ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

ಐಪಿಎಲ್ 2024ರ ಪ್ಲೇಆಫ್‌ ಪಂದ್ಯಗಳಿಗೆ ದಿನಾಂಕ ನಿಗದಿಯಾಗಿದೆ. ಆದರೆ, ಅಹಮದಾಬಾದ್‌ ಹಾಗೂ ಚೆನ್ನೈನಲ್ಲಿ ಮಳೆ ಆತಂಕ ಎದುರಾಗಿದೆ. ಒಂದು ವೇಳೆ ಪ್ಲೇಆಫ್‌ ಪಂದ್ಯಗಳಿಗೂ ಮಳೆ ಅಡ್ಡಿಯಾದರೆ ಐಪಿಎಲ್‌ ನಿಯಮಗಳು ಹೇಗಿರಲಿವೆ ಎಂಬುದನ್ನು ನೋಡೋಣ.

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ
ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ (AFP)

ಐಪಿಎಲ್‌ 2024ರ ಆವೃತ್ತಿಯಲ್ಲಿ ಎರಡನೇ ಹಂತದ ಕೆಲವು ಪಂದ್ಯಗಳು ಮಳೆಯಿಂದಾಗಿ ರದ್ದಾದವು. ಇದೀಗ ಲೀಗ್‌ ಹಂತ ಮುಕ್ತಾಯಗೊಂಡಿದ್ದು, ಪ್ಲೇಆಪ್‌ ವೇಳಾಪಟ್ಟಿ ಅಂತಿಮವಾಗಿದೆ. ಆದರೆ, ಪ್ಲೇಆಫ್‌ ಪಂದ್ಯಗಳಿಗೂ ಮಳೆ ಆತಂಕವಿದೆ. ನಾಲ್ಕು ಪಂದ್ಯಗಳಲ್ಲಿ ಮೊದಲ ಎರಡು ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆದರೆ, ಎರಡನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಇದೀಗ ಕ್ವಾಲಿಫೈಯರ್‌ಗಳು ಮತ್ತು ಎಲಿಮಿನೇಟರ್‌ ಪಂದ್ಯಗಳಿಗೂ ಮಳೆ ಆತಂಕ ಎದುರಾಗಿದೆ. ಒಂದು ವೇಳೆ, ಮಳೆಯಿಂದಾಗಿ ಪಂದ್ಯ ವಿಳಂಬವಾದರೆ, ಅಥವಾ ಸಂಪೂರ್ಣ ರದ್ದಾದರೆ ಐಪಿಎಲ್‌ ನಿಯಮಗಳು ಹೇಗಿರಲಿದೆ ಎಂಬುದನ್ನು ನೋಡೋಣ.

ಟ್ರೆಂಡಿಂಗ್​ ಸುದ್ದಿ

ಈ ಐಪಿಎಲ್ ಋತುವಿನಲ್ಲಿ ಮಳೆಯಿಂದಾಗಿ ಮೂರು ಪಂದ್ಯಗಳು ಸಂಪೂರ್ಣ ರದ್ದಾಯ್ತು. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್, ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯಗಳು ಒಂದೂ ಓವರ್‌ ಎಸೆಯದೆ ರದ್ದಾದವು. ಹೀಗಾಗಿ ಪ್ಲೇಆಫ್‌ ಸಮಯದಲ್ಲಿ ಹೀಗಾಗದಂತೆ ನಿರ್ದಿಷ್ಟ ನಿಯಮಗಳಿವೆ.

ಮಳೆಯಿಂದ ಪಂದ್ಯ ವಿಳಂಬವಾದರೆ ಏನಾಗಲಿದೆ?

ಒಂದು ವೇಳೆ ಐಪಿಎಲ್ ಪ್ಲೇಆಫ್ ಪಂದ್ಯಗಳ‌ ಸಮಯದಲ್ಲಿ ಮಳೆಯು ಪಂದ್ಯಕ್ಕೆ ಅಡ್ಡಿಪಡಿಸಿದರೆ, ಆಗ ಸಹಜವಾಗಿ ಆರಂಭ ವಿಳಂಬವಾಗುತ್ತದೆ. ಪ್ಲೇಆಫ್‌ ಪಂದ್ಯಗಳ ಸಮಯದಲ್ಲಿ ಮಳೆ ನಿಲ್ಲಲು 120 ನಿಮಿಷ ಅಂದರೆ 2 ಗಂಟೆಗಳ ಹೆಚ್ಚುವರಿ ಸಮಯ ಇರುತ್ತದೆ. ಈ ಹೆಚ್ಚುವರಿ ಸಮಯದಲ್ಲಿ ಪಂದ್ಯ ಪುನರಾರಂಭಿಸಲು ಸಾಧ್ಯವಾದರೆ, ಓವರ್‌ ಕಡಿತಗೊಳಿಸಿ ಪಂದ್ಯ ನಡೆಸಲಾಗುತ್ತದೆ. ಆಗ ಪಂದ್ಯದ ನಿಗದಿತ ದಿನದಂದೇ ಪಂದ್ಯ ಪೂರ್ಣಗೊಂಡು ಫಲಿತಾಂಶ ಹೊರಬರುತ್ತದೆ. ಕೊನೆ ಪಕ್ಷ 5 ಓವರ್ ನಡೆಸಲು ನಿರ್ಧರಿಸಲಾಗುತ್ತದೆ. ಒಂದು ವೇಳೆ ಮಳೆ ಮುಂದುವರೆದು ಹೆಚ್ಚುವರಿ ಸಮಯದೊಳಗೆ ಪಂದ್ಯ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಆಗ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ. ಕಳೆದ ಬಾರಿಯ ಐಪಿಎಲ್‌ ಫೈನಲ್‌ ಪಂದ್ಯ ಕೂಡಾ ಮೀಸಲು ದಿನದಂದು ಪೂರ್ಣಗೊಂಡಿತ್ತು.

ಮೀಸಲು ದಿನ

ಕ್ವಾಲಿಫೈಯರ್ ಅಥವಾ ಎಲಿಮಿನೇಟರ್‌ನಂಥ ಪಂದ್ಯಗಳ ವೇಳೆ ನಿರಂತರ ಮಳೆಯಿಂದಾಗಿ ಪಂದ್ಯವು ನಡೆಯದಿದ್ದರೆ, ಪಂದ್ಯದ ಅಧಿಕಾರಿಗಳು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಾರೆ. ಐಪಿಎಲ್ ಪ್ಲೇಆಫ್ ಪಂದ್ಯಗಳಿಗೆ ಮೀಸಲು ದಿನ ನಿಗದಿಪಡಿಸಲಾಗಿದೆ. ಮೀಸಲು ದಿನದಂದು ಪಂದ್ಯ ಆರಂಭದಿಂದಲೇ ನಡೆಯುತ್ತದೆ. ಆ ಮೂಲಕ ಉಭಯ ತಂಡಗಳ ಗೆಲುವಿಗೆ ಸಮಾನ ಅವಕಾಶ ನೀಡಲಾಗುತ್ತದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಪ್ರಮುಖ ಪಂದ್ಯಗಳಲ್ಲಿ ಯಾವುದೇ ತಂಡಕ್ಕೂ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಈ ನಿಯಮವಿದೆ.

ಮೀಸಲು ದಿನವೂ ಪಂದ್ಯ ರದ್ದಾದರೆ?

ಒಂದು ವೇಳೆ, ಮೀಸಲು ದಿನವೂ ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ತಂಡ ವಿಜೇತ ಎಂದು ಘೋಷಿಸಲಾಗುತ್ತದೆ. ಇದು ಫೈನಲ್ ಪಂದ್ಯಕ್ಕೂ ಅನ್ವಯವಾಗುತ್ತದೆ. ಪ್ಲೇಆಫ್ ಪಂದ್ಯಗಳಲ್ಲಿ ವಿಜೇತರನ್ನು ನಿರ್ಧರಿಸಲು ಲಭ್ಯವಿರುವ ಸಮಯದೊಳಗೆ ಕೊನೆಗೆ ಸೂಪರ್ ಓವರ್​​ ಆಡಿಸಲಾಗುತ್ತದೆ. ಇದು ಕೂಡಾ ಸಾಧ್ಯವಾಗದಿದ್ದರೆ ಲೀಗ್ ಟೇಬಲ್‌ನಲ್ಲಿ ಉನ್ನತ ಸ್ಥಾನ ಪಡೆದ ತಂಡ ಆ ಪಂದ್ಯದ ವಿಜೇತ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ | ಐಪಿಎಲ್ 2024 ಲೀಗ್ ಹಂತ ಅಂತ್ಯ; ಆರೆಂಜ್‌, ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯಾರಿದ್ದಾರೆ? ವಿರಾಟ್‌ ಹಿಂದಿಕ್ಕೋದು ಕಷ್ಟ ಕಷ್ಟ

ಪ್ಲೇಆಫ್ ವೇಳಾಪಟ್ಟಿಯಲ್ಲಿ ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯವಿದೆ. ಪ್ರತಿ ಪಂದ್ಯಕ್ಕೂ ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೀಸಲು ದಿನಗಳನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ | ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024