ಟಿ20 ಪಂದ್ಯ: ಟಿಮ್ ಡೇವಿಡ್ ಸ್ಫೋಟಕ ಶತಕ; ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್ ಗಳ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ಪಂದ್ಯ: ಟಿಮ್ ಡೇವಿಡ್ ಸ್ಫೋಟಕ ಶತಕ; ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್ ಗಳ ಜಯ

ಟಿ20 ಪಂದ್ಯ: ಟಿಮ್ ಡೇವಿಡ್ ಸ್ಫೋಟಕ ಶತಕ; ವಿಂಡೀಸ್ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್ ಗಳ ಜಯ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಟಿಮ್ ಡೇವಿಡ್ ದಾಖಲೆಯ ಶತಕದ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ತಂದುಕೊಂಟ್ಟಿದ್ದಾರೆ. ಇದರೊಂದಿಗೆ ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಲು ನೆರವಾಗಿದ್ದಾರೆ.

ಆಸ್ಟ್ರೇಲಿಯಾ ಪರ ಅತಿ ವೇಗದ ಟಿ20 ಶತಕ ಬಾರಿಸಿದ ಬಳಿಕ ಟಿಮ್ ಡೇವಿಡ್ ಸಂಭ್ರಮಿಸಿದ ಪರಿ.
ಆಸ್ಟ್ರೇಲಿಯಾ ಪರ ಅತಿ ವೇಗದ ಟಿ20 ಶತಕ ಬಾರಿಸಿದ ಬಳಿಕ ಟಿಮ್ ಡೇವಿಡ್ ಸಂಭ್ರಮಿಸಿದ ಪರಿ.

ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಟಿಮ್ ಡೇವಿಡ್ ಸ್ಫೋಟಕ ಶತಕ ಸಿಡಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಮಾತ್ರವಲ್ಲದೆ,ಆಸೀಸ್ ಗೆ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 6 ವಿಕೆಟ್ ಗಳ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೆಸ್ಟ್ ಇಂಡೀಸ್ ಬೌಲರ್ ಗಳನ್ನು ಚೆಂಡಾಡಿರುವ ಡೇವಿಡ್ ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 11 ಸಿಕ್ಸರ್ ಗಳೊಂದಿಗೆ 102 ರನ್ ಬಾರಿಸಿ ಔಟಾಗದೆ ಉಳಿದರು. ಇದರೊಂದಿಗೆ ಪರ ಅತಿ ವೇಗವಾಗಿ ಟಿ20 ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಸೇಂಟ್ ಕಿಟ್ಸ್ ನ ಬಾಸೆಟೆರೆಯಲ್ಲಿರುವ ವಾರ್ನರ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಭರ್ಜರಿ ಬ್ಯಾಟಿಂಗ್ ಮಾಡಿತ್ತು. ಶಾಯ್ ಹೋಪ್ ಅವರ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿತ್ತು. ಹೋಪ್ 57 ಎಸೆತಗಳಿಂದ 8 ಬೌಂಡರಿ ಹಾಗೂ 6 ಸಿಕ್ಸರ್ ಸೇರಿ 102 ರನ್ ಚಚ್ಚಿದ್ದರು. ವಿಂಡೀಸ್ ಪಡೆ ನೀಡಿದ 215 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ಆರಂಭಿಕ ಆಘಾತ ಅನುಭವಿಸಿತು. ತನ್ನ ಇನ್ನಿಂಗ್ಸ್ ನ 3ನೇ ಓವರ್ ನ 2 ಎಸೆತದಲ್ಲೇ 20 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್ ರನೌಟ್ ಆದರು. ಆ ಬಳಿಕ ಅಂದ್ರೆ 4ನೇ ಓವರ್ ನ 3ನೇ ಎಸೆತದಲ್ಲಿ ಜೋಶ್ ಇಂಗ್ಲಿಸ್ (15) ರೊಮಾರಿಯೋ ಶೆಫರ್ಡ್ ಗೆ ವಿಕೆಟ್ ಒಪ್ಪಿಸಿದರು. ಹೋಲ್ಡರ್ ಎಸೆತದಲ್ಲಿ ಮಿಚೆಲ್ ಮಾರ್ಷ್ (22) ಕೂಡ ಬೇಗ ಔಟಾದರು. ಕೆಮರೂನ್ ಗ್ರೀನ್ 11 ರನ್ ಗಳಿಸಿ ಶೆಫರ್ಡ್ ಓವರ್ ಗಳಲ್ಲಿ ಔಟಾದರು.

8.5 ಓವರ್ ಆಗುವಷ್ಟರಲ್ಲಿ ಆಸ್ಟೇಲಿಯಾ 87 ರನ್ ಗಳಿಸಿ ಪ್ರಮುಖ 4 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಗ್ರೀನ್ ಬಳಿಕ ಕ್ರೀಸ್ ಬಂದ ಟಿಮ್ ಡೇವಿಡ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಂಡೀಸ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಬಲಗೈ ಬ್ಯಾಟರ್, ಒಟ್ಟು 37 ಎಸೆತಗಳಲ್ಲಿ 6 ಬೌಂಡರಿ ಮತ್ತು 11 ಸಿಕ್ಸರ್ ಗಳ ಸಹಾಯದಿಂದ 102 ರನ್ ಗಳಿಸಿ ಔಟಾಗದೆ ಉಳಿದರು. ಮೂಲಕ ಆಸ್ಟ್ರೇಲಿಯಾ 215 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ನೆರವಾದರು.

ಐದು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ 3-0 ಅಂತರದ ಮುನ್ನಡೆ ಸಾಧಿಸಿದೆ. ಟಿಮ್ ಡೇವಿಡ್ ಅವರ ಶತಕವು ಟೆಸ್ಟ್ ಆಡುವ ಯಾವುದೇ ರಾಷ್ಟ್ರದ ವಿರುದ್ಧ ಟಿ 20ಐನಲ್ಲಿ ಮೂರನೇ ವೇಗದ ಶತಕವಾಗಿದೆ. ಈ ವರ್ಷದ ಆರಂಭದಲ್ಲಿ ಐಪಿಎಲ್ ವಿಜೇತ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾಗವಾಗಿದ್ದರು. ಆರ್ ಸಿಬಿ ಪರ ಬ್ಯಾಟಿಂಗ್ ನಲ್ಲಿ ಮಿಂಚಿದ್ದರು.

ಆಂಡ್ರೆ ರಸೆಲ್ ಬ್ಯಾಟ್ ಬಳಸಿ ಟಿಮ್ ಡೇವಿಡ್ ಶತಕ

ವಿಂಡೀಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿರುವ ಟಿಮ್ ಡೇವಿಡ್, ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ 20 ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರ ಬ್ಯಾಟ್ ಅನ್ನು ಬಳಸಿದ್ದಾಗಿ ಹೇಳಿದ್ದಾರೆ. "ನಾನು ಪವರ್ ಹಿಟ್ಟಿಂಗ್ ಮೇಲೆ ಕೆಲಸ ಮಾಡಲು ಸಾಕಷ್ಟು ಸಮಯವನ್ನು ಕಳೆದಿದ್ದೇನೆ, ಆದರೆ ಈಗ ನಾನು ನನ್ನ ಶಾಟ್ ಆಯ್ಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಆಂಡ್ರೆ ರಸೆಲ್ ಬ್ಯಾಟ್ ಅನ್ನು ಒಂದು ವರ್ಷದಿಂದ ಒಯ್ಯುತ್ತಿದ್ದೇನೆ. ಆ ಬ್ಯಾಟ್ ಅನ್ನು ಬಳಸಲು ಇದು ಉತ್ತಮ ಸಮಯ ಎಂದು ಅನಿಸಿತು" ಎಂದು ಡೇವಿಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ.

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.