಲ್ಲಿ ಬರೋಬ್ಬರಿ 47 ರನ್‌ ಬಿಟ್ಟುಕೊಟ್ಟರು. ಅಲ್ಲದೆ ಯಾವುದೇ ವಿಕೆಟ್ ಪಡೆಯುವಲ್ಲಿ ವಿಫಲರಾದರು.

ಪಂದ್ಯದಲ್ಲಿ ಕೆಕೆಆರ್‌ ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ ಅಜೇಯ 89 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ನೈಟ್ ರೈಡರ್ಸ್ ತಂಡವು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿದುಕೊಂಡಿದೆ.

Whats_app_banner