ಮೆಲ್ಬೋರ್ನ್ ಟೆಸ್ಟ್ ಸೋಲಿಗೆ ತನ್ನ ತಪ್ಪನ್ನು ಮುಚ್ಚಿಟ್ಟು ಮತ್ತೊಬ್ಬರ ಮೇಲೆ ಗೂಬೆ ಕೂರಿಸಿದ ರೋಹಿತ್ ಶರ್ಮಾ
Rohit Sharma: ಮೆಲ್ಬೋರ್ನ್ ಟೆಸ್ಟ್ ಸೋಲಿಗೆ ತನ್ನ ತಪ್ಪನ್ನು ಮುಚ್ಚಿಟ್ಟಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಯುವ ಆಟಗಾರರನ್ನು ಪರೋಕ್ಷವಾಗಿ ದೂಷಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಿರ್ಣಾಯಕ 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 184 ರನ್ಗಳ ದೊಡ್ಡ ಸೋಲು ಕಂಡಿದ್ದು, ಪ್ರತಿಷ್ಠಿತ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಅನುಭವಿಸಿದೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ ಈ ವೇಳೆ ತನ್ನ ವೈಫಲ್ಯ ಮುಚ್ಚಿಟ್ಟು ಪರೋಕ್ಷವಾಗಿ ಬೇರೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ಪಂದ್ಯ ಸೋತಿರುವ ಬೇಸರದಲ್ಲಿರುವ ಅಭಿಮಾನಿಗಳು ರೋಹಿತ್ ಹೇಳಿಕೆಗೆ ಸಿಟ್ಟಿಗೆದ್ದು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಸೋಲಿಗೆ ಪರೋಕ್ಷವಾಗಿ ಯುವ ಆಟಗಾರರನ್ನು ದೂರಿದ್ದಾರೆ. ನಿಜ, ಪಂದ್ಯವನ್ನು ಕಳೆದುಕೊಂಡಾಗ, ಆಗುವ ನೋವು ತುಂಬಾ ಇರುತ್ತೆ. ಆದರೆ ತಂಡದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಮಗೆ ಪಂದ್ಯ ಗೆಲ್ಲುವ ಅವಕಾಶಗಳಿದ್ದವು. ಗೆಲುವಲ್ಲದಿದ್ದರೂ ಪಂದ್ಯ ಡ್ರಾ ಸಾಧಿಸುವ ಅವಕಾಶವೂ ನಮ್ಮ ಮುಂದಿತ್ತು. ಪಂದ್ಯದ ಗೆಲುವಿಗೆ ಕೊನೆಯ ತನಕ ಹೋರಾಟ ನಡೆಸಿದೆವು. ಆದರೆ ಪರಿಸ್ಥಿತಿಗಳು ನಮ್ಮ ಕೈ ಹಿಡಿದಿಲ್ಲ. ಒಟ್ಟಾರೆ ಎಲ್ಲಿಲ್ಲಿ ತಪ್ಪು ಮಾಡಿದ್ದೇವೆ ಎಂಬುದರ ಅವಲೋಕನ ಮಾಡುತ್ತೇವೆ. 2ನೇ ಇನ್ನಿಂಗ್ಸ್ನಲ್ಲಿ ಆಸೀಸ್ 91ಕ್ಕೆ 6 ವಿಕೆಟ್ ಕಳೆದುಕೊಂಡಾಗ, ಎಚ್ಚರ ತಪ್ಪಿದ್ದು ನಮ್ಮದೇ ತಪ್ಪು ಎಂದಿದ್ದಾರೆ.
ಯುವಕರ ಮೇಲೆ ಗೂಬೆ ಕೂರಿಸಿದ ನಾಯಕ
ಇದೇ ವೇಳೆ ರೋಹಿತ್, ಪಂದ್ಯದ ಸೋಲಿಗೆ ಪರೋಕ್ಷವಾಗಿ ಯುವ ಆಟಗಾರರನ್ನು ಎಳೆದು ತಂದಿದ್ದಾರೆ. ಕ್ರೀಸ್ನಲ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಿದ ಆಟಗಾರರು ಬೇಗ ಔಟಾಗಿದ್ದೇ ಸೋಲಿಗೆ ಕಾರಣ ಎನ್ನುವಂತೆ ಬಿಂಬಿಸಿದ್ದಾರೆ. ಕ್ರೀಸ್ನಲ್ಲಿ ತುಂಬಾ ಹೊತ್ತು ಬ್ಯಾಟಿಂಗ್ ಮಾಡಿದವರು, ಇನ್ನೊಂದಿಷ್ಟು ಸಮಯ ಕಳೆಯಬಹುದಿತ್ತು. ಆದರೆ ಅವರು ಸಹ ಬೇಗ ಔಟಾದರು. ಅವರಿನ್ನೂ ಹೊಸಬರು. ಕಲಿಯುವ ಹಂತದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ರೋಹಿತ್ ಹೇಳುವ ಅರ್ಥದಲ್ಲಿ ಹೆಚ್ಚು ಹೊತ್ತು ಕ್ರೀಸ್ನಲ್ಲಿದ್ದ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಅವರೇ ಸೋಲಿಗೆ ಕಾರಣ ಎನ್ನುವಂತಿದೆ. ಈ ಇಬ್ಬರೇ ಆಸೀಸ್ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸೋಲಿನ ಅಂತರ ತಗ್ಗಿಸಿದರು. ಹೀಗಿದ್ದಾಗ ದೂಷಿಸುವುದು ಎಷ್ಟು ಸರಿ ಎಂದು ಟೀಕೆ ವ್ಯಕ್ತವಾಗಿದೆ.
ಯುವ ಆಟಗಾರರನ್ನು ದೂರುವ ರೋಹಿತ್ ಶರ್ಮಾ ತಾನು ಮಾತ್ರ ಒಂದಂಕಿಗೆ ಔಟ್ ಆಗಿದ್ದನ್ನು ಮರೆಮಾಚಿದ್ದಾರೆ. ಈ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ರೋಹಿತ್, ತನ್ನ ಹೇಳಿಕೆಯಿಂದ ಟೀಕೆಗೆ ಒಳಗಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಎರಡು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 3, 9 ರನ್ ಸಿಡಿಸಿದ್ದಾರೆ. ಆದರೆ, ಪ್ರಸ್ತುತ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರ ಎಂದರೆ ಯಶಸ್ವಿ ಜೈಸ್ವಾಲ್ ಮಾತ್ರ. 4ನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಜೈಸ್ವಾಲ್ ಈ ಸರಣಿಯಲ್ಲಿ ಒಟ್ಟು 8ಇನ್ನಿಂಗ್ಸ್ಗಳಲ್ಲಿನ ಕಣಕ್ಕಿಳಿದಿದ್ದು 51.29ರ ಬ್ಯಾಟಿಂಗ್ ಸರಾಸರಿಯಲ್ಲಿ 359 ರನ್ ಗಳಿಸಿದ್ದಾರೆ.
ಪಂತ್ಗೆ ಎಚ್ಚರಿಕೆ ನೀಡಿದ ರೋಹಿತ್
ಇದೇ ವೇಳೆ ಪಂತ್ಗೆ ಎಚ್ಚರಿಕೆ ನೀಡಿದ ರೋಹಿತ್, ಆಟದ ಪರಿಸ್ಥಿತಿ ಅರ್ಥ ಮಾಡಿಕೊಂಡು ಆಡಬೇಕು ಎಂದು ತಿಳಿಸಿದ್ದಾರೆ. ರಿಷಭ್ ಪಂತ್ ಎರಡು ಇನ್ನಿಂಗ್ಸ್ಗಳಲ್ಲಿ ಬೇಜವಾಬ್ದಾರಿಯುತ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈ ಚೆಲ್ಲಿದ್ದರ ಕುರಿತು ಮಾತನಾಡಿದ ಹಿಟ್ಮ್ಯಾನ್, ತಂಡದ ಪರಿಸ್ಥಿತಿ ನೋಡಿಕೊಂಡು ಮತ್ತು ಅರ್ಥ ಮಾಡಿಕೊಂಡು ಆಡಬೇಕು. ನಾವು ಯಾರಾದರೂ ಹೇಳುವ ಮೊದಲೇ ಅವರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಹಿಂದೆ ಪಂತ್ರ ಆಕ್ರಮಣಕಾರಿ ಬ್ಯಾಟಿಂಗ್ನಿಂದ ತಂಡಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ ನಿಜ. ಆದರೆ ಅಂದಿನ ಪರಿಸ್ಥಿತಿಗಳೇ ಬೇರೆ. ಹಾಗಾಗಿ ಪರಿಸ್ಥಿತಿಗಳ ಬಗ್ಗೆ ಯೋಚಿಸುವುದು ಅಗತ್ಯ. ಆಟದ ಪರಿಸ್ಥಿತಿಗೆ ಅನುಗುಣವಾಗಿ ನೀವು ಅಪಾಯದ ಬಗ್ಗೆ ಅರಿತು ಆಡಬೇಕು. ಇದಕ್ಕೆ ಅವರೇ ಉತ್ತರ ಕಂಡುಕೊಳ್ಳಬೇಕು ಎಂದಿದ್ದಾರೆ.