ಚೊಚ್ಚಲ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದ ಆರ್‌ಸಿಬಿ ಕುರಿತು ಗೃಹ ಸಚಿವ ಪರಮೇಶ್ವರ ಹೇಳಿದ್ದೇನು? ಕೊಹ್ಲಿ ಬಗ್ಗೆಯೂ ಮಾತು!
ಭದ್ರತಾ ದೃಷ್ಟಿಯಿಂದ ಆಟಗಾರರು ತೆರೆದ ವಾಹನದಲ್ಲಿ ಸ್ಟೇಡಿಯಂಗೆ ಹೋಗುತ್ತಿಲ್ಲ. ಕೆಎಸ್‌ಸಿಎ ವತಿಯಿಂದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಹೇಳಿದ್ದಾರೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೃಹ ಸಚಿವ ಜಿ ಪರಮೇಶ್ವರ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಅವರ ಪ್ರಾಮಾಣಿಕೆಯನ್ನೂ ಹೊಗಳಿದ್ದಾರೆ. 18 ವರ್ಷಗಳ ನಂತರ ಐಪಿಎಲ್ ಚಾಂಪಿಯನ್ ಆಗಿರುವ ಆರ್‌ಸಿಬಿ ತಂಡಕ್ಕೆ ನನ್ನ ಅಭಿನಂದನೆಗಳು. ವಿಶೇಷವಾಗಿ ವಿರಾಟ್ ಕೊಹ್ಲಿ ಅವರು ದೇಶಕ್ಕೆ ಮಾತ್ರವಲ್ಲದೇ, ಇಡೀ ವಿಶ್ವಕ್ಕೆ ಮಾದರಿ ಕ್ರೀಡಾಪಟುವಾಗಿ ಹೊರ ಹೊಮ್ಮಿರುವುದು ಸಂತೋಷದಾಯಕ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ತಂಡ ಗೆದ್ದಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ಆಡಿದ ಮಾತುಗಳು ನಿಜಕ್ಕು ಹೆಮ್ಮೆ ಎನಿಸುತ್ತದೆ. 18 ವರ್ಷಗಳಿಂದ ಸತತ ಆರಸಿಬಿ ತಂಡಕ್ಕೆ ನಿಷ್ಠೆಯಾಗಿ ಆಡಿರುವುದು ಎಲ್ಲ ಕ್ರೀಡಾಪಟುಗಳಿಗೆ ಉತ್ತಮ ಸಂದೇಶ ಕೊಡುತ್ತದೆ. ಬೆಂಗಳೂರಿನ ಬಗ್ಗೆ ಭಾವನಾತ್ಮಕ ನಂಟಿನ ಬಗ್ಗೆ ಅವರು ಹೇಳಿರುವುದು ಸಂತೋಷ ತಂದಿದೆ ಎಂದರು.
ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ತಂಡಕ್ಕೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು. ಎಲ್ಲ ಆಟಗಾರರು ಬಸ್‌ನಲ್ಲಿ ಬರುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಬಸ್‌ನಲ್ಲೇ ವಾಪಸ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಭಿನಂದಿಸುತ್ತಾರೆ ಎಂದಿದ್ದಾರೆ.
ಭದ್ರತಾ ದೃಷ್ಟಿಯಿಂದ ಆಟಗಾರರು ತೆರೆದ ವಾಹನದಲ್ಲಿ ಸ್ಟೇಡಿಯಂಗೆ ಹೋಗುತ್ತಿಲ್ಲ. ಕೆಎಸ್‌ಸಿಎ ವತಿಯಿಂದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡಿಕೊಳ್ಳಲಿದ್ದಾರೆ. ಅಗತ್ಯ ಪೊಲೀಸ್ ಭದ್ರತೆ, ಟ್ರಾಫಿಕ್ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಮಾರಂಭಕ್ಕೆ ಅಧಿಕೃತ ಪಾಸ್ ಮತ್ತು ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶ ಇರಲಿದೆ ಎಂದರು.
ಕಾನೂನು ಬಿಟ್ಟವರಿಗೆ ಭಯವಾಗಬೇಕು ಎಂದ ಪರಂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರು ಆತಂಕ ಪಡಬೇಕಿಲ್ಲ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರು ಕಾನೂನು ಮತ್ತು ಜನ ಸಮುದಾಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ ಅವರಿಗೆ ಆತಂಕವಿರಬಹುದು. ಅದನ್ನು ಬಿಟ್ಟರೆ ಸಾಮಾನ್ಯ ಜನರಿಗೆ ತೊಂದರೆಯಾಗುವುದಕ್ಕೆ ಬಿಡುವುದಿಲ್ಲ. ಕರಾವಳಿ ಭಾಗದಲ್ಲಿ ಇನ್ನು ಕೂಡ ಕೋಮು ಪ್ರಚೋದನೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಇರಬಹುದು. ರಾತ್ರಿ ಗಸ್ತು ಹೆಚ್ಚು ಮಾಡುವುದು, ಮನೆಮನೆಗೆ ಹೋಗಿ ಜನರನ್ನು ಸಹಕರಿಸಲು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಗಲಭೆ ಹಬ್ಬಿಸುವವರು ಇದ್ದರೆ ಪೊಲೀಸರು ಪರಿಶೀಲನೆ ಮಾಡುತ್ತಾರೆ. ಯಾರಿಗು ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನಾವು ಯಾರನ್ನು ಟಾರ್ಗೆಟ್ ಮಾಡುವುದಿಲ್ಲ. ನೀವು ಸಾರ್ವಜನಿಕವಾಗಿ ಕಾನೂನಿನ ಚೌಕಟ್ಟಿನಲ್ಲಿ ನಡೆದುಕೊಳ್ಳುವುದಾದರೆ ಭಯ ಏಕೆ? ಯಾರು ಕಾನೂನು ಬಿಟ್ಟು ಕೆಲಸ ಮಾಡುತ್ತಾರೆ ಅಂತವರಿಗೆ ಭಯ ಆಗಬೇಕು. ಈಗಾಗಲೇ ತೀರ್ಮಾನ ಮಾಡಿದಂತೆ ಕೋಮು ಹಿಂಸಾ ನಿಗ್ರಹ ಕಾರ್ಯಪಡೆಯನ್ನು ಇನ್ನೊಂದು ವಾರದೊಳಗೆ ಮಾಡುತ್ತೇವೆ. ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರಕ್ಕೆ ಇದೆ. ಅದಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನಾಗಲಿ ಅಥವಾ ಮುಖ್ಯಮಂತ್ರಿಯವರಾಗಲಿ ಪೊಲೀಸ್ ಅಧಿಕಾರಿಗಳಿಗೆ ದಿನನಿತ್ಯ ಗಂಟೆಗೊಮ್ಮೆ ಸೂಚನೆಗಳನ್ನು ಕೊಡುವುದಿಲ್ಲ. ಏನಾದರು ಘಟನೆಗಳು ನಡೆದಾಗ ಅಧಿಕಾರಿಗಳನ್ನು ನಾವು ಕೇಳುತ್ತೇವೆ ಎಂದು ಹೇಳಿದರು.