Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಎಂದರೇನು, ಅರ್ಹತೆ ಏನು; ಆಟಗಾರರಿಗೆ ಸಂಬಳದ ಜತೆಗೆ ಸಿಗುವ ಹೆಚ್ಚುವರಿ ಸೌಲಭ್ಯಗಳೇನು?
BCCI central contract : ಬಿಸಿಸಿಐ ಕೇಂದ್ರ ಗುತ್ತಿಗೆ ಎಂದರೇನು? ಈ ಒಪ್ಪಂದದ ಅವಧಿ ಎಷ್ಟಿದೆ? ಸಂಬಳದ ಜತೆಗೆ ಏನೆಲ್ಲಾ ಸೌಲಭ್ಯ ಇದೆ ಎಂಬುದನ್ನು ತಿಳಿಯೋಣ
ಭಾರತೀಯ ಕ್ರಿಕೆಟ್ ಆಟಗಾರರ ವಾರ್ಷಿಕ ವೇತನ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ (BCCI) ಇತ್ತೀಚೆಗೆ ಘೋಷಿಸಿದೆ. ಗುತ್ತಿಗೆ ಪಟ್ಟಿಗೆ ಯಾರೆಲ್ಲಾ ಸೇರಿದ್ದಾರೆ? ಯಾರಿಗೆ ಯಾವ ಗ್ರೇಡ್? ವೇತನ ಎಷ್ಟು? ಕೆಲವರನ್ನು ಕೈಬಿಟ್ಟಿದ್ಯಾಕೆ ಎಂಬುದರ ಕುರಿತು ಕ್ರಿಕೆಟ್ ಪ್ರೇಮಿಗಳು ತಿಳಿದುಕೊಂಡಿದ್ದಾರೆ. ಆದರೆ ಬಿಸಿಸಿಐ ಕೇಂದ್ರ ಗುತ್ತಿಗೆ ಎಂದರೇನು? ಈ ಒಪ್ಪಂದದ ಅವಧಿ ಎಷ್ಟಿದೆ? ಸಂಬಳದ ಜತೆಗೆ ಏನೆಲ್ಲಾ ಸೌಲಭ್ಯ ಇದೆ ಎಂಬುದನ್ನು ತಿಳಿಯೋಣ.
ಬಿಸಿಸಿಐ ಕೇಂದ್ರ ಗುತ್ತಿಗೆ ಎಂದರೇನು?
ಗುತ್ತಿಗೆ ಪಟ್ಟಿಯನ್ನು ಎ+, ಎ, ಬಿ ಮತ್ತು ಸಿ ಎಂದು 4 ಭಾಗಗಳಾಗಿ ವಿಭಜನೆ ಮಾಡಲಾಗಿದೆ. ಗುತ್ತಿಗೆ ವ್ಯವಸ್ಥೆಯನ್ನು ಬಿಸಿಸಿಐನ ಅಪೆಕ್ಸ್ ಬಾಡಿ ಪರಿಚಯಿಸಿದೆ. ಇದು ವಾರ್ಷಿಕ ಗುತ್ತಿಗೆಯಾಗಿರಲಿದೆ. ಮೂರು ಸ್ವರೂಪದ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುವವರನ್ನು ಗುರುತಿಸುವುದು ಮತ್ತು ಪುರಸ್ಕರಿಸುವುದೇ ಈ ವ್ಯವಸ್ಥೆಯ ರೂಪವಾಗಿದೆ. ಪ್ಲೇಯರ್ಗಳ ಪ್ರದರ್ಶನ, ಅನುಭವ ಮತ್ತು ತಂಡಕ್ಕೆ ನೀಡಿದ ಕಾಣಿಕೆಯನ್ನು ಆಧರಿಸಿ ಶ್ರೇಣಿ ನೀಡಲಾಗುತ್ತದೆ.
ಸಂಬಳದ ಜೊತೆಗೆ ಏನೆಲ್ಲಾ ಸೌಲಭ್ಯವಿದೆ?
ಗ್ರೇಡ್ ಎ+ ಆಟಗಾರರಿಗೆ ವಾರ್ಷಿಕ 7 ಕೋಟಿ ವೇತನ ಇರಲಿದೆ. ಗ್ರೇಡ್ ಎ ಆಟಗಾರರಿಗೆ 5 ಕೋಟಿ, ಗ್ರೇಡ್ ಬಿ ವಿಭಾಗದ ಆಟಗಾರರಿಗೆ 3 ಕೋಟಿ, ಸಿ ವಿಭಾಗಕ್ಕೆ 1 ಕೋಟಿ ಸಂಬಳ ಇರಲಿದೆ. ಗುತ್ತಿಗೆ ಸಂಬಳದ ಹೊರತಾಗಿ ಕೆಲ ಆಟಗಾರರಿಗೆ ಬೋನಸ್ ಮತ್ತು ಪ್ರೋತ್ಸಾಹ ಮೊತ್ತವನ್ನು ನೀಡಲಾಗುತ್ತದೆ. ಅಲ್ಲದೆ, ಟೆಸ್ಟ್, ಏಕದಿನ, ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದರೆ ಅವರಿಗೆ ಪಂದ್ಯದ ಶುಲ್ಕವೂ ಸಿಗಲಿದೆ. ಇಷ್ಟಲ್ಲದೆ, ವಾರ್ಷಿಕ ಒಪ್ಪಂದ ಪಡೆದವರು ಹೆಚ್ಚುವರಿ ಸೌಲಭ್ಯಗಳನ್ನೂ ಪಡೆಯುತ್ತಾರೆ. ದೈಹಿಕ ಸಮಸ್ಯೆ ಏನೇ ಆದರೂ ವೈದ್ಯಕೀಯ ವೆಚ್ಚವನ್ನು ಬಿಸಿಸಿಐ ಭರಿಸುತ್ತದೆ. ತರಬೇತಿ ಸೌಲಭ್ಯ, ಪ್ರವಾಸಗಳಿಗೆ ಪ್ರಯಾಣದ ಭತ್ಯೆಯನ್ನೂ ಒದಗಿಸುತ್ತದೆ.
ಬಿಸಿಸಿಐನ ಈ ಗುತ್ತಿಗೆ ಅವಧಿಯು ಒಂದು ವರ್ಷ ಇರುತ್ತದೆ. ಆ ವರ್ಷದಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮುಂದಿನ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಮುಂಬಡ್ತಿಯೂ ಸಿಗುತ್ತದೆ. ಗುತ್ತಿಗೆಗೆ ಒಳಪಡುವ ಆಟಗಾರರು ಅಂತಾರಾಷ್ಟ್ರೀಯ ಮತ್ತು ದೇಶೀಯ ಟೂರ್ನಿಗಳಿಗೆ ಲಭ್ಯವಾಗಲಿದ್ದಾರೆ. ಬಿಸಿಸಿಐ ವ್ಯಪ್ತಿಗೆ ಒಳಪಡುವ ಆಟಗಾರರು ಎನ್ಒಸಿ ಇಲ್ಲದೆ ವಿದೇಶಿ ಲೀಗ್ಗಳಲ್ಲಿ ಭಾಗವಹಿಸಲು ಅನುಮತಿ ಇರಲ್ಲ. ಒಪ್ಪಂದ ಪಡೆದ ಆಟಗಾರರಿಗೆ ಐಪಿಎಲ್ ಹರಾಜಿನಲ್ಲಿ ಬಂಪರ್ ಲಾಟರಿ ಹೊಡೆಯುವ ಸಾಧ್ಯತೆ ಇದೆ.
ಬಿಸಿಸಿಐ ಒಪ್ಪಂದ ಪಡೆಯಲು ಅರ್ಹತೆ ಏನು?
ಕೇಂದ್ರ ಗುತ್ತಿಗೆ ಪಡೆಯಲು ಕೆಲವು ಮಾನದಂಡಗಳಿವೆ. ನಿಗದಿತ ಅವಧಿಯಲ್ಲಿ ಕನಿಷ್ಠ 3 ಟೆಸ್ಟ್ ಅಥವಾ 8 ಏಕದಿನ ಅಥವಾ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದರೆ ಗುತ್ತಿಗೆ ಪಡೆಯಲು ಅರ್ಹರಾಗಿರುತ್ತಾರೆ. ಸೆಲೆಕ್ಟರ್ಸ್ ಮತ್ತು ಬಿಸಿಸಿಐ ಅಧಿಕಾರಿಗಳು ಆಟಗಾರರ ಗುತ್ತಿಗೆಯನ್ನು ನಿರ್ಧರಿಸಲಿದ್ದಾರೆ.
ಆದರೆ ಬಿಸಿಸಿಐ ಮತ್ತು ಸೆಲೆಕ್ಟರ್ಗಳ ಮಾತನ್ನು ನಿರ್ಲಕ್ಷಿಸಿದರೆ ಅಂತಹ ಆಟಗಾರರನ್ನು ಗುತ್ತಿಗೆಯಿಂದ ಕಿತ್ತು ಹಾಕಲಾಗುತ್ತದೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದ್ದು ಇದೇ ಕಾರಣಕ್ಕೆ. ಗುತ್ತಿಗೆ ಕಳೆದುಕೊಂಡ ಆಟಗಾರರಲ್ಲಿ ಅಜಿಂಕ್ಯ ರಹಾನೆ, ಶಿಖರ್ ಧವನ್, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಯುಜ್ವೇಂದ್ರ ಚಹಲ್ ಸಹ ಇದ್ದಾರೆ.
ಆಟಗಾರರ ವಾರ್ಷಿಕ ಒಪ್ಪಂದದ ನೂತನ ಪಟ್ಟಿ
ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ (ಬಡ್ತಿ).
ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (5 ಕ್ರಿಕೆಟಿಗರು): ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (17 ಕ್ರಿಕೆಟಿಗರು): ರಿಂಕು ಸಿಂಗ್ (ಹೊಸ ಸೇರ್ಪಡೆ), ತಿಲಕ್ ವರ್ಮಾ (ಹೊಸ ಸೇರ್ಪಡೆ), ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟೀದಾರ್ (ಹೊಸ ಸೇರ್ಪಡೆ), ಸರ್ಫರಾಜ್ ಖಾನ್, ಧ್ರುವ್ ಜುರೆಲ್.