ಏನಿದು ಮಾಕ್ ಚಿಕನ್? ಸಸ್ಯಾಹಾರಿ ವಿರಾಟ್ ಕೊಹ್ಲಿ ಕೂಡಾ ಇದನ್ನು ಸೇವಿಸ್ತಾರಂತೆ, ಇದನ್ನು ಮಾಡೋದು ಹೇಗೆ ನೋಡಿ
ವಿರಾಟ್ ಕೊಹ್ಲಿ ಏನೇ ಮಾಡಿದರೂ ಅದನ್ನು ಜನರು ಅನುಸರಿಸುತ್ತಾರೆ. ಅದರ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಸಸ್ಯಾಹಾರಿಯಾಗಿರುವ ವಿರಾಟ್ ಮಾಕ್ ಚಿಕನ್ ಕುರಿತು ಮಾತನಾಡಿದ ನಂತರ, ಇದೇನು ಎಂಬ ಕುತೂಹಲ ಕೂಡಾ ಜನರಿಗಿದೆ.

ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಶುದ್ಧ ಸಸ್ಯಾಹಾರಿಗಳು. ಹೀಗಾಗಿ ಅವರು ಮಾಂಸಾಹಾರ ಸೇವನೆ ಮಾಡುವುದಿಲ್ಲ. ತಮ್ಮ ಫಿಟ್‌ನೆಸ್ ಹಾಗೂ ಆರೋಗ್ಯದ ವಿಷಯದಲ್ಲಿ ವಿರಾಟ್ ಎಂದಿಗೂ ರಾಜಿ ಮಾಡಿಕೊಳ್ಳುವವರಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿರುವ ವಿಷಯ. ಸಮರ್ಪಕ ಆಹಾರಕ್ರಮ ಅನುಸರಿಸುವ ಕೊಹ್ಲಿ, ತಮ್ಮ 35ರ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. ತಮ್ಮ ಫಿಟ್‌ನೆಸ್‌ಗೆ ಪೂರಕವಾಗಿರುವ ಸಲುವಾಗಿಯೇ ಅವರು ಮಾಂಸಾಹಾರದಿಂದ ದೂರ ಉಳಿದಿದ್ದಾರೆ.
ಮಾಂಸಾಹಾರ ತಿನ್ನದಿದ್ದರೂ ಕೊಹ್ಲಿ ಮಾಕ್ ಚಿಕನ್ ತಿನ್ನುತ್ತಾರಂತೆ. ಅರೇ, ಇದೇನಿದು, ವೆಜಿಟೇರಿಯನ್ ಆಗಿ ಚಿಕನ್ ತಿನ್ನಲು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಸಾಮಾನ್ಯವಾಗಿ, ಸಸ್ಯಾಹಾರಿ ಆಹಾರವನ್ನು ಅನುಸರಿಸುವ ಜನರು ಪ್ರಾಣಿಗಳಿಂದ ಬರುವ ಯಾವುದೇ ಪದಾರ್ಥಗಳನ್ನು ತಿನ್ನುವುದಿಲ್ಲ. ಹಾಗಿದ್ದರೆ, ವಿರಾಟ್ ಕೊಹ್ಲಿ ಸಸ್ಯಾಹಾರಿಯಾದರೂ ತಿನ್ನುವ ಚಿಕನ್ ಯಾವುದು? ಈ ಮಾಕ್ ಚಿಕನ್ ಕುರಿತು ಇಲ್ಲಿ ತಿಳಿಯೋಣ.
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಒಂದು ಬ್ರ್ಯಾಂಡ್. ಅವರು ಏನೇ ಮಾಡಿದರೂ ಅದರ ಬಗ್ಗೆ ಜನರಿಗೆ ಆಸಕ್ತಿ. ಹೀಗಾಗಿಯೇ ಅದು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತದೆ. ಸಸ್ಯಾಹಾರಿಯಾಗಿರುವ ವಿರಾಟ್, ಮಾಕ್ ಚಿಕನ್ ಕುರಿತು ಹೇಳಿದ್ದು ಕೂಡಾ ಎಲ್ಲೆಡೆ ಸುದ್ದಿಯಾಯ್ತು.
ಮಾಕ್ ಚಿಕನ್ ಎಂದರೇನು?
ಮಾಕ್ ಚಿಕನ್ ಎಂಬ ಹೆಸರೇ ಹೇಳುವಂತೆ ಇದು ನಕಲಿ ಚಿಕನ್. ಅಂದರೆ, ನಿಜವಾದ ಕೋಳಿ ಅಥವಾ ಚಿಕನ್‌ನಂತೆಯೇ ರುಚಿ ನೀಡುವ ಫೇಕ್ ಚಿಕನ್ ಇದು. ಇದಕ್ಕೊಂದು ಹೆಸರು ಇಡುವ ಸಲುವಾಗಿ ಅದನ್ನು ಮಾಕ್ ಚಿಕನ್ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಇದು ಮಾಂಸಾಹಾರ ಸೇವನೆ ಮಾಡದ ಸಸ್ಯಾಹಾರಿಗಳಿಗಾಗಿ ತಯಾರಿಸಲಾಗುವ, ಕೋಳಿಗೆ ಪರ್ಯಾಯ ಆಹಾರವಾಗಿದೆ. ಇದನ್ನು ಸೋಯಾ ಪ್ರೋಟೀನ್, ಸೀಟನ್, ಗೋಧಿ ಪ್ರೋಟೀನ್, ಹಲಸಿನಕಾಯಿ ಸೇರಿದಂತೆ ವಿವಿಧ ಸಸ್ಯಾಹಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ವಿವಿಧ ಮಸಾಲೆಗಳು ಹಾಗೂ ಫ್ಲೇವರ್‌ಗಳನ್ನು ಸೇರಿಸುವ ಮೂಲಕ ನಿಜವಾದ ಕೋಳಿ ಮಾಂಸದಂತೆಯೇ ರುಚಿ ಬರುವಂತೆ ಇದನ್ನು ತಯಾರಿಸುತ್ತಾರೆ. ಹೀಗಾಗಿ ಇದು ನಿಜವಾದ ಚಿಕನ್‌ನ ರೂಪ ಹಾಗೂ ರುಚಿ ನೀಡುತ್ತದೆ. ಕೆಲವು ಸಸ್ಯಾಹಾರಿಗಳು ಇದನ್ನೇ ಸೇವಿಸುತ್ತಾರೆ.
ಮಾಕ್ ಚಿಕನ್ ತಿನ್ನುವುದು ಏಕೆ?
ನಿಮಗೆ ತಿಳಿದಿರುವಂತೆಯೇ, ವಿರಾಟ್ ಕೊಹ್ಲಿ ಮೊದಲು ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಫಿಟ್‌ನೆಸ್ ವಿಷಯದಲ್ಲಿ ಜಾಗೃತರಾಗಿ ಸಸ್ಯಾಹಾರಿಯಾಗಿ ಬದಲಾದರು. ಅತ್ತ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಸೇರಿದಂತೆ ಹಲವಾರು ಕ್ರೀಡಾಪಟುಗಳು ಮಾಂಸಾಹಾರಿಗಳಿಂದ ಸಸ್ಯಾಹಾರಿಗಳಾಗಿ ಬದಲಾಗಿದ್ದಾರೆ. ಸಾಮಾನ್ಯರು ಕೂಡಾ ಮಾಂಸ ತಿನ್ನುವುದು ಕಡಿಮೆ ಮಾಡುತ್ತಾರೆ. ಆದರೆ, ಅವರಿಗೆ ಪ್ರೋಟೀನ್ ಹಾಗೂ ಎನರ್ಜಿ ಬೇಕು. ಅಂಥವರಿಗೆ ಈ ಮಾಕ್ ಚಿಕನ್ ಒಂದು ಆಯ್ಕೆ.
ಮಾಕ್ ಚಿಕನ್ ಆರೋಗ್ಯಕ್ಕೆ ಉತ್ತಮವೇ?
ಮಾಂಸ ಇಲ್ಲದಿರುವುದರಿಂದ ಇದರಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ. ಮಾಕ್ ಚಿಕನ್ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಉತ್ತಮ ಆಯ್ಕೆ ಇದು. ಡೀಪ್ ಫ್ರೈ ಮಾಡದಿದ್ದರೆ ಇದರಲ್ಲಿ ಕಡಿಮೆ ಕೊಬ್ಬು ಹೊಂದಿರುತ್ತದೆ.
ಈ ಅಪಾಯವೂ ಇದೆ
ಮಾಕ್ ಚಿಕನ್ ಸಂಸ್ಕರಿಸಿದ ಆಹಾರ. ಇದರಲ್ಲಿ ಪ್ರಿಸರ್ವೇಟಿವ್ಸ್, ಕೃತಕ ಸುವಾಸನೆ ಮತ್ತು ಹೆಚ್ಚಿನ ಪ್ರಮಾಣದ ಸೋಡಿಯಂ ಇರಬಹುದು. ನೀವು ಸಂಸ್ಕರಿಸಿದ ಆಹಾರ ತಿನ್ನದಿದ್ದರೆ ಮಾಕ್ ಚಿಕನ್ ತಿನ್ನುವ ಮುನ್ನ ಮತ್ತೊಮ್ಮೆ ಯೋಚಿಸಬೇಕು. ಪ್ಯಾಕ್ ಮಾಡಿದ ಮಾಂಸವು ಹೆಚ್ಚಿನ ಪ್ರಮಾಣದ ಸೋಡಿಯಂ ಹೊಂದಿರುವುದರಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಒಳ್ಳೆಯದಲ್ಲ.