ವಿಶ್ವ ಚಾಂಪಿಯನ್ನರಿಗೆ ಮತ್ತೆ ಮುಖಭಂಗ; ಇಂಗ್ಲೆಂಡ್ ವಿರುದ್ಧ 2ನೇ ಟಿ20ಯಲ್ಲೂ ಗೆದ್ದ ವೆಸ್ಟ್ ಇಂಡೀಸ್
West Indies vs England 2nd T20I: ಇಂಗ್ಲೆಂಡ್ ಎದುರಿನ 2ನೇ ಟಿ20 ಪಂದ್ಯದಲ್ಲಿ 10 ರನ್ಗಳಿಂದ ಗೆದ್ದ ವೆಸ್ಟ್ ಇಂಡೀಸ್, ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
2022ರ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದೆ. ಗ್ರೆನೆಡಾದ ಸೆಂಟ್ ಜೋನ್ಸ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ನಡೆದ ಪಂದ್ಯದಲ್ಲಿ ಕೆರಿಬಿಯನ್ನರು 10 ರನ್ಗಳ ಜಯ ದಾಖಲಿಸಿದರು. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್, ತನ್ನ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ಗಳ ಸ್ಫರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು. ಸತತ 2 ಪಂದ್ಯ ಸೋತ ವಿಶ್ವಚಾಂಪಿಯನ್ನರು ಮುಖಭಂಗಕ್ಕೆ ಒಳಗಾಗಿದ್ದಾರೆ.
ಬ್ರೆಂಡನ್ ಕಿಂಗ್-ಪೊವೆಲ್ ಅಬ್ಬರ
ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಮತ್ತು ನಾಯಕ ರೋವ್ಮನ್ ಪೊವೆಲ್ ತಲಾ ಅರ್ಧಶತಕ ಸಿಡಿಸಿ ತಂಡಕ್ಕೆ ಆಸೆರೆಯಾದರು. ಕಿಂಗ್ 52 ಎಸೆತಗಳಲ್ಲಿ 8 ಫೋರ್, 5 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದರು. ಮತ್ತೊಂದೆಡೆ ಪೊವೆಲ್ 28 ಬಾಲ್ಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸಹಿತ 50 ರನ್ ಗಳಿಸಿದರು. ಆದರೆ ಮೇಯರ್ಸ್ 17, ಪೂರನ್ 5, ಶೈ ಹೋಪ್ 1, ಶಿಮ್ರಾನ್ ಹೆಟ್ಮೆಯರ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು.
ಕಳೆದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ್ದ ರಸೆಲ್ ಈ ಬಾರಿ ವೈಫಲ್ಯ ಅನುಭವಿಸಿದರು. ಇಂಗ್ಲೆಂಡ್ ಪರ ಆದಿಲ್ ರಶೀದ್, ಟೈಮಲ್ ಮಿಲ್ಸ್ ತಲಾ 2 ವಿಕೆಟ್ ಪಡೆದರು. ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ರೆಹಾನ್ ಅಹ್ಮದ್ ತಲಾ 1 ವಿಕೆಟ್ ಪಡೆದರು. ಆದರೆ ಸ್ಪರ್ಧಾತ್ಮಕ ಮೊತ್ತವನ್ನೂ ಚೇಸ್ ಮಾಡಲು ಇಂಗ್ಲೆಂಡ್ ಪರದಾಡಿತು.
ಇಂಗ್ಲೆಂಡ್ ಬ್ಯಾಟರ್ಸ್ ವೈಫಲ್ಯ
177 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ಗೆ ಬ್ಯಾಟರ್ಗಳು ಮತ್ತೆ ಕೈ ಕೊಟ್ಟರು. ಫಿಲಿಪ್ ಸಾಲ್ಟ್ 25, ಜೋಸ್ ಬಟ್ಲರ್ 5, ವಿಲ್ ಜ್ಯಾಕ್ಸ್ 25, ಲಿವಿಂಗ್ಸ್ಟನ್ 17, ಹ್ಯಾರಿ ಬ್ರೂಕ್ 5, ಮೊಯಿನ್ ಅಲಿ ಅಜೇಯ 22 ರನ್ ಗಳಿಸಿದರು. ಆದರೆ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಸ್ಯಾಮ್ ಕರನ್ ಅರ್ಧಶತಕ ಸಿಡಿಸಿ ಹೋರಾಡಿದರು. ಆದರೆ ಗೆಲುವು ದಕ್ಕಲಿಲ್ಲ. ಏಕದಿನ ಸರಣಿ ಸೋತಿರುವ ಇಂಗ್ಲೆಂಡ್ ಈಗ ಟಿ20 ಸರಣಿ ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ.
2ನೇ ಟಿ20ಗೆ ಕಣಕ್ಕಿಳಿದ ವೆಸ್ಟ್ ಇಂಡೀಸ್ ತಂಡ
ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಗುಡಕೇಶ್ ಮೋಟಿ, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್.
2ನೇ ಟಿ20ಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡ
ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟನ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ರೆಹಾನ್ ಅಹ್ಮದ್, ಆದಿಲ್ ರಶೀದ್, ಟೈಮಲ್ ಮಿಲ್ಸ್.