34 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಗೆದ್ದ ವೆಸ್ಟ್ ಇಂಡೀಸ್; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಪಾಕ್
ಬರೋಬ್ಬರಿ 34 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನದಲ್ಲಿ ಮೊದಲ ಗೆಲುವು ದಾಖಲಿಸಿದೆ. ಆತಿಥೇಯ ತಂಡದ ವಿರುದ್ಧದ ಸರಣಿಯ ಎರಡನೇ ಪಂದ್ಯ ಗೆದ್ದ ತಂಡವು, ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಬರೋಬ್ಬರಿ 34 ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಮೊದಲ ಗೆಲುವು ಸಾಧಿಸಿದೆ. ಪಂದ್ಯವನ್ನು ಗೆದ್ದ ವಿಂಡೀಸ್, ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಆ ಮೂಲಕ ಸರಣಿ ಡ್ರಾಗೊಂಡಿದೆ. ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ 127 ರನ್ ಗಳಿಂದ ಗೆದ್ದುಕೊಂಡಿತ್ತು. ಮುಲ್ತಾನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 120 ರನ್‌ಗಳಿಂದ ಸೋತ ನಂತರ ಪಾಕಿಸ್ತಾನ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ವಿಂಡೀಸ್ ಸ್ಪಿನ್ನರ್ ಜೋಮೆಲ್ ವಾರಿಕನ್, ಪಂದ್ಯದ ಅಂತಿಮ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಪಂದ್ಯದಲ್ಲಿ ಒಂಬತ್ತು ಮತ್ತು ಸರಣಿಯಲ್ಲಿ ಒಟ್ಟು 19 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯಶ್ರೇಷ್ಠ ಜೊತೆಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
ಗೆಲುವಿಗೆ 254 ರನ್‌ಗಳ ಗುರಿ ಪಡೆದ ಪಾಕಿಸ್ತಾನ, 3ನೇ ದಿನದಾಟದ ಆರಂಭದಲ್ಲಿ 4 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿ ಇನ್ನಿಂಗ್ಸ್ ಆರಂಭಿಸಿತು. ಪಾಕಿಸ್ತಾನವು ಸೌದ್ ಶಕೀಲ್ ಮೇಲೆ ಸಂಪೂರ್ಣ ಅವಲಂಬಿತವಾಗಿತ್ತು. ಆದರೆ, ಆತಿಥೇಯ ತಂಡವು ಅಂತಿಮ ಇನ್ನಿಂಗ್ಸ್‌ನಲ್ಲಿ ಕೇವಲ 133 ರನ್‌ಗಳಿಗೆ ಆಲೌಟ್ ಆಗಿ ನಿರಾಶೆ ಮೂಡಿಸಿತು.
1990ರ ನಂತರ ಮೊದಲ ಗೆಲುವು
ವಿಂಡೀಸ್ ಪಾಲಿಗೆ ಇದು ಐತಿಹಾಸಿಕ ಗೆಲುವಾಗಿದೆ. 1990ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಪಾಕ್ ನೆಲದಲ್ಲಿ ವಿಂಡೀಸ್ ವಿನ್ ಆಗಿತ್ತು. 1997 ಮತ್ತು 2006ರ ಪ್ರವಾಸಗಳಲ್ಲಿ ಗೆಲುವು ಕಾಣದ ವೆಸ್ಟ್ ಇಂಡೀಸ್, ಇದೀಗ ಅಪರೂಪದ ಗೆಲವು ತನ್ನದಾಗಿಸಿದೆ.
2023/25ರ ಅವಧಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ಐದರಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ತಂಡವು, ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನಕ್ಕಿಂತ ಒಂದು ಸ್ಥಾನ ಮೇಲಿದೆ. ಪಾಕಿಸ್ತಾನವು 9 ಟೆಸ್ಟ್‌ಗಳಲ್ಲಿ ಸೋಲು ಕಂಡರೆ, ವಿಂಡೀಸ್ 8ರಲ್ಲಿ ಸೋತಿದೆ. ಪಾಕಿಸ್ತಾನವು ಕೇವಲ 27.89 ಪಿಸಿಟಿಯೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಇದು ಡಬ್ಲ್ಯುಟಿಸಿ ಚಕ್ರದಲ್ಲಿ ತಂಡದ ಇದುವರೆಗಿನ ಕಳಪೆ ಪ್ರದರ್ಶನವಾಗಿದೆ.
ಪಾಕಿಸ್ತಾನದ ಕಳಪೆ ಪ್ರದರ್ಶನ
ಡಬ್ಲ್ಯುಟಿಸಿ ಉದ್ಘಾಟನಾ ಆವೃತ್ತಿಯಲ್ಲಿ ಮೂರು ಗೆಲುವುಗಳನ್ನು ದಾಖಲಿಸಿ 43.3 ಪಿಸಿಟಿಯೊಂದಿಗೆ ಆರನೇ ಸ್ಥಾನ ಪಡೆದಿತ್ತು. ಆ ನಂತರದ ಆವೃತ್ತಿಯಲ್ಲಿ (2021/23), 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳನ್ನು ದಾಖಲಿಸಿದ ನಂತರ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.
ಡಬ್ಲ್ಯುಟಿಸಿ ಅಂಕಪಟ್ಟಿ
ಅತ್ತ ತವರಿನಲ್ಲಿ ಅದ್ಭುತ ಗೆಲುವಿನ ನಂತರ ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಜೂನ್‌ನಲ್ಲಿ ಲಾರ್ಡ್ ಮೈದಾನದಲ್ಲಿ ಡಬ್ಲ್ಯುಟಿಸಿ ಪ್ರಶಸ್ತಿಗಾಗಿ ಸೆಣಸಲಿವೆ. ಮತ್ತೊಂದೆಡೆ, ಎರಡು ಬಾರಿಯ ರನ್ನರ್ಸ್ ಅಪ್ ಆಗಿರುವ ಭಾರತ ತಂಡ, ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಗಿದೆ. ಟೀಮ್ ಇಂಡಿಯಾ 19 ಪಂದ್ಯಗಳಲ್ಲಿ ಒಂಬತ್ತು ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
